ಇದೊಂದು ಮಿಸ್ಟೇಕ್ ಮಾಡಬಾರದಿತ್ತು ಅಲ್ಲು ಅರ್ಜುನ್​! ಈಗಿನ ಪರಿಸ್ಥಿತಿಗೆ ಇದೇ ಕಾರಣ | Allu Arjun Arrest

ವಿಜಯವಾಣಿ - 2024-12-13T174304.565
Published on

ಹೈದರಾಬಾದ್​: ಡಿ.04ರಂದು ತೆಲುಗು ಚಿತ್ರರಂಗದ​ ಸ್ಟಾರ್ ನಟ​ ಅಲ್ಲು ಅರ್ಜುನ್ ಅಭಿನಯದ ‘ಪುಷ್ಪ 2’ (Pushpa 2) ಸಿನಿಮಾ ಬಿಡುಗಡೆ ಸಂದರ್ಭದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ರೇವತಿ ಎಂಬ ಮಹಿಳಾ ಅಭಿಮಾನಿ ಮೃತಪಟ್ಟಿದ್ದರು. ಈ ಘಟನೆಯಡಿ ನಟನ ವಿರುದ್ಧ ಪ್ರಕರಣ ದಾಖಲಿಸಿಕೊಂಡ ತೆಲಂಗಾಣ ಪೊಲೀಸರು, ಇಂದು ಮಧ್ಯಾಹ್ನ ಅಲ್ಲು ಅರ್ಜುನ್​ರನ್ನು ಬಂಧಿಸಿರುವುದು ಸದ್ಯ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ.

ಸಂಧ್ಯಾ ಚಿತ್ರಮಂದಿರದಲ್ಲಿ ಹಮ್ಮಿಕೊಂಡಿದ್ದ 'ಪುಷ್ಪ-2' ಚಿತ್ರದ ಪ್ರೀಮಿಯರ್​ ಶೋ ವೇಳೆ ಉಂಟಾದ ಕಾಲ್ತುಳಿತದಲ್ಲಿ ಹೈದರಾಬಾದ್​ ಮೂಲದ ರೇವತಿ (39) ಮೃತಪಟ್ಟರೆ, ಪುತ್ರ ತೇಜ್ (9) ಗಂಭೀರವಾಗಿ ಗಾಯಗೊಂಡಿದ್ದರು. ಪತ್ನಿಯನ್ನು ಕಳೆದುಕೊಂಡ ರೇವತಿ ಪತಿ ಭಾಸ್ಕರ್​, ಘಟನೆ ನೆನೆದು ಕಣ್ಣೀರಿಟ್ಟಿದ್ದರು. ಇದೇ ವಿಷಯಕ್ಕೆ ಪ್ರತಿಕ್ರಿಯಿಸಿ ಮಾತನಾಡಿದ್ದ ಮೃತ ರೇವತಿ ಪತಿ, ನನ್ನ ಹೆಂಡತಿ ಸಾವಿಗೆ ಚಿತ್ರತಂಡದವರೇ ಕಾರಣ ಎಂದು ಹೇಳಿ, ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಪ್ರಕರಣ ಬೆನ್ನತ್ತಿದ ಪೊಲೀಸರು, ಇಂದು ಅಲ್ಲು ಅರ್ಜುನ್​ರನ್ನು ಬಂಧಿಸಿ, ಕೋರ್ಟ್​ ಮುಂದೆ ಹಾಜರುಪಡಿಸಿದರು. ಸದ್ಯ ನಟನನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಅಸಲಿಗೆ ಆದ ತಪ್ಪೇನು?

ಪ್ರೀಮಿಯರ್​ ಶೋ ಅಂದಮೇಲೆ ಅಲ್ಲಿ ಚಿತ್ರದ ನಾಯಕ, ನಾಯಕಿ ಸೇರಿದಂತೆ ಇಡೀ ಚಿತ್ರತಂಡವೇ ಚಿತ್ರಮಂದಿರಕ್ಕೆ ಆಗಮಿಸುತ್ತದೆ. ಅದರಲ್ಲೂ ಒಬ್ಬ ಪ್ಯಾನ್ ಇಂಡಿಯಾ ಸ್ಟಾರ್​ ಹಾಗೂ ಅಪಾರ ಅಭಿಮಾನಿಗಳನ್ನು ಹೊಂದಿರುವ ನಟ ಎಂದಮೇಲೆ ಅಲ್ಲಿ ಅಭಿಮಾನಿಗಳ ದಂಡು ಇದ್ದೇ ಇರುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಹೀಗಿರುವಾಗ ನಟನ ಆಗಮನದ ಹಿನ್ನೆಲೆ ಚಿತ್ರತಂಡ ಹಾಗೂ ಸಂಧ್ಯಾ ಥಿಯೇಟರ್​ ಮಾಲೀಕರು ಹೆಚ್ಚಿನ ಭದ್ರತಾ ವ್ಯವಸ್ಥೆಯನ್ನು ಮಾಡುವಲ್ಲಿ ಎಡವಿದರು. ಇದು ಕಾಲ್ತುಳಿತಕ್ಕೆ ಕಾರಣವಾಗಿ, ರೇವತಿ ಸಾವಿನ ಮೇಲೆ ಪರಿಣಾಮ ಬೀರಿತು ಎಂಬುದರಲ್ಲಿ ಅನುಮಾನವಿಲ್ಲ.

ಎಡವಿದ್ದೇ ಇಲ್ಲಿ

ನೆಚ್ಚಿನ ನಟನನ್ನು ನೇರವಾಗಿ ಕಣ್ತುಂಬಿಕೊಳ್ಳಬೇಕು, ಪಕ್ಕದಲ್ಲಿ ನಿಂತು ಒಂದು ಫೋಟೋ ಕ್ಲಿಕ್ಕಿಸಿಕೊಳ್ಳಬೇಕು ಎಂಬ ಮಹಾದಾಸೆ ಪ್ರತಿ ಫ್ಯಾನ್ಸ್​ಗೂ ಇರುತ್ತದೆ. ಇಂತಹ ಆಸೆಯಲ್ಲಿ ಚಿತ್ರಮಂದಿರಕ್ಕೆ ಬಂದವರು ಅಪಾರ ಮಂದಿ. ಈ ಸೂಕ್ಷ್ಮ ವಿಷಯವನ್ನು ಅರಿತು, ಬಿಗಿ ಬಂದೋಬಸ್ತ್ ಹಾಗೂ ಮುನ್ನೆಚ್ಚರಿಕೆ ವಹಿಸಬೇಕಿದ್ದ ಚಿತ್ರತಂಡ ಮತ್ತು ಸಂಧ್ಯಾ ಚಿತ್ರಮಂದಿರ ಮಾಲೀಕರು ಎಡವಿದ್ದೇ ಇಲ್ಲಿ. ಸದ್ಯ ಈ ಎಲ್ಲಾ ತಪ್ಪಿನಿಂದ ಇಂದು ಅಲ್ಲು ಅರ್ಜುನ್​ ಬಂಧನದಲ್ಲಿದ್ದಾರೆ. ತನ್ನದಲ್ಲದ ತಪ್ಪಿಗೆ ನಟ ಅರೆಸ್ಟ್​ ಆಗಿದ್ದೇ ಆದರೂ ಸೂಕ್ತ ಭದ್ರತೆ ಒದಗಿಸಲಾಗಿದೆಯೇ? ಇಲ್ಲವೇ? ಎಂಬುದರ ಬಗ್ಗೆ ಅಲ್ಲು ಅರ್ಜುನ್​ ಚಿತ್ರತಂಡದೊಂದಿಗೆ ಒಮ್ಮೆ ಚರ್ಚಿಸಿದ್ದರೆ ಇಂದು ಈ ಪರಿಸ್ಥಿತಿ ನಟನಿಗೆ ಬರುತ್ತಿರಲಿಲ್ಲ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net