ಅಲ್ಲು ಅರ್ಜುನ್​ ಬಂಧನದ ಹಿಂದಿನ ರಹಸ್ಯ ಬಯಲು! ಸೇಡಿನ ರಾಜಕಾರಣಕ್ಕೆ ಸಿಲುಕಿದ್ರಾ 'ಪುಷ್ಪ'!?

ವಿಜಯವಾಣಿ - 2024-12-13T164334.544
Published on

ಹೈದರಾಬಾದ್​: ಡಿ.04ರಂದು ತೆಲುಗು ಚಿತ್ರರಂಗದ​ ಸ್ಟಾರ್ ನಟ​ ಅಲ್ಲು ಅರ್ಜುನ್ ಅಭಿನಯದ ‘ಪುಷ್ಪ 2’ (Pushpa 2) ಚಿತ್ರದ ಬಿಡುಗಡೆ ಸಂದರ್ಭದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ರೇವತಿ ಎಂಬ ಮಹಿಳೆ ಮೃತಪಟ್ಟ ಘಟನೆ ಇಡೀ ಟಾಲಿವುಡ್​ ಚಿತ್ರರಂಗವನ್ನೇ ಬೆಚ್ಚಿಬೀಳಿಸಿತ್ತು. ಕಾಲ್ತುಳಿತದ ವೇಳೆ ರೇವತಿ (39) ಮೃತಪಟ್ಟರೆ, ಪುತ್ರ ತೇಜ್ (9) ಗಂಭೀರವಾಗಿ ಗಾಯಗೊಂಡಿದ್ದರು. ಸದ್ಯ ಈ ಪ್ರಕರಣದಡಿ ತೆಲಂಗಾಣ ಪೊಲೀಸರು ಅಲ್ಲು ಅರ್ಜುನ್​ರನ್ನು ಅವರ ನಿವಾಸದಲ್ಲಿಯೇ ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.

ಮತ್ತಷ್ಟು ಪುಷ್ಟಿ

ನಟನ ವಿರುದ್ಧ ದಾಖಲಾಗಿದ್ದ ಈ ಪ್ರಕರಣವನ್ನು ಬೆನ್ನತ್ತಿದ್ದ ಚಿಕ್ಕಡಪಲ್ಲಿ ಪೊಲೀಸರು ಇಂದು ಮಧ್ಯಾಹ್ನದ ನಂತರ ಅಲ್ಲು ಅರ್ಜುನ್​ರನ್ನು ಬಂಧಿಸಿದ್ದಾರೆ. ನಟನ ಬಂಧನ ಇದೀಗ ರಾಜಕೀಯ ತಿರುವು ಪಡೆದುಕೊಂಡಿದ್ದು, ಇದೆಲ್ಲದಕ್ಕೂ ಒಂದು ಗಟ್ಟಿಯಾದ ಲಿಂಕ್​ ಇರಬಹುದೇ? ಎಂಬ ಚರ್ಚೆಗಳು ಜಾಲತಾಣಗಳಲ್ಲಿ ಭುಗಿಲೆದ್ದಿವೆ. ಇನ್ನು ಈ ವಿಷಯಕ್ಕೆ ಮತ್ತಷ್ಟು ಪುಷ್ಟಿ ನೀಡಿರುವುದು ರಾಜಕೀಯ ನಾಯಕ ಕೆಟಿಆರ್ ಮತ್ತು ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಹೇಳಿಕೆಗಳು.

ನನ್ನ ಕೈವಾಡವಿಲ್ಲ

ಅಲ್ಲು ಅರ್ಜುನ್​ ಬಂಧನದ ಬೆನ್ನಲ್ಲೇ ಟ್ವೀಟ್​ ಮಾಡಿ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ರೇವಂತ್ ರೆಡ್ಡಿ, ಇಂತಹ ವಿಷಯದಲ್ಲಿ ಕಾನೂನು ತನ್ನ ಕ್ರಮವನ್ನು ತೆಗೆದುಕೊಳ್ಳುತ್ತದೆ. ಅಲ್ಲು ಅರ್ಜುನ್ ಬಂಧನದಲ್ಲಿ ತನ್ನ ಕೈವಾಡವಿಲ್ಲ. ಕಾನೂನಿನ ಮುಂದೆ ಎಲ್ಲರೂ ಸಮಾನರು. ಯಾರೂ ಕೂಡ ಇಲ್ಲಿ ಕಾನೂನಿಗಿಂತ ದೊಡ್ಡವರಲ್ಲ ಎಂದು ಒತ್ತಿ ಹೇಳಿದ್ದಾರೆ. ಒಂದೆಡೆ ಇದಿಷ್ಟು ಸಿಎಂ ಟಕ್ಕರ್​ ಆದರೆ, ರೇವಂತ್​ ರೆಡ್ಡಿ ವಿರುದ್ಧ ಕೆಟಿಆರ್​ ಅವರ ಕಟು ಮಾತುಗಳು ಮತ್ತೊಂದೆಡೆ.

ಈ ಲಾಜಿಕ್​ ಅಡಿ

ಮಾಜಿ ಸಚಿವ ಹಾಗೂ ಬಿಆರ್‌ಎಸ್ ಕಾರ್ಯಾಧ್ಯಕ್ಷ ಕೆಟಿಆರ್, "ಅಲ್ಲು ಅರ್ಜುನ್ ಬಂಧನದಲ್ಲಿ ಪೊಲೀಸರು ತೆಗೆದುಕೊಂಡ ಕ್ರಮಗಳು ಒಪ್ಪುವಂತದ್ದಲ್ಲ. ನಟನ ಬಂಧನ ಸರ್ಕಾರದ ಅಭದ್ರತೆಯ ಸಂಕೇತವಾಗಿದೆ. ಸಂಧ್ಯಾ ಥಿಯೇಟರ್​ನಲ್ಲಿ ನಡೆದ ಕಾಲ್ತುಳಿತ ಘಟನೆಗೆ ಅಲ್ಲು ಅರ್ಜುನ್​ ನೇರ ಹೊಣೆಯಲ್ಲದಿದ್ದರೂ ನಟನನ್ನು ಒಬ್ಬ ಕ್ರಿಮಿನಲ್ ಎಂಬಂತೆ ನಡೆಸಿಕೊಂಡಿದ್ದಾರೆ. ಈ ಲಾಜಿಕ್​ ನೋಡಿ ಹೇಳುವುದಾದರೆ ರಾಜ್ಯದಲ್ಲಿ ಇದೇ 'ಹೈಡ್ರಾ' ಧ್ವಂಸದಿಂದ ಸಂಭವಿಸಿದ ಸಾವುಗಳಿಗೆ ರೇವಂತ್​ನನ್ನು ಬಂಧಿಸಬಹುದಿತ್ತು. ಏಕೆ ಬಂಧಿಸಿಲ್ಲ?" ಎಂದು ಕೆಟಿಆರ್​ ಪ್ರಶ್ನಿಸಿದ್ದಾರೆ.

'ಪವರ್​'​ ಜೆತಗಿನ ಮನಸ್ತಾಪ?

ಕಳೆದ ಬಾರಿಯ ಚುನಾವಣೆಯಲ್ಲಿ ಪವರ್​ಸ್ಟಾರ್​ ಪವನ್ ಕಲ್ಯಾಣ್​ ವಿರುದ್ಧವೇ ಪ್ರಚಾರ ಮಾಡಿದ್ದ ಅಲ್ಲು ಅರ್ಜುನ್​ ನಡೆಯನ್ನು ಪವನ್​​ ಅಭಿಮಾನಿಗಳು ಖಂಡಿಸಿದ್ದರು. ಈ ವಿಷಯ ಅಂದು ತೀವ್ರ ಟೀಕೆಗಳಿಗೆ ಗುರಿಯಾಗಿತ್ತು. ಇದರ ಮಧ್ಯೆ ಮೆಗಾಸ್ಟಾರ್​ ಕುಟುಂಬ ಮತ್ತು ಅಲ್ಲು ಅರ್ಜುನ್​ ಸಂಬಂಧದಲ್ಲಿ ಕೊಂಚ ಸಮಸ್ಯೆ ಇರುವುದು ಸ್ಪಷ್ಟವಾಗಿದೆ. ಇದಕ್ಕೆ 'ಪುಷ್ಪ 2' ಚಿತ್ರ ಬಿಡುಗಡೆಯ ಸಮಯದಲ್ಲಿ ಅಲ್ಲು ಮತ್ತು ರಾಮ್​ ಚರಣ್​ ಫ್ಯಾನ್ಸ್​ ನಡುವೆ ನಡೆದ ಜಾಲತಾಣದ ಕಿತ್ತಾಟವೇ ಬಲವಾದ ಕಾರಣ.

ಅಲ್ಲು ಅರ್ಜುನ್​ರನ್ನು ಸಮರ್ಥಿಸಿಕೊಂಡಿರುವ ಕೆಟಿಆರ್, ರೇವಂತ್ ರೆಡ್ಡಿ ಸರ್ಕಾರ ನಟನ ಬಂಧನದಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂಬುದನ್ನು ಪರೋಕ್ಷವಾಗಿ ಒತ್ತಿ ಹೇಳಿದ್ದಾರೆ. ಇಬ್ಬರ ಮಾತುಗಳು ಇದೀಗ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದ್ದು, ಇದು ರಾಜಕೀಯ ಪಿತೂರಿಯೇ ಇರಬಹುದು ಎಂಬ ಮಾತುಗಳು ಸದ್ಯ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net