ಬೆಳ್ಳಗಿರುವ ಹೀರೋಯಿನ್​ ಬೇಕಿಲ್ಲ... ಸಾಯಿ ಪಲ್ಲವಿ ಕುರಿತು ಅಲ್ಲು ಅರವಿಂದ್​ ಓಪನ್ ಟಾಕ್​ | Sai Pallavi

ವಿಜಯವಾಣಿ - 2025-02-06T163515.516
Published on

Sai Pallavi: ಚಂದೂ ಮೊಂಡೆಟಿ ನಿರ್ದೇಶಿಸಿರುವ ಹಾಗೂ ತೆಲುಗು ನಟ ನಾಗ ಚೈತನ್ಯ ಮತ್ತು ನಟಿ ಸಾಯಿ ಪಲ್ಲವಿ ನಟಿಸಿರುವ ಬಹುನಿರೀಕ್ಷಿತ 'ಥಂಡೆಲ್' ಸಿನಿಮಾ ಇದೇ ಫೆ.07ರಂದು ತೆರೆಕಾಣಲು ಸಜ್ಜಾಗಿದೆ. ಈ ಚಿತ್ರವನ್ನು ಬನ್ನಿ ವಾಸು ಮತ್ತು ಅಲ್ಲು ಅರವಿಂದ್ ಸಹಯೋಗದಲ್ಲಿ ನಿರ್ಮಾಣ ಮಾಡಲಾಗಿದೆ. ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಟ್ರೇಲರ್ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದ್ದು, ಸಿನಿಮಾ ನೋಡುಗರ ಮೆಚ್ಚುಗೆಗೆ ಕಾರಣವಾಗಲಿದೆ ಎಂಬ ನಿರೀಕ್ಷೆ ಹೆಚ್ಚಾಗಿದೆ.

ಚಿತ್ರದ ಟ್ರೇಲರ್​, ಹಾಡುಗಳು ಪ್ರೇಕ್ಷಕರಿಂದ ಈಗಾಗಲೇ ವ್ಯಾಪಕ ಮೆಚ್ಚುಗೆ ಗಳಿಸಿದ ಬೆನ್ನಲ್ಲೇ ಸಿನಿಮಾ ಕುರಿತಂತೆ ಒಂದಷ್ಟು ವಿಚಾರಗಳನ್ನು ಅಲ್ಲು ಅರವಿಂದ್ ಮುಕ್ತವಾಗಿ ಹಂಚಿಕೊಂಡರು. ಈ ವೇಳೆ ಚಿತ್ರದ ನಾಯಕ ನಟಿ ಸಾಯಿ ಪಲ್ಲವಿ ಬಗ್ಗೆ ಕೆಲವು ಕುತೂಹಲಕಾರಿ ವಿಷಯವನ್ನು ಬಹಿರಂಗಪಡಿಸಿದರು.

ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿದ ಅಲ್ಲು ಅರವಿಂದ್, "ಈ ಚಿತ್ರಕ್ಕೆ ಸಾಯಿ ಪಲ್ಲವಿ ಅವರ ಆಯ್ಕೆ ನನ್ನ ನಿರ್ಧಾರ. ಅದು ವಾಣಿಜ್ಯ ನಿರ್ಧಾರವೂ ಆಗಿತ್ತು. ಏಕೆಂದರೆ, ಮುಂಬೈಗೆ ಹೋಗಿ ಈ ಪಾತ್ರಕ್ಕಾಗಿ ಯಾರನ್ನೂ ಕರೆತರಲು ನನಗೆ ಇಷ್ಟವಿರಲಿಲ್ಲ. ಮುಂಬೈನ ಬೆಳ್ಳಗಿನ ಬ್ಯೂಟಿಗಳು ಈ ಪಾತ್ರಕ್ಕೆ ಜೀವ ತುಂಬಿಸಲು ಸಾಧ್ಯವಿಲ್ಲ ಎಂದು ವೈಯಕ್ತಿಕವಾಗಿ ನನಗೆ ಅನಿಸಿತು. ಸಾಯಿ ಪಲ್ಲವಿ ನಟಿಸಿರುವ ಪಾತ್ರ ಬಹಳಷ್ಟು ಭಾವನೆಗಳನ್ನು ಹೊಂದಿರುವ ಪಾತ್ರ. ಪ್ರೇಕ್ಷಕರು ಅದನ್ನು ಶಾಶ್ವತವಾಗಿ ನೆನಪಿಸಿಕೊಳ್ಳುವಂತದ್ದು. ಅಂತಹ ಒಳ್ಳೆಯ ಪಾತ್ರವನ್ನು ಪ್ರಾಮಾಣಿಕವಾಗಿ ಮಾಡಬೇಕು" ಎಂದರು.

"ಈ ಪಾತ್ರಕ್ಕೆ ಸಾಯಿ ಪಲ್ಲವಿ 100ಕ್ಕೆ 100ರಷ್ಟು ನ್ಯಾಯ ಒದಗಿಸಬಲ್ಲರು ಎಂದು ನನಗೆ ಗೊತ್ತಿತ್ತು. ಪಲ್ಲವಿ ಒಬ್ಬರು ಅಸಾಧಾರಣ ನಟಿ. ಅದಕ್ಕಾಗಿಯೇ ನಾವು ಅವರನ್ನು ಆಯ್ಕೆ ಮಾಡಿದ್ದೇವೆ" ಎಂದು ಸೌತ್​ ಬ್ಯೂಟಿ ಬಗ್ಗೆ ಗುಣಗಾನ ಮಾಡಿದರು. "ಸಾಯಿ ಪಲ್ಲವಿ ಕಳೆದ ಕೆಲವು ದಿನಗಳಿಂದ ಜ್ವರ ಮತ್ತು ಶೀತದಿಂದ ಬಳಲುತ್ತಿದ್ದಾರೆ. ಅದಾಗ್ಯೂ, ಚಿತ್ರಕ್ಕೆ ಸಂಬಂಧಿಸಿದ ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ಜ್ವರ ಅವರನ್ನು ಇನ್ನಷ್ಟು ದುರ್ಬಲಗೊಳಿಸಿದ ಕಾರಣ, ವೈದ್ಯರು ಕನಿಷ್ಠ ಎರಡು ದಿನಗಳ ಕಾಲ ಬೆಡ್ ರೆಸ್ಟ್ ತೆಗೆದುಕೊಳ್ಳುವಂತೆ ಸಲಹೆ ನೀಡಿದ್ದಾರೆ. ಹೀಗಾಗಿ ಅವರು ಮುಂಬೈನಲ್ಲಿ ನಡೆದ ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ" ಎಂದು ಹೇಳಿದರು,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net