

ಬೆಂಗಳೂರು: ರಾಜ್ಯ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ 2020ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳ ತಾತ್ಕಾಲಿಕ ಪ್ರವೇಶಪತ್ರಗಳನ್ನು ಆನ್ಲೈನ್ನಲ್ಲಿ ಬಿಡುಗಡೆ ಮಾಡಿದೆ. ಅದನ್ನು ಡೌನ್ಲೋಡ್ ಮಾಡಿಕೊಂಡು, ತಿದ್ದುಪಡಿಗಳಿದ್ದಲ್ಲಿ ಅದನ್ನು ಸರಿಪಡಿಸಿ ಅಪ್ಡೇಟ್ ಮಾಡಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಸೂಚಿಸಲಾಗಿದೆ. ಅಪ್ಡೇಟ್ಗೆ ಈಗಾಗಲೇ ನಿಗದಿಪಡಿಸಿದ್ದ ಗಡುವು ಜ.20ರವರೆಗೆ ವಿಸ್ತರಣೆಗೊಂಡಿದೆ.
ಶಾಲಾ ಮುಖ್ಯಸ್ಥರು http://kseeb.kar.nic.in/ ವೆಬ್ಸೈಟ್ ಮೂಲಕ ತಾತ್ಕಾಲಿಕ ಪ್ರವೇಶಪತ್ರ ಡೌನ್ಲೋಡ್ ಮಾಡಿಕೊಳ್ಳಬೇಕಿದೆ. ಅಗತ್ಯವಿದ್ದಲ್ಲಿ ವಿದ್ಯಾರ್ಥಿಗಳ ವೈಯಕ್ತಿಕ ವಿವರವನ್ನು ತಿದ್ದುಪಡಿ ಮಾಡಿ ಅಪ್ಡೇಟ್ ಮಾಡಬೇಕು. ಎಸ್ಎಟಿಎಸ್ ನಂಬರ್, ಖಾಸಗಿ ಅಭ್ಯರ್ಥಿಗಳು ರೆಫರೆನ್ಸ್ ಸಂಖ್ಯೆ, ಪುನರಾವರ್ತಿತ ಅಭ್ಯರ್ಥಿಗಳು ನೋಂದಣಿ ಸಂಖ್ಯೆ ನಮೂದಿಸಿ ಅಗತ್ಯವಿದ್ದಲ್ಲಿ ತಿದ್ದುಪಡಿ ಮಾಡಬಹುದು.
ಮೊದಲು ಎಸ್ಎಟಿಎಸ್ ಡೇಟಾಬೇಸ್ನಲ್ಲಿ ತಿದ್ದುಪಡಿ ಮಾಡಿ ನಂತರ ಮಂಡಳಿಯ ಶಾಲಾ ಲಾಗಿನ್ನಲ್ಲಿ ಕ್ಲಿಕ್ ಮಾಡಿ ಸೇವ್ ಮಾಡಬೇಕಿದೆ. ಪುನರಾವರ್ತಿತ ಅಭ್ಯರ್ಥಿಗಳಿಗೆ ಫೋಟೋ ಮತ್ತು ಸಹಿಯನ್ನು ಮಾತ್ರ ತಿದ್ದುಪಡಿ ಮಾಡಲು ಅವಕಾಶ ಇದೆ. ಈ ಎಲ್ಲ ಅಂಶ ಹೊರತುಪಡಿಸಿ ವಿದ್ಯಾರ್ಥಿಯು ಮಾಧ್ಯಮ ಹಾಗೂ ಇತರೆ ವಿಷಯಗಳಲ್ಲಿ ಏನಾದರೂ ಬದಲಾವಣೆ ಮಾಡುವುದಿದ್ದಲ್ಲಿ, ನೋಡಲ್ ಅಧಿಕಾರಿಗಳಿಗೆ ಜ.25ರೊಳಗೆ ಲಿಖಿತ ಮನವಿ ಸಲ್ಲಿಸಬೇಕು.