

ಬೆಂಗಳೂರು: ಕರೊನಾ ಸೋಂಕು ನಿಯಂತ್ರಣ ಉದ್ದೇಶದಿಂದ ಸಾರ್ವಜನಿಕ ಸ್ಥಳದಲ್ಲಿ ಉಗುಳಿದರೆ 1000 ರೂ. ದಂಡ ವಿಧಿಸುತ್ತಿರುವ ರಾಜ್ಯ ಸರ್ಕಾರವೀಗ, ಉಗುಳುವ ಪಾನ್ ಮಸಾಲಾ ಹಾಗೂ ತಂಬಾಕು ಮಾರಾಟಕ್ಕೆ ಅನುಮತಿ ಕೊಟ್ಟಿರುವುದರ ವಿರುದ್ಧ ಪ್ರಜ್ಞಾವಂತ ನಾಗರಿಕರಿಂದ ಭಾರಿ ವಿರೋಧ ವ್ಯಕ್ತವಾಗಿದೆ.
ಗುಟ್ಖಾ ತಿಂದು ಎಲ್ಲೆಂದರಲ್ಲಿ ಉಗಿಯುವುದರಿಂದ ಕರೊನಾ ಹರಡಲು ಕಾರಣವಾಗುವುದರಿಂದ ಮಾರಾಟ ಅನುಮತಿ ರದ್ದುಪಡಿಸಬೇಕೆಂಬ ಕೂಗು ಕೇಳಿಬಂದಿದೆ. ತಂಬಾಕು ಸಹಿತ ಗುಟ್ಖಾ ಮಾರಾಟವನ್ನು ಈಗಾಗಲೇ ಕೇಂದ್ರ ಸರ್ಕಾರ ನಿಷೇಧಿಸಿದ್ದರೂ ತಂಬಾಕು ಹಾಗೂ ಪಾನ್ ಮಸಾಲಾವನ್ನು ಪ್ರತ್ಯೇಕ ಪ್ಯಾಕೇಟ್ಗಳಲ್ಲಿ ಮಾರಾಟ ಮಾಡುತ್ತಿದ್ದಾರೆ. ಜಾಗತಿಕ ತಂಬಾಕು ಸಮೀಕ್ಷೆ ಪ್ರಕಾರ, ಪಾನ್ ಮತ್ತು ಗುಟ್ಖಾ ಚಟಕ್ಕೆ ಅಂಟಿಕೊಂಡವರ ಸಂಖ್ಯೆ ದೇಶದಲ್ಲಿ ಕೋಟ್ಯಂತರ ಇದೆ. ಕ್ಯಾನ್ಸರ್ ಸೇರಿ ಹಲವು ರೋಗಗಳನ್ನು ಬಳುವಳಿಯಾಗಿ ಕೊಡುತ್ತಿರುವ ಈ ಗುಟ್ಖಾ ಚಟ ಬಿಡಿಸಿ, ಮಾನಸಿಕವಾಗಿ ಅವರನ್ನು ಸಬಲಗೊಳಿಸುವುದು ಈಗಲೂ ಸವಾಲಾಗಿದೆ. ತಂಬಾಕು ತಿಂದು ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದರಿಂದ ಲಾಲಾ ರಸದಲ್ಲಿರುವ ಸೋಂಕು ಮತ್ತೊಬ್ಬರಿಗೆ ಹರಡುವ ಸಾಧ್ಯತೆಗಳು ಹೆಚ್ಚಾಗಿವೆ. ಈ ಕಾರಣಕ್ಕೆ ಈಗಾಗಲೇ ಹಲವು ರಾಜ್ಯಗಳು ಅತ್ಯಂತ ಪರಿಣಾಮಕಾರಿ ರೀತಿಯಲ್ಲಿ ಗುಟ್ಖಾ ಮಾರಾಟ ನಿಷೇಧ ಕಾಯ್ದೆ ಜಾರಿಗೆ ತಂದಿವೆ. ಕರೊನಾ ಸೋಂಕು ಕೂಡ ಮನುಷ್ಯ ಸೀನದರೆ, ಕೆಮ್ಮಿದರೆ, ಉಗುಳುವ ಎಂಜಲಿನಿಂದ ಹರಡುತ್ತದೆ. ಇಂಥ ಗಂಭೀರ ಪರಿಸ್ಥಿತಿಯಲ್ಲಿ ತಂಬಾಕು ಮಾರಾಟಕ್ಕೆ ಅನುಮತಿ ಕೊಡಬೇಕಿತ್ತೆ ಎಂದು ಹಲವರು ಪ್ರಶ್ನಿಸಿದ್ದಾರೆ.
ರಾಜ್ಯದಲ್ಲಿ ದಿನಕ್ಕೆ 100 ಕೋಟಿ ರೂ.ಗೂ ಅಧಿಕ ಗುಟ್ಖಾ ಮಾರಾಟ ವಹಿವಾಟು ನಡೆಯುತ್ತದೆ. ಬೆಂಗಳೂರು, ಬೆಳಗಾವಿ, ಹುಬ್ಬಳ್ಳಿ, ಧಾರವಾಡ, ಹಾಸನ, ತುಮಕೂರು, ಕೋಲಾರ ಭಾಗದಲ್ಲಿ ಗುಟ್ಖಾ ತಯಾರಿಕೆ ಹಾಗೂ ಮಾರಾಟ ಜಾಸ್ತಿ. ರಾಜ್ಯದಲ್ಲಿ ಇತರ ವ್ಯವಸನಗಳಿಗೆ ಹೋಲಿಸಿದರೆ ಗುಟ್ಖಾ ಹಾಗೂ ಪಾನ್ ಮಸಾಲಾಕ್ಕೆ ಬಲಿಯಾದವರ ಸಂಖ್ಯೆಯೇ ಹೆಚ್ಚು ಎಂದು ತಜ್ಞರು ಹೇಳಿದ್ದಾರೆ.
ಲಾಕ್ಡೌನ್ನಿಂದ ಪಾನ್ ಮಸಾಲಾ ಹಾಗೂ ತಂಬಾಕು ಸಿಗದೆ ಚಟದಿಂದ ನಿಧಾನವಾಗಿ ದೂರ ಬರುತ್ತಿದ್ದರು. ಆದರೀಗ ಮತ್ತೆ ಮಾರಾಟಕ್ಕೆ ಅನುಮತಿ ಕೊಟ್ಟಿರುವುದರಿಂದ ಚಟಕ್ಕೆ ದಾಸರಾಗುತ್ತಾರೆ. ಈ ಹಿಂದೆ ವಿಶ್ವ ಆರೋಗ್ಯ ಸಂಸ್ಥೆ ನಡೆಸಿದ ಜಾಗತಿಕ ತಂಬಾಕು ಸಮೀಕ್ಷೆಯಲ್ಲಿ ಗುಟ್ಖಾ ದಾಸರಾದವರ ಪೈಕಿ ಶೇ.40 ವ್ಯಸನನಿಗಳು ಶಾಶ್ವತವಾಗಿ ತ್ಯಜಿಸಲಿದ್ದಾರೆ ಎಂಬುದು ಕಂಡುಬಂದಿದೆ. ಈ ಆಧಾರದಲ್ಲಿ ಈ ಹಿಂದೆ ಗುಟ್ಖಾ ಮಾರಾಟವನ್ನು ನಿಷೇಧಿಸಲಾಗಿತ್ತು. ಅಡಕೆ ಬೆಳೆಗಾರರಿಗೆ ಕೊಂಚ ನಷ್ಟ ಉಂಟಾಗಿದ್ದರೂ ಕೋಟ್ಯಂತರ ಜನರ ಆರೋಗ್ಯದ ಹಿತದೃಷ್ಟಿಯಿಂದ ಇದೊಂದು ಉತ್ತಮ ಬೆಳವಣಿಗೆ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿಬಂದಿತ್ತು.
ಗುಟ್ಖಾ ಜಗಿದು ಸಾರ್ವಜನಿಕ ಪ್ರದೇಶದಲ್ಲಿ ಉಗುಳುವುದರಿಂದ ಅಲ್ಲಿ ಓಡಾಡುವ ವರ ಮೇಲೆ ಪರಿಣಾಮ ಬೀರುತ್ತದೆ. | ಕೆ.ವಿ. ಧನಂಜಯ, ಸುಪ್ರೀಂಕೋರ್ಟ್ ವಕೀಲರು
ವರ್ಷಕ್ಕೆ 10 ಸಾವಿರಕ್ಕೂ ಹೆಚ್ಚು ಜನರು ತಂಬಾಕು ಉತ್ಪನ್ನ, ಗುಟ್ಕಾ ಸೇವನೆಯಿಂದ ಸಾವನ್ನಪ್ಪುತ್ತಿದ್ದಾರೆ. 17 ಕೋಟಿ ಜನ ಗುಟ್ಕಾ ಬಳಕೆದಾರರಿದ್ದಾರೆ. ಗುಟ್ಕಾ ಸೇವಿಸಿ ಉಗುಳಿದ ಪ್ರದೇಶದಲ್ಲಿ ಸಾವಿರಾರು ವೈರಸ್ಗಳು ಉತ್ಪತ್ತಿಯಾಗುತ್ತದೆ.