ಬಿಜೆಪಿ ಜತೆ ಮೈತ್ರಿ; ಎರಡು ಕ್ಷೇತ್ರಕ್ಕೆ ಇಷ್ಟು ಪ್ರಯತ್ನ ಪಡಬೇಕಿತ್ತೆ?- ಕುಮಾರಸ್ವಾಮಿ ಪ್ರಶ್ನೆ

kumaraswamy
Published on

ಬೆಂಗಳೂರು: ಹಾಸನ, ಮಂಡ್ಯ ಹಾಗೂ ಕೋಲಾರ ಲೋಕಸಭೆ ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ನಿಲ್ಲಿಸುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಘೋಷಣೆ ಮಾಡಿದರು.

ಜೆ.ಪಿ.ಭವನದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ನಮ್ಮ ಪಕ್ಷದಲ್ಲಿ ಯಾವುದೇ ಗೊಂದಲಗಳು ಇಲ್ಲ. ಮೂರು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಹಾಕುತ್ತೇವೆ ಎಂದರು.

ನಾವು ಕೇಳಿರೋದು 3-4 ಕ್ಷೇತ್ರ

ಸೀಟು ಹಂಚಿಕೆ ಬಗ್ಗೆ ಅಧಿಕೃತವಾಗಿ ಘೋಷಣೆ ಆಗುವವರೆಗೂ ಮಾತನಾಡುವುದಿಲ್ಲ. ನಾವು ಬಿಜೆಪಿಯಿಂದ 6-7 ಸೀಟು ಕೇಳಿಲ್ಲ. ನಾವು ಕೇಳಿರುವುದೇ 3-4 ಸೀಟು ಮಾತ್ರ. ನಮ್ಮ ಶಕ್ತಿ ಅವರಿಗೂ ಗೊತ್ತಿದೆ. 3-4 ಸೀಟು ಕೊಡುತ್ತಾರೆ ಎಂಬ ನಂಬಿಕೆ ಇಟ್ಟುಕೊಂಡಿದ್ದೇನೆ. ಕೇವಲ ಎರಡು ಕ್ಷೇತ್ರ ತೆಗೆದುಕೊಳ್ಳೋಕೆ ನಾನು ಇಷ್ಟು ಪ್ರಯತ್ನ ಮಾಡಬೇಕಿತ್ತಾ? ಇಷ್ಟೆಲ್ಲಾ ಹೊಂದಾಣಿಕೆ ಬೇಕಾ ನನಗೆ? ಎಂದು ಬೇಸರ ವ್ಯಕ್ತಪಡಿಸಿದರು.

18 ಕ್ಷೇತ್ರಗಳಲ್ಲಿ ಬಿಜೆಪಿಗೆ ಅನುಕೂಲ

ಹಾನಸ, ಮಂಡ್ಯದಲ್ಲಿ ಸ್ವತಂತ್ರವಾಗಿ ನಮ್ಮ ಅಭ್ಯರ್ಥಿಗಳು ಗೆಲ್ಲುತ್ತಾರೆ. ತ್ರಿಕೋನ ಸ್ಪರ್ಧೆ ಆದರೆ ಸುಲಭವಾಗಿ ನಾವು ಗೆಲ್ಲುತ್ತೇವೆ. ಆದರೆ 18 ಕ್ಷೇತ್ರಗಳಲ್ಲಿ ಬಿಜೆಪಿಗೆ ನಮ್ಮ ಪಕ್ಷದಿಂದ ಅನುಕೂಲ ಆಗಲಿದೆ ಎಂದು ತಿಳಿಸಿದರು.

ಸಾಧಕ-ಬಾಧಕಗಳಿಗೆ ಬಿಜೆಪಿ ಜವಾಬ್ದಾರಿ

ನಮ್ಮ ಪಕ್ಷದ ಮುಖಂಡರು ಜೆಡಿಎಸ್- ಬಿಜೆಪಿ ಮೈತ್ರಿಯಿಂದ ಜೆಡಿಎಸ್‌ಗೆ ದೊಡ್ಡ ಲಾಭವಿಲ್ಲ ಎಂದು ಹೇಳಿದ್ದಾರೆ. ಬಿಜೆಪಿ ಸರಿಯಾಗಿ ನಮ್ಮನ್ನು ಬಳಿಕೆ ಮಾಡಿಕೊಳ್ಳಲಿ. ಇಲ್ಲದೆ ಹೋದರೆ ಮುಂದೆ ಪೆಟ್ಟು ಬಿದ್ದರೆ ಅದರ ಸಾಧಕ-ಬಾಧಕಗಳಿಗೆ ಬಿಜೆಪಿ ಜವಾಬ್ದಾರಿ ಆಗಲಿದೆ ಎಂದು ಕುಮಾರಸ್ವಾಮಿ ಹೇಳಿದರು.

ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ

ಜೆಡಿಎಸ್‌ನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದ ಮಿತ್ರಪಕ್ಷ ಬಿಜೆಪಿ ಬಗ್ಗೆ ಬೇಸರ ವ್ಯಕ್ತಪಡಿಸಿದ ಕುಮಾರಸ್ವಾಮಿ, ಕೋಲಾರ ಲೋಕಸಭೆ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟು ಕೊಡಲು ವಿಳಂಬ ಮಾಡುತ್ತಿರುವ ಬಗ್ಗೆ ಅತೃಪ್ತಿಯನ್ನು ಹೊರ ಹಾಕಿದರು.

ಸರಿಯಾಗಿ ಬಳಕೆ ಮಾಡಿಕೊಳ್ಳಬೇಕು

ನಮ್ಮ ಸಹಕಾರ ಇರುವ ರೀತಿಯಲ್ಲೇ ಬಿಜೆಪಿಯಿಂದಲೂ ಸಹಕಾರ ಇರಬೇಕು. ಅದನ್ನು ಸರಿ ಮಾಡುವ ನಿಟ್ಟಿನಲ್ಲಿ ಕೆಲವು ಸೂಚನೆ ಬಿಜೆಪಿ ಅವರಿಗೆ ನೀಡಬೇಕು ಎಂದು ಸಭೆಯಲ್ಲಿ ಕೆಲವರು ಹೇಳಿದ್ದಾರೆ. ವಿಜಯಪುರ, ಕಲಬುರ್ಗಿಯಲ್ಲಿ ಬಿಜೆಪಿಗಿಂತ ಜೆಡಿಎಸ್ ಪ್ರಬಲವಾಗಿದೆ. ಇಂತಹ ಕ್ಷೇತ್ರಗಳಲ್ಲಿ ನಮ್ಮ ನಾಯಕರನ್ನು ಸರಿಯಾಗಿ ಬಳಕೆ ಮಾಡಿಕೊಳ್ಳಬೇಕು. ಇದರ ಬಗ್ಗೆ ಬಿಜೆಪಿ ಹೈಕಮಾಂಡ್ ಜತೆ ಚರ್ಚೆ ಆಗಬೇಕು ಎಂದೂ ಪ್ರ್ರಮುಖರು ಹೇಳಿದ್ದಾರೆ ಎಂದು ಕುಮಾರಸ್ವಾಮಿ ತಿಳಿಸಿದರು.

ಕೋರ್ ಕಮಿಟಿ ಅಧ್ಯಕ್ಷರಾದ ಜಿ.ಟಿ.ದೇವೇಗೌಡ, ಮಾಜಿ ಸಚಿವರಾದ ಬಂಡೆಪ್ಪ ಕಾಶೆಂಪುರ, ಸಮೃದ್ಧಿ ಮಂಜುನಾಥ್, ಮಾಜಿ ಶಾಸಕ ತಿಮ್ಮರಾಯಪ್ಪ ಮುಂತಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net