

ಬೆಂಗಳೂರು: ಬಿಜೆಪಿ ಜತೆಗಿನ ಮೈತ್ರಿ ಜೆಡಿಎಸ್ ನಾಯಕರಿಗೆ ಮಗ್ಗಲು ಮುಳ್ಳಾಗಿ ಪರಿಣಮಿಸಿದೆ. ಮುಸ್ಲಿಂ ಮತಗಳನ್ನೇ ಪಕ್ಷದ ದೊಡ್ಡ ಅಡಿಗಲ್ಲು ಎಂದು ಭಾವಿಸಿದ್ದ ಜೆಡಿಎಸ್‌ಗೆ ಈಗ ನುಂಗಲಾರದ ತುತ್ತಾಗಿದೆ.
ಮೈತ್ರಿ ಮಾಡಿಕೊಂಡರೂ ಜೆಡಿಎಸ್ ವರಿಷ್ಠರು ಖುಷಿಯಲ್ಲಿಲ್ಲ. ಅಸಮಾಧಾನ ದಿನೇ ದಿನೆ ಭುಗಿಲೇಳುತ್ತಿದೆ. ಪಕ್ಷದ 10-11 ಶಾಸಕರಿಗೆ ಮೈತ್ರಿ ಬೇಕಿಲ್ಲ. ಹಾಗೆಂದು ದೇವೇಗೌಡರು ಮತ್ತು ಕುಮಾರಸ್ವಾಮಿ ಅವರನ್ನು ವಿರೋಧ ಕಟ್ಟಿಕೊಳ್ಳಲೂ ಇಷ್ಟವಿಲ್ಲ. ಅದೆಲ್ಲಕ್ಕಿಂತ ಪಕ್ಷದಲ್ಲಿನ ಮುಸ್ಲಿಂ ನಾಯಕರು ಜೆಡಿಎಸ್ ಹೈಕಮಾಂಡ್‌ನೊಂದಿಗೆ ಮುನಿಸಿಕೊಂಡಿದ್ದಾರೆ. ಮೈತ್ರಿಗೆ ಸುತಾರಾಂ ಆಸಕ್ತಿ ತೋರುತ್ತಿಲ್ಲ. ಈ ಅಸಮಾಧಾನ ಶಮನಗೊಳಿಸುವುದು ಪಕ್ಷದ ನಾಯಕರಿಗೆ ದೊಡ್ಡ ಸವಾಲಾಗಿದೆ.
ಪಕ್ಷದ ಹಿರಿಯ ಮುಖಂಡರು, ಶಾಸಕರು, ಮಾಜಿ ಸಚಿವರು, ಮಾಜಿ ಶಾಸಕರು, ಜಿಲ್ಲಾ ಪದಾಧಿಕಾರಿಗಳ ಮೂಲಕ ತೇಪೆ ಹಚ್ಚುವ ಪ್ರಯತ್ನ ನಡೆದಿದೆ. ಅದಕ್ಕೆ ಪೂರಕ ಎಂಬಂತೆ ಹಾಸನದಲ್ಲಿ ನಗರಸಭೆ ಮಾಜಿ ಅಧ್ಯಕ್ಷ ಸಹ್ಯಾದ್ ಅಕ್ಬರ್ ಜೆಡಿಎಸ್ ಎಂದಿಗೂ ಮುಸ್ಲಿಂರನ್ನು ಕಡೆಗಣಿಸಿಲ್ಲ ಎಂದು ಹೇಳಿ ತಿಪ್ಪೇಸಾರಿಸುವ ಕೆಲಸ ಮಾಡಿದ್ದಾರೆ. ವಿಜಯಪುರ ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷ ದಿಲಾವರ್ ಖಾಜಿ ಜೆಡಿಎಸ್-ಬಿಜೆಪಿ ಮೈತ್ರಿಗೆ ಅಲ್ಪಸಂಖ್ಯಾತರ ಘಟಕದ ಸಹಮತವಿದೆ ಎಂದು ಸಮಜಾಯಿಶಿ ನೀಡಿದ್ದಾರೆ. ಆದರೆ ಕಲಬುರಗಿಯಲ್ಲಿ ಮುಸ್ಲಿಂ ಮುಖಂಡರಂತೂ ಜೆಡಿಎಸ್ ವರಿಷ್ಠರ ವಿರುದ್ಧ ಕೆಂಡಕಾರಿದ್ದಾರೆ. ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ನಡೆಸುವ ಪ್ರತ್ಯೇಕ ಸಭೆಯಲ್ಲಿ ಭಾಗವಹಿಸುವುದಾಗಿ ಬಹಿರಂಗವಾಗಿ ಅಸಮಾಧಾನ ಹೊರ ಹಾಕಿದ್ದಾರೆ.
ಮುಸ್ಲಿಂ ಒಂದೇ ಸಮುದಾಯವನ್ನು ನೆಚ್ಚಿಕೊಂಡು ರಾಜಕೀಯ ಮಾಡಲು ಆಗುವುದಿಲ್ಲ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ ಮೇಲಂತೂ ಅಲ್ಪಸಂಖ್ಯಾತ ಮುಖಂಡರು ಜೆಡಿಎಸ್ ವಿರುದ್ಧ ತಿರುಗಿ ಬಿದ್ದಿದ್ದಾರೆ.
ಖುದ್ದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಅ.16 ರಂದು ಮೈತ್ರಿ ಬಗ್ಗೆ ಅಸಮಾಧಾನಗೊಂಡಿರುವ ಪಕ್ಷದ ಶಾಸಕರು, ಮಾಜಿ ಶಾಸಕರು, ಮಾಜಿ ಸಚಿವರು ಹಾಗೂ ಮುಖಂಡರು ಮತ್ತು ಮುಸ್ಲಿಂ ನಾಯಕರ ಸಭೆ ಆಯೋಜಿಸಿದ್ದಾರೆ. ಈ ಪ್ರತ್ಯೇಕ ಸಭೆಗೆ ಕುಮಾರಸ್ವಾಮಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದರೆ ಇಬ್ರಾಹಿಂ ಮನವೊಲಿಸುವ ಜವಾಬ್ದಾರಿಯನ್ನು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ತೆಗೆದುಕೊಂಡಿದ್ದು, ಯಾವ ತಂತ್ರ ಬಳಸಿ ಅಸಮಾಧಾನ ಶಮನಗೊಳಿಸುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.
ನಾನು ಬದುಕಿರುವವರೆಗೂ ಮುಸ್ಲಿಂರನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಹೇಳುವ ಮೂಲಕ ಅತೃಪ್ತಿ ತಣಿಸುವ ಪ್ರಯತ್ನ ಮಾಡಿದ್ದಾರೆ. ಜತೆಗೆ ಮೈತ್ರಿ ಬಗೆಗಿನ ಅಪಸ್ವರಕ್ಕೆ ಮದ್ದು ಕಂಡು ಹಿಡಿಯಲು ವರಿಷ್ಠರು ನೇರವಾಗಿ ಅಖಾಡಕ್ಕೆ ಇಳಿದಿದ್ದಾರೆ.
ಇನ್ನೊಂದೆಡೆ ಮೈತ್ರಿ ವಿಚಾರದಲ್ಲಿ ಬಿಜೆಪಿ ದೆಹಲಿ ಹೈಕಮಾಂಡ್ ಏಕಪಕ್ಷೀಯ ನಿರ್ಧಾರ ಕೈಗೊಂಡಿದ್ದು,ರಾಜ್ಯ ನಾಯಕರಲ್ಲಿ ಆ ಬಗ್ಗೆ ಅಸಮಧಾನ ಮಡುಗಟ್ಟಿದೆ. ಇದೆಲ್ಲವನ್ನೂ ಜೆಡಿಎಸ್ ಹೇಗೆ ನಿಭಾಯಿಸುತ್ತದೆ ಎಂಬುದು ಕುತೂಹಲಕರವಾಗಿದೆ.