ತೆರಿಗೆ ಹೋರಾಟಕ್ಕೆ ಅಲಯನ್ಸ್, 16ರಂದು ಸಭೆ

vidhanasoudha
Published on

ಬೆಂಗಳೂರು: ಹದಿನಾರನೇ ಹಣಕಾಸು ಆಯೋಗವು ಎಲ್ಲ ರಾಜ್ಯಗಳಿಗೆ ತೆರಳಿ ಅಭಿಪ್ರಾಯ ಸಂಗ್ರಹಿಸುತ್ತಿರುವಾಗಲೇ ಬಿಜೆಪಿಯೇತರ ಸರ್ಕಾರಗಳು ಹೆಚ್ಚಿನ ತೆರಿಗೆ ಪಾಲಿಗಾಗಿ ಹಾಗೂ ವಿಶೇಷ ಅನುದಾನಕ್ಕಾಗಿ ಒತ್ತಡ ತರಲು ಸಂಘಟಿತವಾಗುತ್ತಿವೆ.
ಈ ಪ್ರಯತ್ನದ ಭಾಗವಾಗಿ ಅಕ್ಟೋಬರ್ 16-17ರಂದು ಬೆಂಗಳೂರಿನಲ್ಲಿ ಸಮಾವೇಶ ಹಮ್ಮಿಕೊಳ್ಳಲು ರಾಜ್ಯ ಸರ್ಕಾರ ಮುಂದಾಗಿದೆ. ಇನ್ನೆರಡು ದಿನಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಹಣಕಾಸು ಇಲಾಖೆ ಅಧಿಕಾರಿಗಳ ಸಭೆ ನಡೆಯಲಿದ್ದು, ಸಮಾವೇಶದಲ್ಲಿ ಚರ್ಚೆಯಾಗಬೇಕಾದ ವಿಷಯ ಮತ್ತು ದಿನಾಂಕ ಅಂತಿಮಗೊಳ್ಳಲಿದೆ.
ಕಳೆದ ವಾರ ಕೇರಳ ಸರ್ಕಾರ ಆಯೋಜಿಸಿದ್ದ ಸಭೆಯಲ್ಲಿ ಒಂದು ಹೊಳಹು ಕಾಣಿಸಿತ್ತು. ಅದನ್ನು ಇನ್ನೊಂದು ದಿಕ್ಕಿಗೆ ತೆಗೆದುಕೊಂಡು ಹೋಗುವ ಉದ್ದೇಶ ರಾಜ್ಯದ್ದಾಗಿದ್ದು, ತೆರಿಗೆ ಪಾಲು ಕಡಿಮೆಯಾಗುವುದನ್ನು ಸಂಘಟಿತವಾಗಿ ವಿರೋಧಿಸುವುದು ಹಾಗೂ ಲೋಕಸಭೆ ಕ್ಷೇತ್ರ ಪುನರ್ ವಿಂಗಡಣೆ ಕುರಿತಂತೆಯೂ ಒಂದು ನಿರ್ಣಯಕ್ಕೆ ಬರುವ ಸಾಧ್ಯತೆಗಳಿವೆ.
ಮುಂದಿನ ಜನ ಗಣತಿ ಆಧರಿಸಿ ಲೋಕಸಭೆ ಕ್ಷೇತ್ರಗಳ ಪುನರ್ವಿಂಗಡಣೆಯಾಗಲಿದೆ. ಇದರಿಂದ ದಕ್ಷಿಣ ರಾಜ್ಯಗಳ ರಾಜಕೀಯ ಪ್ರಾತಿನಿಧ್ಯ ಕೇಂದ್ರದಲ್ಲಿ ಕಡಿಮೆಯಾಗುವ ಸಾಧ್ಯತೆ ಇದೆ. ಒಂದೆಡೆ ತೆರಿಗೆ ಸಂಗ್ರಹದ ಕೊಡುಗೆ ಹೆಚ್ಚುತ್ತಲೇ ಹೋಗಲಿದೆ, ರಾಜಕೀಯ ಪ್ರಾತಿನಿಧ್ಯ ಕಡಿಮೆಯಾಗಲಿದೆ. ಹೀಗಾಗಿ ಒಟ್ಟಾಗಿ ದನಿ ಎತ್ತುವ ಅಗತ್ಯವಿದೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಕೇರಳ ಸಭೆಯಲ್ಲಿ ಪ್ರತಿಪಾದಿಸಿದ್ದರು ಎಂಬುದು ಗಮನಾರ್ಹ ಸಂಗತಿ.
ದಕ್ಷಿಣ ಭಾರತದ ರಾಜ್ಯಗಳ ಸಮಾವೇಶ ನಡೆಸುವ ಬಯಕೆ ಇದ್ದರೂ ಬಿಜೆಪಿ ಆಡಳಿತ ಇಲ್ಲದಿರುವ ರಾಜ್ಯಗಳನ್ನೂ ಈ ಸಮಾವೇಶಕ್ಕೆ ಆಹ್ವಾನಿಸಿ ಅವರಿಂದಲೂ ಸಮಸ್ಯೆಗಳನ್ನು ಪ್ರಸ್ತಾಪಿಸುವಂತೆ ಮಾಡಿ ಸಂಘಟಿತ ಅಲಯನ್ಸ್ ಮಾಡಿಕೊಳ್ಳುವ ಇರಾದೆ ರಾಜ್ಯ ಸರ್ಕಾರದ್ದಾಗಿದೆ.
ತೆರಿಗೆ ಸಂಗ್ರಹದಲ್ಲಿ ಉತ್ತಮ ಸಾಧನೆ ಮಾಡುವ ರಾಜ್ಯಗಳನ್ನು ಗುರುತಿಸುವ ಕೆಲಸವಾಗಬೇಕು. ತೆರಿಗೆ ಪಾಲು ಕಸಿಯದೇ ಹೆಚ್ಚಿಸಬೇಕು, ಪಶ್ಚಿಮ ಘಟ್ಟ ಪುನಶ್ಚೇತನ ಹಾಗೂ ಬೆಂಗಳೂರಿಗೆ ವಿಶೇಷ ಅನುದಾನ ಕೊಡಬೇಕು ಎಂಬುದು ಕರ್ನಾಟಕದ ವಾದ. ಅದೇ ರೀತಿ ಎಲ್ಲ ರಾಜ್ಯಗಳ ಬೇಡಿಕೆಯನ್ನೂ ಒಂದು ಸಂಘಟಿತ ವೇದಿಕೆಯಲ್ಲಿ ಪ್ರಸ್ತಾಪಿಸಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಲು ಉದ್ದೇಶಿಸಲಾಗಿದೆ.
ಈಗಾಗಲೇ ಬೆಂಗಳೂರು ಸಮಾವೇಶದ ಕುರಿತು ಮುಖ್ಯಮಂತ್ರಿಯವರು ದಕ್ಷಿಣ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದು, ದಿನಾಂಕ ನಿಶ್ಚಯವಾದ ಕೂಡಲೇ ಅಧಿಕೃತ ಆಹ್ವಾನ ಕಳಿಸುವುದಾಗಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net