

ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಒಟ್ಟಾಗಿ ಸ್ಪರ್ಧಿಸುವ ಚರ್ಚೆಗಳಾಗಿವೆ. ಈ ಬಗ್ಗೆ ಎರಡೂ ಪಕ್ಷದ ನಾಯಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ನಡುವೆ ಕಾಂಗ್ರೆಸ್ ಈ ಮೈತ್ರಿ ಚರ್ಚೆಯನ್ನು ಹಾಸ್ಯ ಮಾಡುತ್ತಲೇ ಬಂದಿದೆ.
ಸುದ್ದಿಗಾರರಿಗೆ ಗುರುವಾರ ಪ್ರತಿಕ್ರಿಯೆ ನೀಡಿದ ಕೃಷಿ ಸಚಿವ ಚೆಲುವರಾಯಸ್ವಾಮಿ, ಮೈತ್ರಿ ಬಗ್ಗೆ ಬಹಳ ಸ್ಪೀಡ್ ಆಗಿರೋದು ನಮ್ಮ ಬ್ರದರ್ ಎಂದು ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿಯವರ ಕಾಲೆಳೆದಿದ್ದಾರೆ.
ಏನಾಗಲಿದೆ ಎಂದು ಸ್ವಲ್ಪ ದಿನ ಕಾದು ನೋಡಿ, ಬಿಜೆಪಿ ಮತ್ತು ಜೆಡಿಎಸ್ ಎರಡೂ ಕಡೆ ಅಸಮಾಧಾನ ಸ್ಪೋಟವಾಗಿದೆ. ಎರಡೂ ಕಡೆ ಶಾಸಕರು ರಾಗ ತೆಗೆದಿದ್ದಾರೆ. ಇನ್ನೂ ಕೆಲ ಕಾಲ ನೋಡೋಣ ಎಂದರು.
ಎರಡು ಬಾರಿ ಸಿಎಂ ಮಾಡಿದಾಗಲೇ ಪಕ್ಷದ ಅಸ್ತಿತ್ವ ಉಳಿಸಿಕೊಳ್ಳಲು ಆಗಲಿಲ್ಲ ಎಂದು ಕುಮಾರಸ್ವಾಮಿಯವರನ್ನು ಮಾತಲ್ಲೇ ತಿವಿದ ಚೆಲುವರಾಯಸ್ವಾಮಿ, ಈಗ ಪಕ್ಷ ಉಳಿಸಿಕೊಳ್ಳಲು ಪ್ರಯತ್ನ ಮಾಡುತ್ತಿದ್ದಾರೆ. ಬ್ರದರ್ ಮತ್ತು ಬೊಮ್ಮಾಯಿ ಇಬ್ಬರೇ ಮೈತ್ರಿಯಾಗಲಿ ಅಂತ ಮಾತಾಡುತ್ತಿರುವುದು. ಯಡಿಯೂರಪ್ಪ ಮಾತ್ರ ನೋಡೋಣ ಏನಾಗಲಿದೆ ಅನ್ನುತ್ತಿದ್ದಾರೆ. ಯೋಗೇಶ್ವರ್ ಕೂಡ ಮೈತ್ರಿಯಾಗಲಿ ಅನ್ನುತ್ತಿದ್ದಾರೆ. ಯೋಗೇಶ್ವರ್‌ಗೂ ಈಗ ಅನಿವಾರ್ಯ. ಅವರು ನನ್ನ ಸ್ನೇಹಿತರು. ಅವರಿಗೆ ಒಳ್ಳೆಯದಾಗಲಿ ಎಂದರು.
ಹೀಗೆ ಮಾತನಾಡುವಾಗ ರಾಜ್ಯದಲ್ಲಿ ಕಾಂಗ್ರೆಸ್ ಅಸ್ತಿತ್ವ ಕಳೆದುಕೊಂಡಿದೆ ಎಂದು ಬಾಯಿತಪ್ಪಿ ಹೇಳಿದರು. ಆಗ ತಕ್ಷಣವೇ ಪಕ್ಕದಲ್ಲಿದ್ದವರು ಎಚ್ಚರಿಸಿದ ಬಳಿಕ ಬಿಜೆಪಿ, ಜೆಡಿಎಸ್ ಅಸ್ತಿತ್ವ ಕಳೆದುಕೊಂಡಿದೆ ಎಂದು ತಿದ್ದಿಕೊಂಡರು.