ನಂಜನಗೂಡು: ತಾಲೂಕಿನ ಹಗಿನವಾಳು ಗ್ರಾಮದ ಅಂಗನವಾಡಿ ಕೇಂದ್ರದ ಮೂವರು ಕಾರ್ಯಕರ್ತೆಯರ ವಿರುದ್ಧ ಇದ್ದ ಹಾಲಿನ ಪೌಡರ್ ಕದ್ದು ಮಾರಾಟ ಮಾಡುತ್ತಿದ್ದ ಆರೋಪ ಸುಳ್ಳು ಎಂಬುದು ತನಿಖೆಯಿಂದ ಸಾಬೀತಾಗಿದೆ. ಹೀಗಾಗಿ ಅಂಗನವಾಡಿ ಕಾರ್ಯಕರ್ತೆಯರು ಸೇವೆಗೆ ಮರಳಿದ್ದಾರೆ ಎಂದು ತಾಲೂಕು ಅಂಗನವಾಡಿ ಕಾರ್ಯಕರ್ತೆಯರ ಸಂಘದ ಅಧ್ಯಕ್ಷೆ ಕಮಲಾಕ್ಷಮ್ಮ ಹೇಳಿದರು.
ಹಗಿನವಾಳು ಗ್ರಾಮದಲ್ಲಿ ಅಂಗನವಾಡಿ ಕಾರ್ತಕರ್ತೆಯರು ಹಾಲಿನ ಪುಡಿಯನ್ನು ಖಾಸಗಿ ಅಂಗಡಿಗಳಿಗೆ ಮಾರುತ್ತಿದ್ದಾರೆ ಎಂದು ದೂರು ಕೇಳಿಬಂದ ಹಿನ್ನೆಲೆಯಲ್ಲಿ ಈ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದರು. ತನಿಖೆಯಲ್ಲಿ ಕೆಲವರು ಉದ್ದೇಶಪೂರ್ವಕವಾಗಿ ಸುಳ್ಳು ಆರೋಪ ಮಾಡಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರಾದ ನಾಗಮ್ಮ, ಸುಮಾ, ಶಿವಮ್ಮ ಅವರನ್ನು ಆರೋಪದಿಂದ ಮುಕ್ತಗೊಳಿಸಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಇನ್ನು ಸಿಐಟಿಯು ಸಂಘಟನೆ ಹಾಗೂ ತಾಲೂಕು ಅಂಗನವಾಡಿ ಕಾರ್ಯಕರ್ತೆಯರ ಸಂಘವು ಅಂಗನವಾಡಿ ಕಾರ್ಯಕರ್ತೆಯರ ಪರವಾಗಿ ಹೋರಾಟ ನಡೆಸಿದ್ದರ ಪರಿಣಾಮ ಅವರೆಲ್ಲರೂ ಸೇವೆಗೆ ಹಿಂದಿರುಗಿದ್ದಾರೆ ಎಂದು ತಿಳಿಸಿದರು. ಅಂಗನವಾಡಿ ಕಾರ್ಯಕರ್ತೆಯರಾದ ಪುಷ್ಪಲತಾ, ಹೇಮಾವತಿ, ಮಹದೇವಮ್ಮ ಇದ್ದರು.