ಹಾಲು ಉತ್ಪಾದಕರ ಸಂಘದ ಕಾರ್ಯದರ್ಶಿಯಿಂದ ಅವ್ಯವಹಾರ ಆರೋಪ

29 HRS 01
ಉತ್ಪಾದಕ ಸದಸ್ಯರಾದ ಮೂರ್ತಿ, ಇಂದ್ರೇಶ್, ಉಮೇಶ್, ಕೆ.ಎನ್.ಸತೀಶ್, ಅಣ್ಣೇಗೌಡ, ತಿಮ್ಮೇಗೌಡ, ಕೆ.ಜಿ.ರಮೇಶ್, ಡಿ.ಟಿ.ಬಸವರಾಜ್, ಅಶ್ವತ್ಥ್, ಕೆ.ಪಿ.ರಾಮಕೃಷ್ಣ, ಗೋಪಿ, ಪುಟ್ಟರಾಜು, ಕಾಂತರಾಜು, ರವಿಕುಮಾರ್, ಬಸವರಾಜ್, ಉಮೇಶ್, ಗೋವಿಂದ, ಅಶೋಕ್, ಶಿವಕುಮಾರ್, ಪರಮೇಶ್ ಹಾಗೂ ಇತರರು ಇದ್ದರು.
Published on

ಹಿರೀಸಾವೆ: ಹಾಲು ಉತ್ಪಾದಕರಿಗೆ ಸರಿಯಾಗಿ ಮಾಹಿತಿ ನೀಡದೆ ಹಾಗೂ ಸಹಿ ಪಡೆಯದೇ ವಾರ್ಷಿಕ ಸಭೆಯನ್ನು ತರಾತುರಿಯಲ್ಲಿ ನಡೆಸಿದ್ದು ಜತೆಗೆ ಸಂಘದಲ್ಲಿ ಸಾಕಷ್ಟು ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ಕಾರ್ಯದರ್ಶಿ ವಿರುದ್ಧ ಹೋಬಳಿಯ ದಿಡಗ ಹಾಲು ಉತ್ಪಾದಕರ ಸಹಕಾರ ಸಂಘದ ಎದುರು ಗುರುವಾರ ರಾತ್ರಿ ಉತ್ಪಾದಕರು ಪ್ರತಿಭಟನೆ ನಡೆಸಿದರು.

ಸಂಘದಲ್ಲಿ 120 ಉತ್ಪಾದಕರು ಹಾಲು ಹಾಕಲಿದ್ದು ಹಲವು ವರ್ಷಗಳಿಂದ ಸಂಘದಲ್ಲಿ ಅವ್ಯವಹಾರ ನಡೆಯುತ್ತಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಉತ್ಪಾದಕರಿಂದ ಸಹಿ ಪಡೆಯದೇ ಕಳೆದ ವಾರ ವಾರ್ಷಿಕ ಮಹಾಸಭೆ ನಡೆಸಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಗುರುವಾರ ಸಂಜೆ ಹಾಲಿನೊಂದಿಗೆ ಸಂಘದ ಬಳಿಗೆ ತೆರಳಿದ ಸದಸ್ಯರು ಹಾಲಿನ ಕ್ಯಾನ್‌ಗಳನ್ನು ಸಾಲಾಗಿ ಇರಿಸಿ ಸಮಸ್ಯೆ ಬಗೆಹರಿಯುವವರೆಗೂ ಹಾಲು ಹಾಕುವುದಿಲ್ಲ ಎಂದು ಪಟ್ಟುಹಿಡಿದು ಪ್ರತಿಭಟಿಸಿದರು.

ಹಲವು ವರ್ಷಗಳಿಂದ ಒಂದೇ ಒಂದು ಹಸು, ಎಮ್ಮೆ ಅಥವಾ ಕೊನೇ ಪಕ್ಷ ಕರುವೊಂದನ್ನು ಸಾಕಿಲ್ಲದ ಕಾರ್ಯದರ್ಶಿ ಡಿ.ಬಿ.ಮಲ್ಲಿಕಾರ್ಜುನ್ ತನ್ನ ಪತ್ನಿ ತಾರಾದೇವಿ ಹೆಸರಲ್ಲಿ ಉತ್ಪಾದಕರ ಕ್ರಮ ಸಂಖ್ಯೆ 133ರ ಮೂಲಕ ಪ್ರತಿದಿನ ಹಾಲು ಹಾಕಿರುವಂತೆ ವ್ಯವಸ್ಥೆ ಮಾಡಿಕೊಂಡಿದ್ದು ಕಳೆದ ಆಗಸ್ಟ್ ತಿಂಗಳಲ್ಲಿ ಆಕೆಯ ಬ್ಯಾಂಕ್ ಖಾತೆಗೆ ಹಾಲಿನ ಬಿಲ್ 47,904 ರೂ. ಜಮೆಯಾಗಿದೆ ಎಂದು ಆರೋಪಿಸಿದರು.

ಒಂದೇ ತಿಂಗಳಲ್ಲಿ ಒಮ್ಮೆಲೇ ಇಷ್ಟು ಹಣ ಜಮೆಯಾಗಿದ್ದರೆ ಅದರ ಹಿಂದಿನ ತಿಂಗಳು ಅಥವಾ ವರ್ಷಗಳಲ್ಲಿ ಇನ್ನೆಷ್ಟು ಲಕ್ಷಂತರ ರೂ. ಹಣದ ಅವ್ಯವಹಾರ ನಡೆದಿರಬಹುದು. ಅಲ್ಲದೆ ಹಾಲು ನಿಲ್ಲಿಸಿರುವವರ ಹೆಸರಿನಲ್ಲಿಯೂ ಇದೇ ರೀತಿ ಅಕ್ರಮ ನಡೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಲ್ಲದೆ ದಿಡಗ ಗ್ರಾಮದಲ್ಲಿ ನಿರಂತರ ವಿದ್ಯುತ್ ವ್ಯವಸ್ಥೆ ಇದ್ದು ಡೇರಿಯಲ್ಲಿ ಹಾಲು ಅಳೆಸುವ ಸಮಯದಲ್ಲಿ ವಿದ್ಯುತ್ ವ್ಯತ್ಯಯವಾಗಿರುವುದು ತೀರ ವಿರಳವಾಗಿದೆ. ಆದರೆ ವಿದ್ಯುತ್ ಇಲ್ಲದ ವೇಳೆ ಮಿಲ್ಕ್ ಕೂಲಿಂಗ್ ಸಲುವಾಗಿ ಜನರೇಟರ್ ಬಳಕೆ ಮಾಡಿರುವುದಾಗಿ ವಾರ್ಷಿಕ 37 ಸಾವಿರ ರೂ. ಡೀಸೆಲ್ ಖರ್ಚು ತೋರಿಸಲಾಗಿದೆ ಎಂದು ದೂರಿದರು.

ಸಂಘದ ಕಾರ್ಯದರ್ಶಿ ಡಿ.ಬಿ.ಮಲ್ಲಿಕಾರ್ಜುನ್ ಮಾತನಾಡಿ, ಸೆಪ್ಟೆಂಬರ್ ತಿಂಗಳ ಒಳಗಾಗಿ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ನಡೆಸುವ ಅನಿವಾರ್ಯತೆ ಇತ್ತು. ನನಗೆ ಕಣ್ಣು ನೋವಿನ ಸಮಸ್ಯೆ ಇದ್ದಿದ್ದರಿಂದ ಲೆಕ್ಕ ಪತ್ರಗಳನ್ನು ಬರೆದಿರಲಿಲ್ಲ. ಆದ್ದರಿಂದ ನಂತರ ಸಹಿ ಪಡೆಯೋಣವೆಂದು ನಿರ್ಧರಿಸಿ ಸಭೆ ಮಾಡಲಾಯಿತೇ ಹೊರತು ಬೇರೆ ಯಾವುದೇ ಗೊಂದಲವಿಲ್ಲ ಎಂದು ಪ್ರತಿಭಟನಾಕಾರರನ್ನು ಮನವೊಲಿಸಲು ಮುಂದಾದರು.

ಇನ್ನು ಕ್ರಮ ಸಂಖ್ಯೆ 133 ಬಳಕೆ ಮಾಡಿಕೊಂಡು ನನ್ನ ಪತ್ನಿ ಖಾತೆಗೆ 47,904 ರೂ. ಜಮೆಯಾಗಿರುವುದು ಹಾಲಿನ ಹಣವಲ್ಲ. ಅದು ಕೆಲ ಉತ್ಪಾದಕರಿಗೆ ಪಶು ಆಹಾರದ ಹಣ ಬಂದಿರಲಿಲ್ಲ. ಹಾಹಾಗಿ ಈ ಹಣ ಜಮೆ ಮಾಡಿಕೊಳ್ಳಲಾಗಿದೆ. ನನ್ನಿಂದ ತಪ್ಪಾಗಿದೆ. ಆ ಹಣವನ್ನು ಹಿಂದಿರುಗಿಸುತ್ತೇನೆ ಎಂದು ಕ್ಷಮೆಯಾಚಿಸಿ ನುಣುಚಿಕೊಳ್ಳಲು ಯತ್ನಿಸಿದರು.

ಈ ವೇಳೆ ಕಾರ್ಯದರ್ಶಿ, ಅಧ್ಯಕ್ಷರು, ನಿರ್ದೇಶಕರು ಹಾಗೂ ಉತ್ಪಾದಕ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಇದಕ್ಕೆ ಒಪ್ಪದ ಉತ್ಪಾದಕರು, ಕಾರ್ಯದರ್ಶಿ ಹಾಗೂ ವಿಸ್ತರಣಾಧಿಕಾರಿ ಸೇರಿ ಸರಿಯಾದ ಮಾಹಿತಿ ನೀಡಿ ಸಮಸ್ಯೆ ಬಗೆಹರಿಸುವವರೆಗೂ ಯಾವುದೇ ಕಾರಣಕ್ಕೂ ಹಾಲು ಹಾಕುವುದಿಲ್ಲ ಎಂದು ಪಟ್ಟು ಹಿಡಿದರು.

ನಂತರ ಸಂಘದ ಅಧ್ಯಕ್ಷ ಹಾಗೂ ಕಾರ್ಯದರ್ಶಿ ಸೇರಿ ಸೆ.30 ರಂದು ತುರ್ತು ಸಭೆ ನಡೆಸಿ ಹಾಸನ ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ಸಮ್ಮುಖದಲ್ಲಿ ನಿಮ್ಮೆಲ್ಲ ಪ್ರಶ್ನೆಗಳಿಗೆ ಉತ್ತರ ನೀಡಿ ಸಮಸ್ಯೆ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದ ಬಳಿಕ ಉತ್ಪಾದಕರು ಪ್ರತಿಭಟನೆ ಹಿಂಪಡೆದು ಹಾಲು ಹಾಕಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net