

ಬೆಂಗಳೂರು: ಜಮೀನುವೊಂದಕ್ಕೆ ಅತಿಕ್ರಮವಾಗಿ ಪ್ರವೇಶಿಸಿದಲ್ಲದೇ ಕಾಂಪೌಂಡ್ ಹೊಡೆಸಿ ಜಾಗವನ್ನು ಸ್ವಾಧೀನಪಡಿಸಿಕೊಂಡಿರುವ ಆರೋಪದ ಸಂಬಂಧ ನಟ ಮಯೂರ್ ಪಟೇಲ್ ಸೇರಿ ಇತರರ ವಿರುದ್ಧ ಎಚ್‌ಎಸ್‌ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಎಚ್‌ಎಸ್‌ಆರ್ ಲೇಔಟ್ ನಿವಾಸಿ ಶಾಲಿನಿ ಎಂಬುವರು ನೀಡಿದ ದೂರು ಆಧರಿಸಿ ಸುಬ್ರಮಣ್ಯ ಮಾಸ್, ಎನ್.ಆರ್.ಭಟ್ಟ ಹಾಗೂ ಮಯೂರ್ ಪಟೇಲ್ ಸೇರಿ ಇತರರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರು ದಕ್ಷಿಣ ತಾಲೂಕಿನ ಬೇಗೂರು ಹೋಬಳಿಯ ಹರಳುಕುಂಟೆ ಗ್ರಾಮದ ಸರ್ವೇ ನಂಬರ್ ೫೫/೧೦ ರಲ್ಲಿ ೧೪.೫ ಗುಂಟೆ ಜಾಗವು ಶಾಲಿನಿ ಪತಿ ಮಂಜುನಾಥ್ ರೆಡ್ಡಿಗೆ ದಾನವಾಗಿ ಬಂದಿರುತ್ತದೆ. ಈ ಸ್ವತ್ತಿಗೆ ಸುತ್ತಲು ಕಾಂಪೌಂಡ್ ಹಾಕಲಾಗಿತ್ತು. ನ್ಯಾಯಾಲಯದಲ್ಲಿ ಎನ್.ಆರ್.ಭಟ್ ಹಾಗೂ ಮಯೂರ್ ಪಟೇಲ್ ಹೂಡಿದ್ದ ದಾವೆ ಸಂಬಂಧ ಸಿವಿಲ್ ನ್ಯಾಯಾಲಯವು ಸ್ವತ್ತಿನ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶಿಸಿತ್ತು. ಹೀಗಿದ್ದರೂ ಶುಕ್ರವಾರ ಸುಮಾರು ೫೦ ರಿಂದ ೭೫ ಮಂದಿಯನ್ನ ಕರೆದುಕೊಂಡು ಬಂದು ಜೆಸಿಬಿ ಮೂಲಕ ಕಾಂಪೌಂಡ್ ಉರುಳಿಸಿದ್ದಾರೆ. ಈ ಮೂಲಕ ನ್ಯಾಯಾಲಯದ ಆದೇಶ ಉಲ್ಲಂಘಿಸಿದ್ದಾರೆ. ಅತಿಕ್ರಮ ಪ್ರವೇಶ ಮಾಡಿ ಕಾಂಪೌಂಡ್ ಉರುಳಿಸಿದರಿಂದ ೫ರಿಂದ ೧೦ ಲಕ್ಷ ನಷ್ಟವಾಗಿರುವುದಾಗಿ ದೂರಿನಲ್ಲಿ ಶಾಲಿನಿ ಅವರು ಉಲ್ಲೇಖಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.