ಮಹಿಳೆ ಜತೆ ಅಸಭ್ಯ ವರ್ತನೆ ಆರೋಪ: ಜ್ಯೋತಿಷಿ ವಿರುದ್ಧದ ಕೇಸ್ ರದ್ಧತಿಗೆ ಹೈಕೋರ್ಟ್ ನಕಾರ

highcourt
Published on

ಬೆಂಗಳೂರು: ಕುಂಡಲಿ ಪೂಜೆ ನೆಪದಲ್ಲಿ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಜ್ಯೋತಿಷಿಯೊಬ್ಬರ ವಿರುದ್ಧ ದಾಖಲಾಗಿದ್ದ ಪ್ರಕರಣ ರದ್ದುಗೊಳಿಸಲು ಹೈಕೋರ್ಟ್ ನಿರಾಕರಿಸಿದೆ. ಅಲ್ಲದೆ, ಪತ್ನಿಯನ್ನು ಜ್ಯೋತಿಷಿ ಬಳಿ ಕರೆದೊಯ್ದಿದ್ದಲ್ಲದೇ ಆತನ ವರ್ತನೆ ಬಗ್ಗೆ ಆಕ್ಷೇಪಿಸದ ಪತಿಯ ವಿರುದ್ಧದ ಪ್ರಕರಣವನ್ನೂ ರದ್ದುಗೊಳಿಸಲು ನ್ಯಾಯಾಲಯ ಒಲ್ಲೆ ಎಂದಿದೆ.

ಈ ವಿಚಾರವಾಗಿ ಮಹಿಳೆಯ ಪತಿ ಎಚ್.ಪಿ. ದೀಪ ದರ್ಶನ್ ಮತ್ತು ಜ್ಯೋತಿಷಿ ಮೋಹನ್ ದಾಸ್ ಅಲಿಯಾಸ್ ಶಿವರಾಮು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಜಿ. ಉಮಾ ಅವರಿದ್ದ ನ್ಯಾಯಪೀಠ ಅರ್ಜಿ ವಜಾಗೊಳಿಸಿ ಆದೇಶಿಸಿದೆ.

ಪತ್ನಿ ಜಾತಕದ ಕುಂಡಲಿ ದೋಷ ಸರಿಪಡಿಸಲು ದೀಪ ದರ್ಶನ್ ಅವರು ಪತ್ನಿಯನ್ನು ಜ್ಯೋತಿಷಿ ಮೋಹನ್ ಬಳಿಗೆ ಕರೆದೊಯ್ದಿದ್ದಾರೆ. ಆತ ಅನುಚಿತವಾಗಿ ವರ್ತನೆ ಮಾಡಿದರೂ, ಇದನ್ನು ವಿರೋಧಿಸದಂತೆ ಎಚ್ಚರಿಕೆ ನೀಡುವ ಮೂಲಕ ಇಬ್ಬರೂ ಅರ್ಜಿದಾರರು ಅಪರಾಧವೆಸಗಿದ್ದಾರೆ ಎಂದು ಪೀಠ ತಿಳಿಸಿದೆ.

ಇಬ್ಬರೂ ಅರ್ಜಿದಾರರ ವಿರುದ್ಧ ಗಂಭೀರ ಸ್ವರೂಪದ ಆರೋಪವಿದೆ. ಅಲ್ಲದೆ, ಈ ಮೊದಲು ಮತ್ತು ಎರಡನೇ ಬಾರಿ ದಾಖಲಿಸಿದ್ದ ಪ್ರಕರಣದಲ್ಲಿ ಒಂದೇ ರೀತಿಯ ಆರೋಪಗಳಿದ್ದು, ಪ್ರಕರಣ ರದ್ದುಗೊಳಿಸಬೇಕು ಎಂದು ಅರ್ಜಿದಾರರ ವಾದ ತಳ್ಳಿಹಾಕಿರುವ ನ್ಯಾಯಪೀಠ, ಎರಡನೇ ಪ್ರಕರಣದಲ್ಲಿ ಸೆಕ್ಷನ್ 498ಎ(ಕ್ರೌರ್ಯ) ಆರೋಪ ಮಾಡಲಾಗಿದೆ. ಎರಡನೇ ಆರೋಪಿಯಾಗಿರುವವರು ಮಹಿಳೆಯ ಮೇಲೆ (ಸೆಕ್ಷನ್ 354) ಮಾನಭಂಗದ ಉದ್ದೇಶದಿಂದ ವರ್ತಿಸುವ ಮತ್ತು 354ಎ (ಮಹಿಳೆ ವಿರುದ್ಧದ ಲೈಂಗಿಕ ದೌರ್ಜನ್ಯಕ್ಕೆ ಶಿಕ್ಷೆ) ಅಡಿಯಲ್ಲಿ ಶಿಕ್ಷಾರ್ಹ ಅಪರಾಧ ಎಸಗಿರುವ ಆರೋಪ ಎದುರಿಸುತ್ತಿದ್ದಾರೆ. ಹೀಗಾಗಿ ಪ್ರಕರಣ ರದ್ದುಪಡಿಸುವುದಕ್ಕೆ ಅವಕಾಶವಿಲ್ಲ ಎಂದು ಪೀಠ ತನ್ನ ಆದೇಶದಲ್ಲಿ ಹೇಳಿದೆ.

ಪ್ರಕರಣದ ಹಿನ್ನೆಲೆ ಏನು?

ದಂಪತಿ 2014ರ ಮೇ 19ರಂದು ಮದುವೆಯಾಗಿದ್ದು, ಅಂದಿನಿಂದ ಮನೆಯಲ್ಲಿ ಅಶುಭ ಕಾರ್ಯ ನಡೆಯುತ್ತಲೇ ಇತ್ತು. ಈ ಸಂಬಂಧ ಜ್ಯೋತಿಷಿ ಇಲ್ಲವೇ ದೇವಮಾನವರನ್ನು ಭೇಟಿಯಾಗಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂಬುದಾಗಿ ಪತಿ ಕುಟುಂಬದವರು ಒತ್ತಾಯಯಿಸಿದ್ದಾರೆ. ಹೀಗಾಗಿ ಪತಿ ಅರ್ಜಿದಾರರ ಜ್ಯೋತಿಷ್ಯಾಲಯಕ್ಕೆ ಕರೆದೊಯ್ದಿದ್ದರು. ಈ ವೇಳೆ ಜ್ಯೋತಿಷಿ ಬಳಿ ಹೋದಾಗ ದೂರುದಾರಳ ಕುಂಡಲಿ ಸರಿಪಡಿಸುವುದಕ್ಕಾಗಿ ಪೂಜೆ ಮಾಡುವ ಸೋಗಿನಲ್ಲಿ ಆಕೆ ದೇಹವನ್ನು ಅನುಚಿತವಾಗಿ ಸ್ಪರ್ಶಿಸಿ ಅಪರಾಧವೆಸಗಿದ್ದಾರೆ. ಈ ವೇಳೆ ದೂರುದಾರರ ಪತಿ ಸ್ಥಳದಲ್ಲಿ ಹಾಜರಿದ್ದರೂ, ಜ್ಯೋತಿಷಿ ರ್ವತನೆಯನ್ನು ಪ್ರಶ್ನಿಸಲಿಲ್ಲ. ಹೀಗಾಗಿ ಕೃತದಲ್ಲಿ ಇಬ್ಬರೂ ಆರೋಪಿಗಳ ಭಾಗಿಯಾಗಿದ್ದಾರೆ ಎಂದು ದೂರಿನಲ್ಲಿ ವಿವರಿಸಿದ್ದರು. ಈ ಸಂಬಂಧ ಅರ್ಜಿದಾರರ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 498ಎ, 354, 354ಎ, 508 ಮತ್ತು 34ರ ಅಡಿಯಲ್ಲಿ ಎಫ್‌ಐಆರ್ ದಾಖಲಾಗಿತು. ಇದನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದರು.

ಇದು ಕಾನೂನು ಬಾಹಿರ....

ವಿಚಾರಣೆ ವೇಳೆ ಅರ್ಜಿದಾರರ(ಪತಿ) ಪರ ವಕೀಲರು, ತನ್ನ ಪತ್ನಿ, ತನ್ನ ಮತ್ತು ನಮ್ಮ ಕುಟುಂಬಸ್ಥರ ವಿರುದ್ಧ 2018ರಲ್ಲಿ ಐಪಿಸಿ ಸೆಕ್ಷನ್ 498-ಎ ಅಡಿಯಲ್ಲಿ ದೂರು ದಾಖಲಿಸಿದ್ದರು. ಅದೇ ಆರೋಪದಲ್ಲಿ 2019ರಲ್ಲಿ ಮತ್ತೊಂದು ದಾಖಲಿಸಿದ್ದಾರೆ. ಇದು ಕಾನೂನು ಬಾಹಿರ ಎಂದು ಪತಿ ವಾದಿಸಿದ್ದರು. ಅಲ್ಲದೆ, ದೂರುದಾರರು 2018ರಿಂದ ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದಾರೆ. ಆದ್ದರಿಂದ ಈ ದೂರು ದಾಖಲು ಮಾಡುವುದಕ್ಕೆ ಸೂಕ್ತ ಆಧಾರಗಳಿಲ್ಲ ಎಂಬುದಾಗಿ ವಾದ ಮಂಡಿಸಿದ್ದರು. ಅಲ್ಲದೆ, ವಿವಾಹ ವಿಚ್ಛೇದನ ಕೋರಿ ಪತಿ ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯದಲ್ಲಿ ಸಲ್ಲಿಸಿರುವ ಅರ್ಜಿ ವಿಚಾರಣಾ ಹಂತದಲ್ಲಿದೆ. ಹೀಗಾಗಿ ಪ್ರಕರಣ ರದ್ದುಪಡಿಸಬೇಕು ಎಂದು ಕೋರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net