ಅಧಿಕಾರಿಗಳಿಂದ ಮಹಿಳಾ ಕಂಡಕ್ಟರ್‌ಗಳಿಗೆ ಕಿರುಕುಳದ ಆರೋಪ

ksrtc buses
ಕೆಎಸ್‌ಆರ್‌ಟಿಸಿ ಬಸ್
Published on

ಬೆಂಗಳೂರು: ಶಕ್ತಿ ಯೋಜನೆಗಾಗಿ ಕೆಎಸ್‌ಆರ್‌ಟಿಸಿಯಲ್ಲಿ ಮಹಿಳಾ ಕಂಡಕ್ಟರ್‌ಗಳಿಗೆ ಹಗಲು ರಾತ್ರಿ ಶ್ರಮಿಸುವಂತೆ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ತಿಂಗಳ ಋತುಚಕ್ರದ ಸಮಸ್ಯೆ ಇದ್ದರೂ ಡ್ಯೂಟಿ ಮಾಡಿ ಅಂತಾರೇ ಎಂದು ಕೆಎಸ್‌ಆರ್‌ಟಿಸಿಯ ಘಟಕ-೫, ಬೆಂಗಳೂರು ಕೇಂದ್ರೀಯ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನಿರ್ವಾಹಕಿ ಮಂಜಮ್ಮ ವಿಡಿಯೋ ಮಾಡಿ ಕಣ್ಣೀರಿಟ್ಟಿದ್ದಾರೆ.

ಅಧಿಕಾರಿಗಳ ಕಿರುಕುಳದ ಬಗ್ಗೆ ಸಿಟಿಎಂ ಅವರ ಗಮನಕ್ಕೆ ತಂದರೆ ಅವರು ದರ್ಪದ ಮಾತುಗಳನ್ನಾಡುತ್ತಾರೆ. ಅಧಿಕಾರಿಗಳ ಕಿರುಕುಳದ ಬಗ್ಗೆ ಸಿಎಂ ಸಿದ್ದರಾಮಯ್ಯ ಹಾಗೂ ಸಾರಿಗೆ ಸಚಿವ ರಾಮಲಿಂಗಾರೆಡ್ಡಿಯವರಿಗೆ ಪತ್ರ ಬರೆದಿದ್ದಾರೆ. ಡಿಪೋ ಮ್ಯಾನೇಜರ್ ಅವರು ಬೇಗ ಬಂದರೂ ಲೇಟ್ ಆಗಿ ಡ್ಯೂಟಿ ನೀಡುತ್ತಿದ್ದಾರೆ. ಎಷ್ಟೇ ತಡವಾದರೂ ಕೆಲಸ ಮುಗಿಸಿ ಮನೆಗೆ ಹೋಗುವಂತೆ ಕಿರುಕುಳ ನೀಡುತ್ತಿದ್ದಾರೆ. ಡಿಪೋದ ಇತರ ಅಧಿಕಾರಿಗಳ ಗಮನಕ್ಕೂ ತಂದರೂ ಅವರಿಂದಲೂ ಕಿರುಕುಳ ಆಗುತ್ತಿದೆ ಎಂದು ಆರೋಪಿಸಿದ್ದಾರೆ.

ಸುಳ್ಳು ಆರೋಪ ಮಾಡುತ್ತಿರುವ ಮಂಜಮ್ಮ!
ನಿರ್ವಾಹಕಿ ಮಂಜಮ್ಮ ಸುಳ್ಳು ಆರೋಪ ಮಾಡುತ್ತಿದ್ದಾರೆ ಎನ್ನಲಾಗಿದೆ. ಇವರು ೨೦೦೭ ಕ್ಕೆ ಸಂಸ್ಥೆಗೆ ಸೇರಿದ್ದು ೩೦೦ ದಿನಗಳಿಗಿಂತ ಹೆಚ್ಚಾಗಿ ಕರ್ತವ್ಯಕ್ಕೆ ಅನಧಿಕೃತ ಗೈರು ಹಾಜರಿಯಾಗಿದ್ದರೂ ಸಹ ಯಾವುದೇ ಪ್ರಕರಣಗಳಲ್ಲಿ ದಂಡ ವಿಧಿಸದೆ, ಶಿಸ್ತಿನ ಕ್ರಮ ತೆಗೆದುಕೊಳ್ಳದೆ ವಾಗ್ದಂಡನೆ ನೀಡಲಾಗಿದೆ. ಇವರಿಗೆ ಜನವರಿ ೨೦೧೨ ರಿಂದ ಫೆಬ್ರವರಿ ೨೦೨೪ ರ ವರೆಗೆ ಒಟ್ಟು ೧೨೬೦ ದಿನಗಳ ರಜೆ ನೀಡಲಾಗಿದೆ. ಅವರ ಕೋರಿಕೆಯ ಮೇರೆಗೆ ಪರಿವರ್ತನೆ ರಜೆ, ಗಳಿಕೆ ರಜೆ, ಶಿಶು ಪಾಲನ ರಜೆ ಹಾಗೂ ಅಸಾಧಾರಣ ರಜೆಗಳನ್ನು ಮಂಜೂರು ಮಾಡಲಾಗಿದೆ. ಆದರೂ ರಜೆಯನ್ನು ನೀಡಿರುವುದಿಲ್ಲವೆಂದು ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದಾರೆ. ಅದು ವಿಚಾರಣಾ ಹಂತದಲ್ಲಿದೆ. ಇವರು ೨೦೧೨ ರಿಂದಲೂ ಸಂಸ್ಥೆಯ ಅಧಿಕಾರಿಗಳು, ವಾಹನಗಳು, ವ್ಯವಸ್ಥೆಗಳ ಬಗ್ಗೆ ಕೆಟ್ಟದಾಗಿ ಬಿಂಬಿಸಿ ಅದನ್ನು ವಿಡಿಯೋ, ಆಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ನಿಗಮದ ವಿರುದ್ಧವಾಗಿ ಹರಿದುಬಿಡುವ ಇವರ ಹವ್ಯಾಸವಾಗಿದೆ. ನಿಗಮದ ನಿಯಮಾವಳಿಗಳಿಗೆ ವಿರುದ್ಧವಾಗಿ ವಾಟ್ಸ್‌ಆ್ಯಪ್ ಗ್ರೂಪ್‌ಗಳನ್ನು ಮಾಡಿ ವಿವಿಧ ವಿಭಾಗಗಳ ಸಿಬ್ಬಂದಿಯನ್ನು ಈ ಗ್ರೂಪ್‌ಗೆ ಸೇರಿಸಿ ಸಂಸ್ಥೆಯ ಬಗ್ಗೆ ಕೆಟ್ಟದಾಗಿ ಬಿಂಬಿಸುವ ವಿಡಿಯೋ ಆಡಿಯೋಗಳನ್ನು ಹರಿದುಬಿಡುವ ಪ್ರವೃತ್ತಿಯುಳ್ಳವರಾಗಿದ್ದಾರೆ. ಇವರು ಮಾಡಿರುವ ಆರೋಪಗಳು ಸತ್ಯಕ್ಕೆ ದೂರವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net