

ಬೆಂಗಳೂರು : ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಟಾಕ್ಸಿಕ್’ ಚಿತ್ರದ ಚಿತ್ರೀಕರಣಕ್ಕಾಗಿ ಯಶವಂತಪುರ ಹೋಬಳಿಯ ಪೀಣ್ಯ ಪ್ಲಾಂಟೇಷನ್ ಗ್ರಾಮದಲ್ಲಿ ಅರಣ್ಯ ಇಲಾಖೆಗೆ ಸೇರಿದೆ ಎನ್ನಲಾದ 20 ಎಕರೆ ಜಮೀನನ್ನು ಅನಧಿಕೃತವಾಗಿ ಒತ್ತುವರಿ ಮಾಡಿ, ಕಟ್ಟಡ ನಿರ್ಮಿಸಿದ ಸಂಬಂಧ ಕೆನರಾ ಬ್ಯಾಂಕ್ ಮತ್ತು ಕೆವಿಎನ್ ಫಿಲ್ಮ್ ಪ್ರೊಡಕ್ಷನ್ ಕಂಪನಿ ವಿರುದ್ಧ ಸಲ್ಲಿಕೆಯಾಗಿದ್ದ ಅರ್ಜಿ ಸಂಬಂಧ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.
ಅರಣ್ಯ ಜಮೀನು ಒತ್ತುವರಿ ತೆರವುಗೊಳಿಸಲು ನಿರ್ದೇಶಿಸುವಂತೆ ಕೋರಿ ಬೆಂಗಳೂರಿನ ವಕೀಲ ಜಿ. ಬಾಲಾಜಿ ನಾಯ್ಡು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನ ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಹಾಗೂ ಕೆ.ವಿ. ಅರವಿಂದ್ ಅವರ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಅರ್ಜಿದಾರರ ಪರ ವಕೀಲ ಎಂ.ಆರ್. ವಿಜಯ್‌ಕುಮಾರ್, 1896ರಂದು ಅಂದಿನ ಮೈಸೂರು ಸರ್ಕಾರವು ಬೆಂಗಳೂರು ಉತ್ತರ ತಾಲೂಕಿನ ಯಶವಂತಪುರ ಹೋಬಳಿಯಲ್ಲಿ 599 ಎಕರೆ ಜಮೀನನ್ನು ಪೀಣ್ಯ-ಜಾಲಹಳ್ಳಿ ಪ್ಲಾಂಟೇಷನ್ ಮೀಸಲು ಅರಣ್ಯ ಪ್ರದೇಶವೆಂದು ಘೋಷಿಸಿ ಗೆಜೆಟ್ ನೋಟಿಫಿಕೇಷನ್ ಹೊರಡಿಸಿತ್ತು.
ಇದೀಗ ಇದರ ಸರ್ವೇ ನಂ.2ರಲ್ಲಿನ 20 ಎಕರೆ 7 ಗುಂಟೆ ಕೆನರಾ ಬ್ಯಾಂಕ್ ಮತ್ತು ಕೆವಿಎನ್ ಫಿಲ್ಮ್ ಪ್ರೊಡಕ್ಷನ್ ಕಂಪನಿ ಅನಧಿಕೃತವಾಗಿ ಒತ್ತುವರಿ ಮಾಡಿ ಕಟ್ಟಡ ನಿರ್ಮಾಣ ಮಾಡುತ್ತಿವೆ. 2018ರಲ್ಲಿ ಈ ಎ್ಲ ಜಾಗವು ಅರಣ್ಯ ಜಮೀನು ಎಂಬುದಾಗಿ ಅರಣ್ಯ ಇಲಾಖೆ ಆದೇಶ ಹೊರಡಿಸಿದೆ. ಈ ಆದೇಶ ಪಾಲನೆ ಕುರಿತಂತೆ ನ್ಯಾಯಾಲಯಕ್ಕೆ ಅನುಪಾಲನೆ ವರದಿ ಸಲ್ಲಿಸಬೇಕು. ಕೆನರಾ ಬ್ಯಾಂಕ್ ಮತ್ತು ಕೆವಿಎನ್ ಫಿಲ್ಮ್ ಪ್ರೊಡಕ್ಷನ್ ಅನಧಿಕೃತವಾಗಿ ಒತ್ತುವರಿ ಮಾಡಿರುವ ಜಮೀನನ್ನು ತೆರವುಗೊಳಿಸಿ ಅರಣ್ಯ ಭೂಮಿಯಾಗಿ ಸಂರಕ್ಷಣೆ ಮಾಡಲು ಅರಣ್ಯ ಇಲಾಖೆ ಹಾಗೂ ಅದರ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂದು ಕೋರಿದರು.
ವಾದ ಆಲಿಸಿದ ನ್ಯಾಯಪೀಠ, ಪ್ರತಿವಾದಿಗಳಾಗಿರುವ ರಾಜ್ಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಬೆಂಗಳೂರು ನಗರದ ಉಪ ಅರಣ್ಯ ಸಂರಕ್ಷಣಾಧಿಕಾರಿ, ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ನೋಟಿಸ್ ಜಾರಿ ಮಾಡಿತು. ಹಾಗೆಯೇ, ಇತರೆ ಪ್ರತಿವಾದಿಗಳಾದ ಎಚ್‌ಎಂಟಿ ಲಿಮಿಟೆಡ್, ಕೆನರಾ ಬ್ಯಾಂಕ್‌ನ ಕೇಂದ್ರ ಕಚೇರಿಯ ವ್ಯಸ್ಥಾಪಕ ನಿರ್ದೇಶಕರು, ಕೆವಿಎನ್ ಫಿಲ್ಮ್ ಪ್ರೊಡಕ್ಷನ್ ಮಾಲೀಕರಿಗೆ ನೋಟಿಸ್ ಜಾರಿ ಮಾಡಿತು. ಮುಂದಿನ ವಿಚಾರಣೆ ವೇಳೆ ಉತ್ತರ ನೀಡಬೇಕು ಎಂದು ಎಲ್ಲ ಪ್ರತಿವಾದಿಗಳಿಗೆ ನಿರ್ದೇಶಿಸಿ, ವಿಚಾರಣೆಯನ್ನು ಆ.19ಕ್ಕೆ ಮುಂದೂಡಿತು.