ಸರ್ಕಾರಿ ಜಮೀನು ಒತ್ತುವರಿ ಆರೋಪ: - ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಹಾಜರಿಗೆ ಆದೇಶ

Published on

ಬೆಂಗಳೂರು: ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹಾಗೂ ಅವರ ಸಂಬಂಧಿ ಮಾಜಿ ಶಾಸಕ ಡಿ.ಸಿ.ತಮ್ಮಣ್ಣ ಮತ್ತಿತರರು ರಾಮನಗರ ಜಿಲ್ಲೆ ಬಿಡದಿ ಹೋಬಳಿಯ ಕೇತಗಾನಹಳ್ಳಿಯಲ್ಲಿ 14 ಎಕರೆ ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿದ್ದಾರೆ ಎಂಬ ಆರೋಪದ ಪ್ರಕರಣಕ್ಕೆ ಸಂಬಂಧಿಸಿದ ನ್ಯಾಯಾಂಗ ನಿಂದನೆ ಮೊಕದ್ದಮೆ ವಿಚಾರಣೆ ನಡೆಸಿದ ಹೈಕೋರ್ಟ್, ಇದೇ 29ಕ್ಕೆ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಖುದ್ದು ಹಾಜರಿಗೆ ಆದೇಶಿಸಿದೆ.

ಸರ್ಕಾರದ ಪರವಾಗಿ ಹಾಜರಿದ್ದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಕಿರಣ್ ವಿ.ರೋಣ ಅವರು, ಈಗಾಗಲೇ ಕೋರ್ಟ್‌ಗೆ ಈ ಸಂಬಂಧ ಪ್ರಮಾಣ ಪತ್ರ ಸಲ್ಲಿಸಲಾಗಿದ್ದು, ಕೈಗೊಳ್ಳಲಾಗಿರುವ ಕ್ರಮಗಳನ್ನು ವಿವರಿಸಿದರು. ಅಂತೆಯೇ ಈ ಪ್ರಮಾಣ ಪತ್ರದ ಅನುಸಾರ ಸರ್ಕಾರದ ಕ್ರಮವನ್ನು ಮಾನ್ಯ ಮಾಡುವಂತೆ ಕೋರಿದರು.

ಪ್ರತಿಯಾಗಿ ದೂರುದಾರ ಸಮಾಜ ಪರಿವರ್ತನಾ ಸಮುದಾಯದ ಪರ ಹಿರಿಯ ವಕೀಲ ಎಸ್. ಬಸವರಾಜ್ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗಿಂತಲೂ ಸ್ಥಳೀಯ ತಹಶಿಲ್ದಾರ್ ಮತ್ತು ಇತರ ಸಂಬಂಧಿಸಿದ ಅಧಿಕಾರಿಗಳನ್ನು ಕರೆಸಿ ವಿವರಣೆ ಪಡೆಯುವಂತೆ ಕೋರಿದರು. ಇದಕ್ಕೆ ಕಿರಣ್ ರೋಣ ತೀವ್ರ ಆಕ್ಷೇಪ ವ್ಯಕ್ತಪಡಿಸಿದರಲ್ಲದೆ ಕೋರ್ಟ್‌ಗೆ ಈ ರೀತಿ ನಿರ್ದೇಶನ ನೀಡಲು ಆಗದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net