

Dharmendra Pradhan: ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳಲ್ಲಿ ಬಿಜೆಪಿ ಮತ್ತು ಚುನಾವಣೆ ಆಯೋಗ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡು ಚುನಾವಣಾ ಕಳ್ಳಾಟ ಆಡ್ತಿವೆ ಎಂದು ಆರೋಪಿಸಿದ್ದ ರಾಹುಲ್ ಗಾಂಧಿ ವಿರುದ್ಧ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ವಾಗ್ದಾಳಿ ನಡೆಸಿದ್ದಾರೆ.
ದೆಹಲಿಯಲ್ಲಿ ಈ ಕುರಿತು ಮಾತನಾಡಿರುವ ಧರ್ಮೇಂದ್ರ ಪ್ರಧಾನ್, ''ರಾಹುಲ್ ಗಾಂಧಿಯವರ ಹೇಳಿಕೆ ಸುಳ್ಳು. ಈ ರೀತಿ ಹೇಳಿಕೆಯಿಂದ ಕಾಂಗ್ರೆಸ್ ದೇಶದ ಪ್ರಜಾಪ್ರಭುತ್ವವನ್ನ ಅವಮಾನಿಸುತ್ತಿದೆ. ಪ್ರತಿಪಕ್ಷಗಳು ಸಂಸತ್ತಿನ ಕಲಾಪ ಹಾಳು ಮಾಡಲು ದಿನಾಲೂ ಒಂದು ನೆಪವನ್ನು ಹುಡುಕುತ್ತಿವೆ. ಸಂಸತ್ನ ಘನತೆಗೆ ಧಕ್ಕೆ ತರಲು ಪ್ರಯತ್ನಿಸುತ್ತಿದ್ದಾರೆ'' ಎಂದು ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.
ಕಾಂಗ್ರೆಸ್ ನಾಯಕರು ಚುನಾವಣೆಯಲ್ಲಿ ಗೆದ್ದಾಗ ಮಾತ್ರ ಚುನಾವಣಾ ಆಯೋಗ, ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಡುತ್ತಾರೆ. ಕರ್ನಾಟಕ, ಹಿಮಾಚಲ ಪ್ರದೇಶ ಹಾಗೂ ತೆಲಂಗಾಣದಲ್ಲಿ ಕಾಂಗ್ರೆಸ್ ಗೆದ್ದಾಗ ಚುನಾವಣಾ ಆಯೋಗ ಸರಿಯಿತ್ತು. ಮಹಾರಾಷ್ಟ್ರ, ಹರಿಯಾಣದಲ್ಲಿ ಸೋತಾಗ ಆಯೋಗದ ಕಾರ್ಯಶೈಲಿಯನ್ನ ಪ್ರಶ್ನಿಸಲಾಗುತ್ತಿದೆ ಎಂದು ಹೇಳಿದರು.
ಚುನಾವಣೆಯಲ್ಲಿ ಮತಗಳ ಕಳ್ಳತನ ನಡೆಯುತ್ತಿದೆ ಎನ್ನುವ ಆರೋಪ ಕೇವಲ ಕಾಂಗ್ರೆಸ್ನ ರಾಜಕೀಯ ಗಿಮಿಕ್, ಇದು ಪ್ರಜಾಪ್ರಭುತ್ವವನ್ನು ಗೇಲಿ ಮಾಡುವ ಒಂದು ಮಾರ್ಗ. ಕಾಂಗ್ರೆಸ್ ಎಸ್ಸಿ, ಎಸ್ಟಿ, ಒಬಿಸಿಗಳ ಹೆಸರಿನಲ್ಲಿ ತುಷ್ಟೀಕರಣ ರಾಜಕಾರಣ ಮಾಡುತ್ತಿದೆ. ಈಗ ದೇಶದ ಜನ ಅವರನ್ನು ತಿರಸ್ಕರಿಸುತ್ತಿರುವಾಗ ಜನಾದೇಶವನ್ನ ಅವಮಾನಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಕಾಂಗ್ರೆಸ್ ಎಸ್ಸಿ, ಎಸ್ಟಿ, ಒಬಿಸಿ ಕುರಿತು ಮಾತನಾಡ್ತಿದೆ. ಆದರೆ, ಇತ್ತೀಚೆಗೆ ಕಾಂಗ್ರೆಸ್ ಸರ್ಕಾರಗಳಿರುವ ಕರ್ನಾಟಕ, ತೆಲಂಗಾಣದಲ್ಲಿ ಅವರ ಹಕ್ಕುಗಳನ್ನ ಕುಸಿದುಕೊಂಡಿದೆ. ದಶಕಗಳ ಕಾಲ ಅಧಿಕಾರದಲ್ಲಿದ್ದರೂ ಆ ವರ್ಗಗಳಿಗೆ ಕಾಂಗ್ರೆಸ್ ಏನೂ ಮಾಡಲಿಲ್ಲ, ಕೇವಲ ಮತಬ್ಯಾಂಕ್ ಸೃಷ್ಟಿಸಿಕೊಳ್ಳಲು ಪ್ರಯತ್ನಿಸಿತು. ಹೀಗಾಗಿ, ದೇಶದ ಜನ ಎಚ್ಚೆತ್ತುಕೊಂಡು ಕಾಂಗ್ರೆಸ್ ಪಕ್ಷವನ್ನ ತಿರಸ್ಕರಿಸುತ್ತಿದ್ದಾರೆ ಎಂದು ಪ್ರತಿಪಾದಿಸಿದರು.
ರಾಹುಲ್ ಗಾಂಧಿ ಹೇಳಿದ್ದೇನು?
ಬುಧವಾರ(ಜು.23) ಸಂಸತ್ ಬಳಿ ಸುದ್ದಿಗಾರರೊಂದಿಗೆ ರಾಹುಲ್ ಗಾಂಧಿ ಮಾತನಾಡಿ ‘ಬಿಹಾರರ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಕೇವಲ ಬಿಹಾರಕ್ಕೆ ಸಂಬಂಧಿಸಿದ್ದಲ್ಲ, ಮಹಾರಾಷ್ಟ್ರದಲ್ಲೂ ಚುನಾವಣೆ ವಂಚನೆ ನಡೆದಿದೆ. ಅದೇ ರೀತಿ ಕರ್ನಾಟಕದಲ್ಲೂ ಲೋಕಸಭಾ ಕ್ಷೇತ್ರಗಳಲ್ಲಿ ಚುನಾವಣಾ ಕಳ್ಳಾಟ ನಡದಿದೆ. ಮಹಾರಾಷ್ಟ್ರದಲ್ಲಿ ಚುನಾವಣಾ ಆಯೋಗವು ಮತದಾರರ ಪಟ್ಟಿ ಮತ್ತು ವಿಡಿಯೋ ದಾಖಲೆ ನೀಡಲು ನಿರಾಕರಿಸಿತು. ಈ ಬಗ್ಗೆ ಕಾಂಗ್ರೆಸ್ ಪತ್ತೆಹಚ್ಚಿದ ಕಾರ್ಯವಿಧಾನವೇ ಚುನಾವಣಾ ಆಯೋಗವನ್ನು ಬಿಹಾರದಲ್ಲಿ ಅದನ್ನು ಬದಲಾಯಿಸಲು ಪ್ರೇರೇಪಿಸಿದೆ" ಎಂದು ಆರೋಪಿಸಿದರು.
“ಕರ್ನಾಟಕದಲ್ಲಿ ನಾವು ಸ್ವಲ್ಪ ಸಂಶೋಧನೆ ಮಾಡಿದ್ದೇವೆ. ಕರ್ನಾಟಕದ ಒಂದು ಲೋಕಸಭಾ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು, ಎಲ್ಲಾ ಮತಗಟ್ಟೆಗಳಿಂದ ಮತದಾರರ ಪಟ್ಟಿಗಳನ್ನು ಸಂಗ್ರಹಿಸಿದ್ದೇವೆ. ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲೂ ಕಳ್ಳತನ ನಡೆದಿರುವುದು ನಮಗೆ ಕಂಡುಬಂದಿದೆ. ನಾನು ನಿಮಗೆ ಇವುಗಳೆಲ್ಲಾ ದಾಖಲೆಗಳೊಂದಿಗೆ ತೋರಿಸಬಹುದು. ಚುನಾವಣಾ ಆಯೋಗಕ್ಕೆ ಸಹ ತೋರಿಸಬಹುದು. ನಾವು ಆಯೋಗದ ಆಟವನ್ನು ಪತ್ತೆಹಚ್ಚಿದ್ದೇವೆ ಎಂಬುದು ಅರ್ಥವಾದ ನಂತರ ತಮ್ಮ ವಿಧಾನವನ್ನು ಬದಲಾಯಿಸಿದ್ದಾರೆ,” ಎಂದು ರಾಹುಲ್ ಗಾಂಧಿ ಹೇಳಿದರು. (ಏಜೆನ್ಸೀಸ್)