

Rahul Gandhi: 2024ರ ಲೋಕಸಭೆ ಚುನಾವಣೆಯಲ್ಲಿ ಮಹಾರಾಷ್ಟ್ರದಂತೆ ಕರ್ನಾಟಕದಲ್ಲೂ ಚುನಾವಣೆ ಕಳ್ಳತನ ನಡೆದಿದ್ದು, ನಮ್ಮ ಕಾಂಗ್ರೆಸ್ ಟೀಂ ಚುನಾವಣಾ ಆಯೋಗದ ಕಳ್ಳಾಟವನ್ನ ಬಯಲು ಮಾಡಿದೆ ಎಂದು ಬುಧವಾರ(ಜು. 23) ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಾಂಬ್ ಸಿಡಿಸಿದ್ದಾರೆ.
ಸಂಸತ್ ಬಳಿ ಬಿಹಾರರ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಯ ವಿರುದ್ಧ ಪ್ರತಿಭಟನೆ ಬಗ್ಗೆ ಸುದ್ಧಿಗಾರರು ಪ್ರಶ್ನಿಸಿದಾಗ ‘ಇದು ಕೇವಲ ಬಿಹಾರ ಪ್ರಕರಣಕ್ಕೆ ಸಂಬಂಧಿಸಿದ್ದಲ್ಲ, ಮಹಾರಾಷ್ಟ್ರದಲ್ಲೂ ಚುನಾವಣೆ ವಂಚನೆ ನಡೆದಿದೆ. ಮಹಾರಾಷ್ಟ್ರದಲ್ಲಿ ಚುನಾವಣಾ ಆಯೋಗವು ಮತದಾರರ ಪಟ್ಟಿ ಮತ್ತು ವಿಡಿಯೋ ದಾಖಲೆ ನೀಡಲು ನಿರಾಕರಿಸಿತು. ಈ ಬಗ್ಗೆ ಕಾಂಗ್ರೆಸ್ ಪತ್ತೆಹಚ್ಚಿದ ಕಾರ್ಯವಿಧಾನವೇ ಚುನಾವಣಾ ಆಯೋಗವನ್ನು ಬಿಹಾರದಲ್ಲಿ ಅದನ್ನು ಬದಲಾಯಿಸಲು ಪ್ರೇರೇಪಿಸಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದರು.
“ನಾವು ಕರ್ನಾಟಕದಲ್ಲಿ ಸ್ವಲ್ಪ ಸಂಶೋಧನೆ ಮಾಡಿದ್ದೇವೆ. ಒಂದು ಲೋಕಸಭಾ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು, ಎಲ್ಲಾ ಮತಗಟ್ಟೆಗಳಿಂದ ಮತದಾರರ ಪಟ್ಟಿಗಳನ್ನು ಸಂಗ್ರಹಿಸಿದ್ದೇವೆ. ಕರ್ನಾಟಕದ ಲೋಕಸಭಾ ಚುನಾವಣೆಯಲ್ಲೂ ಕಳ್ಳತನ ನಡೆದಿರುವುದು ನಮಗೆ ಕಂಡುಬಂದಿದೆ. ನಾನು ನಿಮಗೆ ಇವುಗಳೆಲ್ಲಾ ದಾಖಲೆಗಳೊಂದಿಗೆ ತೋರಿಸಬಹುದು. ಚುನಾವಣಾ ಆಯೋಗಕ್ಕೆ ಸಹ ತೋರಿಸಬಹುದು. ನಾವು ಆಯೋಗದ ಆಟವನ್ನು ಪತ್ತೆಹಚ್ಚಿದ್ದೇವೆ ಎಂಬುದು ಅರ್ಥವಾದ ಬಳಿಕ ತಮ್ಮ ವಿಧಾನವನ್ನು ಬದಲಾಯಿಸಿದ್ದಾರೆ” ಎಂದು ರಾಹುಲ್ ಗಾಂಧಿ ಹೇಳಿದರು.
“ಸಮಸ್ಯೆ ಏನೆಂದರೆ, ಅವರು ಮತದಾರರ ಪಟ್ಟಿಯನ್ನು ಕಾಗದದ ರೂಪದಲ್ಲಿ ನೀಡುತ್ತಾರೆ. ನಾವು ಅಂಥ ಪಟ್ಟಿಗಳನ್ನು ವಿಶ್ಲೇಷಿಸಲು ಸಾಧ್ಯವಿಲ್ಲ. ನಾವು ಮತದಾರರ ಪಟ್ಟಿಯನ್ನು ಸಂಗ್ರಹಿಸಿ ಡಿಜಿಟಲೈಸ್ ಮಾಡಿದ್ದು, ಅದಕ್ಕೆ ಆರು ತಿಂಗಳು ಹಿಡಿಯಿತು. ಈ ಪ್ರಕ್ರಿಯೆಯಿಂದ ನಾವು ಆಯೋಗದ ಕಳ್ಳಾಟವನ್ನ ಪತ್ತೆಹಚ್ಚಿದೆವು. ಯಾರು ಮತ ಹಾಕುತ್ತಾರೆ, ಮತದಾರರನ್ನು ಹೇಗೆ ಸೇರಿಸಲಾಗುತ್ತದೆ, ಹಳೆಯವರನ್ನು ಹೇಗೆ ತೆಗೆದುಹಾಕಲಾಗುತ್ತದೆ ಎಂಬುದನ್ನು ತಿಳಿದುಕೊಂಡೆವು” ಎಂದು ರಾಹುಲ್ ಗಾಂಧಿ ಹೇಳಿದರು.
2024ರ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಒಂಬತ್ತು ಸ್ಥಾನಗಳನ್ನು ಗೆದ್ದಿತ್ತು. ಬಿಜೆಪಿ 17 ಸ್ಥಾನಗಳನ್ನು ಪಡೆದಿತ್ತು.ಇದೇ ವೇಳೆ ಕರ್ನಾಟಕದ ಯಾವ ಲೋಕಸಭಾ ಕ್ಷೇತ್ರವನ್ನ ಅಧ್ಯಯನ ಮಾಡಿದ್ದೇವೆ ಎಂಬುದನ್ನ ರಾಹುಲ್ ಗಾಂಧಿ ತಿಳಿಸಿಲ್ಲ.(ಏಜೆನ್ಸೀಸ್)