ಚುನಾವಣಾ ಅಕ್ರಮ ಆರೋಪ : ಸಂಸದ ಸುಧಾಕರ್‌ಗೆ ಹೈಕೋರ್ಟ್ ರಿಲೀಫ್

highcourt
Published on

ಬೆಂಗಳೂರು: ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ಯಲಹಂಕ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮಾದವಾರ ಗೋವಿಂದಪ್ಪ ಎಂಬುವರ ಮನೆಯಲ್ಲಿ 4.8 ಕೋಟಿ ರೂ. ಹಣ ಜಪ್ತಿಯಾಗಿರುವ ಪ್ರಕರಣದಲ್ಲಿ ಚಿಕ್ಕಬಳ್ಳಾಪುರ ಬಿಜೆಪಿ ಸಂಸದ ಡಾ.ಕೆ.ಸುಧಾಕರ್ ವಿರುದ್ಧದ ಪ್ರಕರಣದ ವಿಚಾರಣೆಗೆ ಹೈಕೋರ್ಟ್ ತಡೆ ನೀಡಿದೆ.

ಚುನಾವಣಾ ಆಯೋಗದ ಅಧಿಕಾರಿಗಳು ದಾಖಲಿಸಿದ್ದ ಪ್ರಕರಣ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ಜೆಎಂಎಫ್‌ಸಿ ಕೋರ್ಟ್ ವಿಚಾರಣೆಗೆ ತಡೆ ಕೋರಿ ಡಾ.ಕೆ.ಸುಧಾಕರ್ ಹಾಗೂ ಗೋವಿಂದಪ್ಪ ಸಲ್ಲಿಸಿದ ಪ್ರತ್ಯೇಕ ಅರ್ಜಿಗಳನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

ಈ ವೇಳೆ ಡಾ. ಕೆ.ಸುಧಾಕರ್ ಪರ ವಾದ ಮಂಡಿಸಿದ ಬಿ.ವಿ.ಆಚಾರ್ಯ, ಗೋವಿಂದಪ್ಪ ಅವರ ಮನೆಯಲ್ಲಿ ಚುನಾವಣಾಧಿಕಾರಿಗಳು 4.8 ಕೋಟಿ ರೂ. ಜಪ್ತಿ ಮಾಡಿದ್ದರು. ಆ ಹಣಕ್ಕೂ ಡಾ. ಸುಧಾಕರ್ ಅವರಿಗೆ ಯಾವುದೇ ಸಂಬಂಧವಿಲ್ಲ. ಗೋವಿಂದಪ್ಪ ಹಿಂದೆ ಡಾ. ಸುಧಾಕರ್ ಪ್ರತಿನಿಧಿಸುವ ರಾಜಕೀಯ ಪಕ್ಷದ ಪದಾಧಿಕಾರಿ ಆಗಿದ್ದರು, ಹಣ ಜಪ್ತಿ ಮಾಡಿದ ಪ್ರದೇಶ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ ಮತ್ತು ಆ ಕ್ಷೇತ್ರದಿಂದ ಡಾ. ಸುಧಾಕರ್ ಸ್ಪರ್ಧಿಸಿದ್ದು, ಜಪ್ತಿ ಮಾಡಿದ ಹಣ ಮತದಾರರಿಗೆ ಹಂಚುವ ನಿಟ್ಟಿನಲ್ಲಿ ಸಂಗ್ರಹಿಸಿ ಇಡಲಾಗಿತ್ತು ಎಂಬ ಊಹೆಯ ಮೇರೆಗೆ ಅರ್ಜಿದಾರರ ವಿರುದ್ಧ ಐಪಿಸಿ 171-ಬಿ ಅಡಿ ಪ್ರಕರಣ ದಾಖಲಿಸಲಾಗಿದೆ.

ಆದರೆ, ಐಪಿಸಿ-171-ಬಿ ಮತದಾರರಿಗೆ ಆಮಿಷ ಅಥವಾ ಲಂಚ ನೀಡುವ ಬಗ್ಗೆ ವ್ಯಾಖ್ಯಾನಿಸುತ್ತದೆ. ಅದರಂತೆ ಓಟಿಗಾಗಿ ಲಂಚ ಅಥವಾ ಹಣ ಹಂಚುವವರು ಮತ್ತು ಹಣ ತೆಗೆದುಕೊಳ್ಳುವವರು ಇಬ್ಬರು ಇರಬೇಕು. ಈ ಪ್ರಕರಣದಲ್ಲಿ ಅಂತಹದ್ದು ನಡೆದಿಲ್ಲ. ಮತದಾರರಿಗೆ ಹಂಚಲು ಹಣ ಇಡಲಾಗಿತ್ತು ಎಂಬುದು ಸಾಭೀತಾಗಿಲ್ಲ, ಹಣ ತೆಗೆದುಕೊಳ್ಳುವವರೂ ಇಲ್ಲ. ಇದೊಂದು ‘ಮೇಲ್ನೋಟ’ದ ಪ್ರಕರಣವಾಗಿದೆಯಷ್ಟೇ ಎಂದು ವಾದಿಸಿದರು.

ಮುಖ್ಯವಾಗಿ ಈ ಪ್ರಕರಣದಲ್ಲಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ವಿಚಾರಣೆಗೆ ಆದೇಶಿಸಿದೆ. ಆದರೆ, ಈ ಪ್ರಕರಣ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ವ್ಯಾಪ್ತಿಗೆ ಬರುತ್ತದೆ. ಹಾಗಾಗಿ, ಮ್ಯಾಜಿಸ್ಟ್ರೇಟ್ ನ್ಯಾಯಾಲಯ ವಿಚಾರಣೆಗೆ ಆದೇಶಿಸಿರುವುದು ಕಾನೂನು ಬಾಹಿರ. ಈ ಹಿನ್ನೆಲೆಯಲ್ಲಿ ಅರ್ಜಿದಾರರ ವಿರುದ್ಧದ ಪ್ರಕರಣ ರದ್ದುಪಡಿಸಬೇಕು ಎಂದು ಕೋರಿದರು.

ಇದಕ್ಕೆ ಆಕ್ಷೇಪಿಸಿದ ಸರ್ಕಾರದ ಪರ ವಕೀಲರು ಪ್ರಕರಣ ರದ್ದುಪಡಿಸಬಾರದು, ಚುನಾವಣಾ ನೋಡಲ್ ಅಧಿಕಾರಿಗೆ ಅರ್ಜಿದಾರರು ವಾಟ್ಸ್‌ಪ್ ಸಂದೇಶ ಕಳಿಸಿದ್ದು, ಫೋನ್ ಮಾಡಿರುವ ಸಾಕ್ಷಿ ಇದೆ. 10 ಕೋಟಿ ರೂ. ಸಂಗ್ರಹಿಸಿಟ್ಟಿದ್ದ ಬಗ್ಗೆ ನೋಡಲ್ ಅಧಿಕಾರಿಗೆ ಮಾಹಿತಿ ಬಂದಿತ್ತು. ಅದನ್ನು ಅವರು ಸಂಬಂಧಪಟ್ಟ ನೀತಿ ಸಂಹಿತೆ ಜಾರಿ ತಂಡದ ಅಧಿಕಾರಿಗೆ ರವಾನಿಸಿದ್ದರು. ಅದರಂತೆ ದಾಳಿ ನಡೆಸಿದಾಗ 4.8 ಕೋಟಿ ರೂ. ಸಿಕ್ಕಿದೆ. ಆದ್ದರಿಂದ ಅರ್ಜಿದಾರ ಆರೋಪಿಗಳ ವಿಚಾರಣೆಗೆ ಅವಕಾಶ ನೀಡಬೇಕು ಎಂದು ಕೋರಿದರು. ಆದರೆ, ನ್ಯಾಯಪೀಠ ಆ ಮನವಿಯನ್ನು ತಳ್ಳಿಹಾಕಿ, ಪ್ರಕರಣಕ್ಕೆ ತಡೆ ನೀಡಿ ಆದೇಶಿಸಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net