ಲೀಲಾಮಾತ್ರದಿಂದ ಪರಿಗ್ರಹಿಸಿ ಶಿವಯೋಗದ ನೆಲೆ ಕಾಣಿಸಿದ ಅಲ್ಲಮ

AllamaPrabhu
Published on
ಮಲ್ಲೇಪುರಂ ವೆಂಕಟೇಶ
ಮರುಳುಶಂಕರದೇವರು ನಿರ್ವಯಲು ಹೊಂದಿದರು. ಅಲ್ಲಿದ್ದ ಶರಣಗಣ ಅದನ್ನು ಕಂಡರು. ಅಲ್ಲಮಪ್ರಭುವಿನ ಶಿವತ್ವದ ನೆಲೆಯನ್ನು ಕಂಡು ಬೆರಗುಗೊಂಡರು. ಆಗ ಬಸವಣ್ಣ ಅಲ್ಲಮರನ್ನು ತನ್ನ ಮಠಕ್ಕೆ ಕರೆದೊಯ್ದರು. ಅದೊಂದು ವಿಜೃಂಭಣೆಯ ಸಂಗತಿ. ಬಸವಣ್ಣನು ಇದ್ದ ಶ್ರೀಮಠ ಮುತ್ತಿನ ತೋರಣದಿಂದ ಅಲಂಕೃತ ವಾಗಿತ್ತು. ಅಲ್ಲಿ ಪ್ರಭುವಿಗೆ ನಡೆಮುಡಿಯನ್ನು ಹಾಕಲಾಗಿತ್ತು. ಬಣ್ಣಬಣ್ಣದ ರಂಗವಲ್ಲಿಯನ್ನು ಶರಣೆಯರು ಬಿಡಿಸಿದ್ದರು. ಪಂಚಮಹಾವಾದ್ಯಗಳು ಮೊಳಗುತ್ತಿರುವಾಗ ಕಳಸಕನ್ನಡಿಯಿಂದ ಅಲ್ಲಮನನ್ನು ಅಲ್ಲಿದ್ದವರೆಲ್ಲ ಎದುರುಗೊಂಡರು. ಬಸವಣ್ಣನು ಅಲ್ಲಮನಿಗೆ ಕೈಗೊಟ್ಟನು. ಮಡಿವಾಳ ಮಾಚಿದೇವರು ‘ಅವಧಾರು...ಅವಧಾರು’ ಎಂದರು. ಅಲ್ಲಮನು ಸೊಡ್ಡಳ ಬಾಚರಸರ ಹೆಗಲ ಮೇಲೆ ಹಸ್ತವನ್ನಿಟ್ಟನು. ಚೆನ್ನಬಸವರಾಜ ದೇವರೊಡನೆ ಮುಂದೆ ಮುಂದೆ ನಸುನಗೆ ಬೀರುತ್ತ ಏಕಾಂತದ ಶ್ರೀಮಠಕ್ಕೆ ಬಂದು ಮೂರ್ತಿಗೊಂಡನು. ಆಗ ಬಸವಣ್ಣನವರು ಪ್ರಭುದೇವರ ಶ್ರೀಪಾದಾರ್ಚನೆಯನ್ನು ಮಾಡಿದರು.

ಬಸವಣ್ಣನವರು ಅಲ್ಲಮನಿಗೆ ಮಾಡಿದ ಶಿವ ಪಾದಾರ್ಚನೆ ಯನ್ನು ಶಿವಗಣಪ್ರಸಾದಿ ಮಹಾದೇವಯ್ಯನು ಲೋಕೋತ್ತರವಾಗಿ ಬಣ್ಣಿಸಿದ್ದಾನೆ. ಅದೊಂದು ಆಧ್ಯಾತ್ಮಿಕ ರೂಪಕ. ಶಿವಗಣಪ್ರಸಾದಿಯ ಮಾತನ್ನು ನಾವು ಒಳಗಿವಿಯಿಂದ ಕೇಳೋಣ:

ಪರಿಮಿತಕೆ ನಡೆತಂದು/ ಹರುಷದ ಸಿಂಹಾಸನದ ಮೇಲೆ ಪರಮಗುರು ಮೂರ್ತಿಗೊಂಡಿರಲು/ಪರಮಾನಂದ ಜಲದಿಂದ ಪಾದಾರ್ಚನೆಯಂ ಮಾಡಿ/ದಿವ್ಯಗಂಧವೆಂಬ ಸುಗಂಧಮಂ ಲೇಪಿಸಿ/ಅಕ್ಷಯವೆಂಬ ಅಕ್ಷತೆಯನ್ನಿಟ್ಟು/ ಹೃದಯಕಮಲ ಪುಷ್ಪ ದಿಂದ ಪೂಜೆಯಂ ಮಾಡಿ/ಜ್ಞಾನವಾಸನೆಯೆಂಬ ಧೂಪಮಂ ಬೀಸಿ/ಸುಜ್ಞಾನವೆಂಬ ದೀಪಾರತಿಯನೆತ್ತಿ/ ಭಕ್ತಿರಸಾಯನವೆಂಬ ನೈವೇದ್ಯಮಂ ಸಮರ್ಪಿಸಿ/ಪರಮಹರಷೋದಕವನೆ ಹಸ್ತಮಜ್ಜ

ನಕ್ಕೆರೆದು/ ತ್ರಿಕರಣಶುದ್ಧವೆಂಬ ತಾಂಬೂಲಮಂ ಕೊಟ್ಟು/ ಸಮರ ಸಸಂಗದಿಂದ ಕೂಡಲಸಂಗಮದೇವರ ಶರಣ/ಪ್ರಭುದೇವರ ಕರುಣವೆನಗಾಯಿತ್ತು(ಶಿವಗಣಪ್ರಸಾದಿ. ಶೂ.ಸಂ. ಪು-102)

ಈ ವಚನಕ್ಕೆ ಎರಡು ನೆಲೆಗಳುಂಟು. ಒಂದು ಭೌತಿಕರೂಪ ಮತ್ತೊಂದು ಅಧ್ಯಾತ್ಮದ ಸಾಂಕೇತಿಕ ರೂಪಕ! ಒಂದು ಅಚ್ಚರಿಯ ವಿಷಯವೆಂದರೆ, ಮೂರ್ತ ಪದಾರ್ಥಗಳು ಅಮೂರ್ತ ಪದಾರ್ಥದ ಸಂಕೇತದೊಡನೆ ಸಮರಸಗೊಳ್ಳುವುದು. ಬಸವಣ್ಣನು ಮಾಡಿದ ಪಾದಾರ್ಚನೆಯ ಸಂದರ್ಭ ವಿಶಿಷ್ಟವಾದುದು. ಆ ವಿಶಿಷ್ಟತೆಯನ್ನು ಅಧ್ಯಾತ್ಮದ ನೆಲೆಯಲ್ಲಿ ಶಿವಗಣಪ್ರಸಾದಿ ಕಂಡರಿಸುತ್ತಾನೆ. ಆ ಸಂಗತಿಗಳನ್ನು ತುಸುತುಸುವೇ ಕಾಣಲು ಯತ್ನಿಸೋಣ. ಅಲ್ಲಮಪ್ರಭು ಸಿಂಹಾಸನದ ಮೇಲೆ ಮೂರ್ತಿಗೊಂಡನಷ್ಟೆ. ಅದು ಹರುಷದ ಸಿಂಹಾಸನವಾಗಿತ್ತು. ಬಸವಣ್ಣ ನೀರಿನಿಂದ ಅಲ್ಲಮನ ಪಾದ ಪ್ರಕ್ಷಾಳನೆಯನ್ನು ಮಾಡಿದ. ಅದು ಕೇವಲ ಜಲವಾಗಿರಲಿಲ್ಲ. ಪರಮಾನಂದದ ಸ್ವರೂಪವಾಗಿತ್ತು. ಅಲ್ಲಮನ ಪಾದಗಳಿಗೆ ಸುಗಂಧವನ್ನು ಬಸವಣ್ಣ ಲೇಪಿಸಿದ. ಅದು ದಿವ್ಯಗಂಧದ ಸ್ವರೂಪವಾಗಿತ್ತು. ಕಮಲ ಪುಷ್ಪದಿಂದ ಬಸವಣ್ಣನು ಪೂಜೆಯನ್ನು ಮಾಡಿದ. ಅದು ಹೃದಯಕಮಲದ ಪುಷ್ಪವಾಗಿತ್ತು. ಅನಂತರ ಧೂಪವನ್ನು ಬೀಸಿದನು. ಅದು ಜ್ಞಾನವೆಂಬ ಪರಿಮಳವಾಗಿತ್ತು. ಬಸವಣ್ಣನು ಎಲ್ಲಾ ಬತ್ತಿಗಳಿಂದ ಕೂಡಿದ ದೀಪಾರತಿಯನ್ನು ಎತ್ತಿದನು. ಅದು ಸುಜ್ಞಾನವೆಂಬ ದೀಪಾರತಿ

ಯಾಗಿತ್ತು. ಅಲ್ಲಮನಿಗೆ ನೈವೇದ್ಯವನ್ನು ಅರ್ಪಿಸಿದನು. ಅದು ಭಕ್ತಿರಸಾಯನವೆಂಬ ನೈವೇದ್ಯವಾಗಿತ್ತು. ಆಮೇಲೆ ನೀರಿನಿಂದ ಕೈಗಳನ್ನು ಮಜ್ಜನಮಾಡಿಸಿದನು. ಅದು ಹರುಷವೆಂಬ ಉದಕವಾಗಿತ್ತು. ಎಲೆ, ಅಡಿಕೆ ಮತ್ತು ಸುಣ್ಣದಿಂದ ಲೇಪಿತಗೊಂಡ ತಾಂಬೂಲವನ್ನು ಕೊಟ್ಟನು. ಅದು ಕಾಯಾ, ವಾಚಾ, ಮನಸಾ ಎಂಬ ತ್ರಿಕರಣವಾಗಿತ್ತು. ಇದೀಗ ಕೂಡಲಸಂಗಮನ ಕೃಪೆಯಿಂದ ಅಲ್ಲಮ-ಬಸವಣ್ಣ ಇಬ್ಬರೂ ಸಮರಸಸಂಗದಲ್ಲಿ ನೆಲೆನಿಂತುಬಿಟ್ಟರು.

ಇಲ್ಲಿ ಬರುವ ಸಾಂಕೇತಿಕ ವಿವರಗಳು ಆಧ್ಯಾತ್ಮಿಕ ಅರ್ಥದ ಹಲವು ಪದರುಗಳನ್ನು ತಿಳಿಸುತ್ತವೆ. ಬಸವಣ್ಣನು ಅಲ್ಲಮನಿಗೆ ನಿವಾಳಿಯೆತ್ತುತ್ತಾ ‘ಓಂ ಭೂಃ ಭುವಃ ಭಗೋದೇವಸ್ಯ ಧೀಮಹಿ’ ಎಂದು ಹೇಳುತ್ತ, ಯತೋ ವಾಚೋ ನಿವರ್ತಂತೇ ಅಪ್ರಾಪ್ಯ ಮನಸಾ ಸಹ ತಸ್ಮೈ ಶ್ರೀಗುರುಲಿಂಗವೇ ಶರಣೆಂಬುದೆನ್ನ ಮನವು ಹೀಗೆಂದು ಪೂವೋಕ್ತ ಮಾತುಗಳನ್ನು ಹೇಳುತ್ತ, ಅಷ್ಟ ವಿಧಾರ್ಚನೆ ಮತ್ತು ಷೋಡಶೋಪಚಾರವನ್ನು ಮಾಡುತ್ತ; ಅಲ್ಲಮನಿಗೆ ಅಭಿವಂದಿಸಿದನು. ಇಲ್ಲಿ ನಡೆದ ‘ಪಾದಾರ್ಚನೆ’ ಕೇವಲ ಭೌತಿಕ ಸ್ವರೂಪದ್ದಲ್ಲ ಎಂಬುದಕ್ಕೆ ‘ನಿತ್ಯನೆಂಬ ಭಕ್ತನ ಮನೆಗೆ ಘನಚೈತನ್ಯನೆಂಬ ಜಂಗಮ ಬಂದರೆ, ಜಲವಿಲ್ಲದ ಜಲದಲ್ಲಿ ಪಾದಾರ್ಚನೆಯ ಮಾಡಿದರೆ ಆ ಪಾದೋದಕವೇ ಮಹಾಪಾದೋದಕ’ ಎನ್ನುವ ಚೆನ್ನಬಸವಣ್ಣನ ಮಾತನ್ನು ಪರೋಕ್ಷವಾಗಿ ಪರಿಗ್ರಹಿಸಬೇಕಾಗುತ್ತದೆ. ಮಡಿವಾಳ ಮಾಚಿದೇವರು ಸತ್ತು-ಚಿತ್ತು-

ಆನಂದ ನಿತ್ಯ ಪರಿಪೂರ್ಣ ಎಂದು ಹೇಳುವ ‘ಸತ್ತೇ ಗುರು, ಚಿತ್ತೇ ಲಿಂಗ, ಆನಂದವೇ ಜಂಗಮ, ನಿತ್ಯವೇ ಪ್ರಸಾದ, ಪರಿಪೂರ್ಣವೇ ಪಾದೋದಕ’ ಎಂದು ಅವಗ್ರಹಿಸುತ್ತಾರೆ. ಅದೇ ರೀತಿ ಸೊಡ್ಡಳ ಬಾಚರಸ, ಹಡಪದಪ್ಪಣ್ಣ ಮುಂತಾದವರು ಅಲ್ಲಮನನ್ನು ನಿತ್ಯದ ನೆಲೆಯಲ್ಲಿ ಅರ್ಚಿಸುತ್ತಾರೆ. ಈ ದೃಶ್ಯ ವಾšನಕ್ಕೆ ಅಗೋಚರವಾದುದು. ಇದು ಅಭೇದ ಸ್ವರೂಪದ ಅರ್ಚನೆ. ಅಲ್ಲಮನು ಲೀಲಾಮಾತ್ರದಿಂದ ಇವನ್ನೆಲ್ಲವನ್ನು ಪರಿಗ್ರಹಿಸಿದ. ಅನಂತರ ಪ್ರತಿಯೊಬ್ಬ ಶರಣರಿಗೂ ಶಿವಯೋಗದ ನೆಲೆಯನ್ನು ಕಾಣಿಸಿದ!

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net