

ಇಂಥ ಮಹಾಮಹಿಮನನ್ನು ಕಲ್ಯಾಣ ಪಟ್ಟಣಕ್ಕೆ ಸ್ವಾಗತಿಸಲು ಬಸವಣ್ಣ ಮುಂದಾಗಿದ್ದಾನೆ. ಅದೊಂದು ವೈಭವದ ದೃಶ್ಯ. ಕಲ್ಯಾಣಕ್ಕೆ ಕಲ್ಯಾಣವೇ ಮದುವಣಗಿತ್ತಿಯ ಸಂಭ್ರಮವನ್ನು ಹೊತ್ತಿದೆ. ಕಲ್ಯಾಣದ ಶರಣ ಸಮೂಹ ಅಲ್ಲಮನಿಗಾಗಿ ನೆರೆದಿದೆ. ಕಲ್ಯಾಣದ ಬೀದಿಯಲ್ಲಿ ಭಕ್ತಜನರು ಗುಂಪುಗೂಡಿದ್ದಾರೆ. ಬಸವಣ್ಣನ ಎಡ-ಬಲಗಳಲ್ಲಿ ಭಕ್ತರು ನಡೆದು ಬರುತ್ತಿದ್ದಾರೆ. ಅವನ ಹಿಂಭಾಗದಲ್ಲಿ ನಾನಾ ದೇಶದಿಂದ ಕಲ್ಯಾಣಕ್ಕೆ ಬಂದ ಅರಸುಕುಮಾರರ ಗುಂಪಿನ ಕೂಟ ನಡೆದು ಬರುತ್ತಿದೆ.
ಮುಂಭಾಗದಲ್ಲಿ ಎಡಬಿಡದೆ ಹೊಗಳುವ ಸಮೂಹದ ನಾನಾ ಜನರು ತುಂಬಿದ್ದಾರೆ. ಬಸವದಂಡಾಧೀಶನ ಜೊತೆಗೆ ಮಾವುತರು, ಮಾನ್ಯರು, ಸಾರಥಿಗಳು, ಕುದುರೆ ಸವಾರರು, ಕರಣಿಕರು, ಕವಿಗಳು, ವಿದ್ವಾಂಸರು, ನಾಟ್ಯಶಾಸ್ತ್ರ ಬಲ್ಲಿದರು-ಇತರೇತರರು ಅಲ್ಲಮನನ್ನು ಇದಿರ್ಗೆಳ್ಳಲು ಸಂಭ್ರಮದಿಂದಲೂ ಭಕ್ತಿಯ ಒಲುಮೆಯಿಂದಲೂ ಬರುತ್ತಿದ್ದಾರೆ.
ಕಲ್ಯಾಣ ಪಟ್ಟಣವನ್ನು ನೋಡುವುದಕ್ಕೆ ಎರಡು ಕಣ್ಣು ಸಾಲದು. ಅಲ್ಲಲ್ಲಿ ಸತ್ತಿಗೆಯ ಸಾಲುಗಳಿವೆ. ಹಲವು ಬಗೆಯ ಚಾಮರಗಳನ್ನು ಹಿಡಿದವರು ಬಸವಣ್ಣನ ಸುತ್ತ ನಿಂತಿದ್ದಾರೆ. ಅಲ್ಲಲ್ಲಿ ಕೆಲವರು ಕೈಬೆತ್ತವನ್ನು ಹಿಡಿದಿದ್ದಾರೆ. ಬಗೆಬಗೆಯ ವಾದ್ಯಗಳನ್ನು ನುಡಿಸುತ್ತ ಕಲಾವಿದರ ಗುಂಪೇ ಅಲ್ಲಿ ನಿಂತಿದೆ! ಚಾಮರಸನ ನುಡಿಯಲ್ಲಿ ಆ ವಿವರಗಳನ್ನು ವರ್ಣನಾತ್ಮಕವಾಗಿ ಕೇಳೋಣ:
ಕನ್ನಡಿಯ ಕಳಸಗಳ ವಿಳಸದ/ಹೊನ್ನಗೇದಗೆಗರಿಯ ಮುತ್ತಿನ/ಚೆನ್ನದಂಡೆಯ ಪೂಬಿಡಿದ ನರುಗಂಪುಗಳ ಮುಡಿಯ/ ರನ್ನದಲಿ ರಂಜಿಸಿದ ತೊಡಿಗೆಗ/ಳುನ್ನತಿಯ ಸಿಂಗಾರವೊಪ್ಪುವ ಕನ್ನೆಯರು/ ಸಹಿತಿದಿರುವೋದನು ಬಸವನಲ್ಲಮಗೆ (ಪ್ರಭು.ಲೀ.22-20)
ಬಸವಣ್ಣನು ಕಲ್ಯಾಣದ ಕನ್ನೆಯರ ಜೊತೆಗೆ ಅಲ್ಲಮನನ್ನು ಇದಿರುಗೊಳ್ಳಲು ಹೊರಟ. ಆ ಕನ್ನೆಯರು ಕನ್ನಡಿಗಳನ್ನೂ ಕಳಸಗಳನ್ನೂ ಹೊತ್ತಿದ್ದರು. ಪರಿಮಳ ಬೀರುವ ಪುಷ್ಪಗಳನ್ನು ಮುಡಿಯಲ್ಲಿ ಧರಿಸಿಕೊಂಡಿದ್ದರು. ಅವರು ತೊಟ್ಟಿದ್ದ ರತ್ನದ ಆಭರಣಗಳು ಅತಿಶಯವಾಗಿದ್ದುವು. ಕೆಲವು ಮುತ್ತೈದೆಯರು ಮಂಗಳಾರತಿಯನ್ನು ಹಿಡಿದು ಬರುತ್ತಿದ್ದರು.
ಅಲ್ಲಮನ ಬರುವಿಕೆ ಕಲ್ಯಾಣ ಪಟ್ಟಣದ ಪ್ರತಿಯೊಬ್ಬರಲ್ಲೂ ಉತ್ಸಾಹವನ್ನು ತುಂಬಿತ್ತು. ಎಲ್ಲಿ ನೋಡಿದರೂ ಛತ್ರ-ಚಾಮರಗಳೇ ಕಾಣಿಸುತ್ತಿದ್ದವು. ಅಲ್ಲಲ್ಲಿ ಪತಾಕೆ-ಸೀಗುರಿಗಳು ಕಣ್ಣಿಗೆ ಬೀಳುತ್ತಿದ್ದವು. ಪುರಜನರ ಸಂತೋಷಕ್ಕೆ ಪಾರವೇ ಇರಲಿಲ್ಲ. ಹೀಗೆ ಕಲ್ಯಾಣಪಟ್ಟಣವು ಸಂಭ್ರಮದಲ್ಲಿ ಇರುವಾಗ ಕೆಲವು ಚಾಡಿಕೋರರು ಬಿಜ್ಜಳರಾಯನ ಬಳಿಗೆ ಬಂದರು. ಅವರು ರಾಯನಿಗೆ ಪಟ್ಟಣದಲ್ಲಿ ನಡೆಯುತ್ತಿರುವ ಸಂಭ್ರಮವನ್ನು ಹೇಳುತ್ತ ದೂರಿದರು! ಅಲ್ಲಿ ನಡೆಯುತ್ತಿರುವ ಸಂಗತಿಗಳನ್ನು ವರ್ಣಿಸಿದರು. ಆಗ ಬಿಜ್ಜಳನು ‘ಏನು ಕೌತುಕ? ಬಸವ ಏನ ನೆಗಳಿದನು? ಭಕ್ತರ ಅಭಿಮತವ ತಾನೆ ಬಲ್ಲನು? ತುದಿಯಲಿ ತಾನೆ ಕಾಣಲಿಬಹುದು. ಕಾರಿಯವ’ ಎಂದನು ಅವನೀಶನು! ಈ ಮಾತುಗಳನ್ನು ಬಿಜ್ಜಳರಾಯನು ಹೇಳುತ್ತ ಚಾಡಿಕೋರರ ಮಾತುಗಳನ್ನು ನಿರಸನಗೊಳಿಸಿಬಿಟ್ಟನು.
ಬಸವಣ್ಣನು ಅಲ್ಲಮಪ್ರಭುವನ್ನು ಇದಿರುಗೊಳ್ಳುವ ಪರಿ ನಮ್ಮ ಸಂಸ್ಕೃತಿಗೆ ಅನುಗುಣವಾಗಿದೆ! ಊರಿಗೊ ಪಟ್ಟಣಕ್ಕೊ ಹಿರಿಯರು, ಮಹಾಂತರು ಬಂದಾಗ ಇದಿರುಗೊಂಡು ಸತ್ಕರಿಸುವುದು ನಮ್ಮ ಸಂಸ್ಕೃತಿಯ ರಿವಾಜು. ಚಾಮರಸನು ನೀಡಿರುವ ಎಲ್ಲಾ ವಿವರಗಳು ನಮ್ಮ ಸಂಸ್ಕೃತಿಯ ರೀತಿ-ರಿವಾಜುಗಳನ್ನು ಪ್ರತಿಮಿಸುತ್ತವೆ. ಕನ್ನಡ ಸಂಸ್ಕೃತಿಯ ಒಂದು ನೋಟ ನಮಗೆ ಇಲ್ಲಿ ಕಾಣಸಿಗುತ್ತದೆ. ಗ್ರಾಮ, ನಗರ, ಹಳ್ಳಿ ಎಲ್ಲಾ ಕಡೆಯೂ ದೇವರ ಉತ್ಸವಗಳಲ್ಲೂ, ಜಾತ್ರೆಗಳ ಸಂದರ್ಭಗಳಲ್ಲಿಯೂ ವಾರ್ಷಿಕ ದೈವತಾಚರಣೆಗಳಲ್ಲಿಯೂ ನಾವು ಇದನ್ನು ಕಾಣುತ್ತೇವೆ. ಬಸವಣ್ಣ, ಅಲ್ಲಮನ ಬರುವಿಕೆಯನ್ನು ನಿರೀಕ್ಷಿಸಿ ಸಮಸ್ತ ಜೀವಜಾಲವನ್ನು ಕರೆದೊಯ್ಯುವ ವಿಶಿಷ್ಟ ಪರಿ ನಮಗಿಲ್ಲಿ ಕಾಣಿಸುತ್ತಿದೆ.
ಇತ್ತ ಅಲ್ಲಮಪ್ರಭುವು ಬಸವಣ್ಣನು ತನ್ನನ್ನು ಹೇಗೆ ಗುರುತಿಸುವನೋ ನೋಡಬೇಕೆಂದು ಯೋಚಿಸಿದ. ಅವನು ಲೀಲಾವಿನೋದ ದಿಂದ ವೇಷವನ್ನು ಹಾಕುವುದೆಂದು ನಿಶ್ಚೈಸಿಕೊಂಡನು. ತಾನು ಈಗಿರುವ ರೀತಿಯಲ್ಲಿ ಕಾಣುವುದು ಉಚಿತವಲ್ಲ, ತಾನು ಹುಚ್ಚನಂತೆ ಕಾಣಿಸಿಕೊಳ್ಳಬೇಕೆಂದು ಅಂದುಕೊಂಡನು. ಆಗ ಬಸವಣ್ಣ ನನ್ನ ಸ್ಥಿತಿಯ ಒಳಗನ್ನು ತಿಳಿಯು ತ್ತಾನೋ ಅಥವಾ ತಿಳಿಯದೆ ಮಂದಮತಿ
ಯಾಗುವನೋ ನಾನು ಇದನ್ನು ಪರೀಕ್ಷಿಸಬೇಕೆಂದು ತೀರ್ವನಿಸಿ ಕೊಂಡನು. ಅಲ್ಲಮನು ಕಲ್ಯಾಣದಲ್ಲಿ ಕಾಣಿಸಿಕೊಳ್ಳುವ ಬಗೆಯನ್ನು ಚಾಮರಸ ಚಿತ್ರಿಸುವುದು ಹೀಗೆ: ಆದಿ ಮಧ್ಯಾಂತಂಗಳಿಲ್ಲದ/ನಾದಿ ಸಿದ್ಧನು ಹಲವು ಮೈಯಲಿ/ಭೇದವಿಲ್ಲದೆ ಸುಳಿದನಾ ಪ್ರಭುಲಿಂಗ ಲೀಲೆಯಲಿ (ಪ್ರಭು.ಲೀಲೆ.22-31)
ಅಲ್ಲಮನು ಆದಿ- ಮಧ್ಯ- ಕೊನೆಯಿಲ್ಲದ ಅನಾದಿಸಿದ್ಧ. ಅವನು ತನ್ನ ಲೀಲೆಯಿಂದ ಹಲವು ದೇಹಗಳನ್ನು ತಾಳಿ ಒಮ್ಮೆಗೆ ಎಲ್ಲರ ನಡುವೆ ಕಾಣಿಸಿಕೊಂಡ.
(ಲೇಖಕರು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳು. ಕನ್ನಡ ಹಾಗೂ ಸಂಸ್ಕೃತ ವಿದ್ವಾಂಸರು)
(ಪ್ರತಿಕ್ರಿಯಿಸಿ: vvsudina@gmail.com, mallepuram@gmail.com)