ವೇದ-ಶಾಸ್ತ್ರ ವಿದ್ಯೆಗೆ ಸರ್ವಕಾಲಿಕ ಮಾನ್ಯತೆ: ಶ್ರೀ ಸತ್ಯಾತ್ಮತೀರ್ಥ ಸ್ವಾಮೀಜಿ ಅಭಿಮತ

21 smg 4
ತೀರ್ಥಹಳ್ಳಿ ತಾಲೂಕಿನ ಮಹಿಷಿಯಲ್ಲಿ ಯುವ ವಿದ್ವಾಂಸ ಬಾಳಗಾರು ವಿದ್ಯಾರ್ಣವ ಅವರಿಗೆ ಶ್ರೀ ಸತ್ಯಾತ್ಮತೀರ್ಥರು ನ್ಯಾಯಾಮೃತ ವಿಶಾರದ ಎಂಬ ಬಿರುದು ನೀಡಿ ಗೌರವಿಸಿದರು.
Published on

ಶಿವಮೊಗ್ಗ: ಭಾರತೀಯ ಮೂಲದ ವೇದ ಮತ್ತು ಶಾಸ್ತ್ರವಿದ್ಯೆಗಳಿಗೆ ಸರ್ವ ದೇಶ-ಕಾಲದಲ್ಲೂ ಮಾನ್ಯತೆ ಇದೆ. ಹಾಗಾಗಿ ಇಂತಹ ವಿದ್ಯೆಗಳಿಗೆ ಸದಾ ಗೌರವಾದರ ತೋರಿ ಯುವ ವಿದ್ವಾಂಸರಿಗೆ ಪ್ರೋತ್ಸಾಹಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಉತ್ತರಾದಿ ಮಠಾಧೀಶ ಶ್ರೀ ಸತ್ಯಾತ್ಮತೀರ್ಥ ಸ್ವಾಮೀಜಿ ಹೇಳಿದರು.

ತೀರ್ಥಹಳ್ಳಿ ತಾಲೂಕಿನ ಮಹಿಷಿ ಕ್ಷೇತ್ರದಲ್ಲಿ ಭಾನುವಾರ ಶ್ರೀ ಸತ್ಯಸಂಥ ತೀರ್ಥರ 229ನೇ ಆರಾಧನಾ ಮಹೋತ್ಸವದ ವಿಶೇಷ ಸಂದರ್ಭದಲ್ಲಿ ಯುವ ವಿದ್ವಾಂಸ ವಿದ್ಯಾರ್ಣವ ಬಾಳಗಾರು ನೀಡಿದ ನ್ಯಾಯಾಮೃತ ಪರೀಕ್ಷೆ ನಂತರ ಆಶೀರ್ವಚನ ನೀಡಿದರು.
ಅಧ್ಯಯನ ಎಂಬುದು ಯಾವುದೋ ಒಂದು ವಯಸ್ಸಿಗೆ ನಿಲ್ಲುವ ಪ್ರಕ್ರಿಯೆ ಅಲ್ಲ. ಜೀವನ ಪರ್ಯಂತ ನಮ್ಮ ತತ್ವ, ಶಾಸ್ತ್ರಗಳನ್ನು ಅಧ್ಯಯನ ಮಾಡುತ್ತಲೇ ಇರಬೇಕು. ಲೋಕಕ್ಕೆ ದ್ವೈತ ಸಿದ್ಧಾಂತ ಮತವನ್ನು ಸಾರಿ ಹೇಳಿದ ಆಚಾರ್ಯ ಮಧ್ವರ ಮಹೋನ್ನತ ಕೃತಿಗಳ ಕೆಲವು ಭಾಗಗಳನ್ನಾದರೂ ಕಂಠಸ್ಥ ಮಾಡಿಕೊಳ್ಳಬೇಕು. ತಲೆಮಾರಿನಿಂದ ತಲೆಮಾರಿಗೆ ಈ ಸಂಸ್ಕೃತಿಯನ್ನು ರೂಢಿಗತ ಮಾಡಬೇಕು. ಈ ನಿಟ್ಟಿನಲ್ಲಿ ಶ್ರೀ ಸತ್ಯಸಂಧ ಗುರುಗಳು ಹಾಕಿಕೊಟ್ಟ ಮಾರ್ಗದಲ್ಲಿ ಸಾಗಬೇಕು ಎಂದು ಸಂದೇಶ ನೀಡಿದರು.
ಯುವ ವಿದ್ವಾಂಸ ವಿದ್ಯಾರ್ಣವ ಬಾಳಗಾರು ಅವರು ಶ್ರೀ ವ್ಯಾಸತೀರ್ಥ ವಿರಚಿತ ನ್ಯಾಯಾಮೃತ ಪರೀಕ್ಷೆ ನೀಡಿ ಹತ್ತಾರು ಪಂಡಿತ, ವಿದ್ವಾಂಸರಿಂದ ಇಂದು ಪ್ರಶಂಸೆಗೆ ಪಾತ್ರರಾಗಿದ್ದಾರೆ. ಅವರ ತಂದೆ ಬಾಳಗಾರು ರುಚಿರಾಚಾರ್ಯರು ಮಗನಿಗೆ ಶಾಸ್ತ್ರಪಾಠ ಹೇಳಿ ನಮ್ಮ ಶಾಸ್ತ್ರ ವಿದ್ಯಾಪರಂಪರೆಯನ್ನು ಮುಂದುವರಿಸಿರುವುದು ಶ್ಲಾಘನೀಯ. ಕಲಿಕೆ ಇಲ್ಲಿಗೇ ನಿಲ್ಲದೇ ಮುಂಬರುವ ದಿನಗಳಲ್ಲಿ ತರ್ಕತಾಂಡವ, ಚಂದ್ರಿಕಾ ಮುಂತಾದ ಗ್ರಂಥಗಳ ಪರೀಕ್ಷೆಯನ್ನು ಈ ವಿದ್ಯಾರ್ಥಿ ತಜ್ಞರ ಸಮ್ಮುಖ ನೀಡುವಂತಾಗಲಿ ಎಂದು ಶ್ರೀಗಳು ಆಶಿಸಿದರು.
ನಮ್ಮ ಸಂಸ್ಕೃತಿ-ಸಂಪ್ರದಾಯಗಳ ಬಗ್ಗೆ ಸಮುದಾಯ ಪ್ರಸ್ತುತ ದಿನಮಾನಗಳಲ್ಲಿ ಇಂತಹ ಉತ್ತಮ ಪರಂಪರೆಯನ್ನು ಪಾಲಿಸಿಕೊಂಡು ಬರಬೇಕು. ನಮ್ಮ ನಮ್ಮ ಮನೆಗಳಲ್ಲೇ ಮಕ್ಕಳಿಗೆ ಶಾಸ್ತ್ರವಿದ್ಯೆಯನ್ನು ಪ್ರಾಥಮಿಕವಾಗಿಯಾದರೂ ಕಲಿಸುವಂತಾಗಬೇಕು. ಈಗ ವೇದ-ಶಾಸ್ತ್ರ ವಿದ್ಯೆ ಕಲಿಯುತ್ತಿರುವ ಮಕ್ಕಳಿಗೆ ಪ್ರೋತ್ಸಾಹ, ಪುರಸ್ಕಾರ ನೀಡಬೇಕು. ಮುಂದಿನ ಜನಾಂಗ ಮಾಧ್ವ ಸಂಪ್ರದಾಯ ಉಳಿಸಿ ಬೆಳೆಸಲು ಇದೇ ದೊಡ್ಡ ಕೊಡುಗೆಯಾಗಬೇಕು ಎಂದು ಶ್ರೀ ಸತ್ಯಾತ್ಮತೀರ್ಥರು ಹೇಳಿದರು.
ಯುವ ವಿದ್ವಾಂಸ ವಿದ್ಯಾರ್ಣವ ಬಾಳಗಾರು ಅವರಿಗೆ ಹತ್ತಾರು ವಿದ್ವಾಂಸರ ಸಮ್ಮುಖ ನ್ಯಾಯಾಮೃತ ವಿಶಾರದ ಎಂಬ ಬಿರುದು, ಸನ್ಮಾನಪತ್ರ, ಶ್ರೀ ಮಧ್ವ ಸಿದ್ಧಾಂತ ಅಭಿವೃದ್ಧಿ ಕಾರ್ಯಕಾರಿಣಿ ಸಭಾದಿಂದ ಒಂದು ಲಕ್ಷ ರೂ. ನಗದು ಬಹುಮಾನ, ಬೆಳ್ಳಿ ಕಡಗ ನೀಡಿ ಗೌರವಿಸಿದರು.
ಹಿರಿಯ ವಿದ್ವಾಂಸರಾದ ಧೀರೇಂದ್ರಾಚಾರ್ಯ, ನರಸಿಂಹಾಚಾರ್ಯ ಕಟ್ಟಿ, ರಂಗಾಚಾರ್ಯ, ಪ್ರಹ್ಲಾದಾಚಾರ್ಯ, ಪುಷ್ಕರಾಚಾರ್ಯ, ವೆಂಕಟೇಶಾಚಾರ್ಯ ಶ್ರೀರಂಗಂ ಮತ್ತು ಸತ್ಯನಾಥಾಚಾರ್ಯ ಹಾಜರಿದ್ದರು.
ಶ್ರೀ ಉತ್ತರಾದಿಮಠ ಮಹಿಷಿ ಶಾಖೆಯ ವ್ಯವಸ್ಥಾಪಕ ಶ್ರೀ ಸತ್ಯಪ್ರಜ್ಞಾಚಾರ್ಯ ಮತ್ತು ಶ್ರೀ ಸತ್ಯಾಭಿಜ್ಞಾಚಾರ್ಯರ ನೇತೃತ್ವದಲ್ಲಿ ಶ್ರೀ ಸತ್ಯಸಂಧತೀರ್ಥರ ದ್ವಿತೀಯ ಆರಾಧನೆ ಸಂಪನ್ನಗೊಂಡಿತು. ಶ್ರೀ ಸತ್ಯಾತ್ಮತೀರ್ಥರು ಮತ್ತು ಕೂಡಲಿ ಶ್ರೀ ರಘುವಿಜಯ ತೀರ್ಥರು ಸಾನ್ನಿಧ್ಯ ವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net