ಪಾಕ್ ಬಣ್ಣ ಬಯಲು ಮಾಡಲು ಸರ್ವಪಕ್ಷ ನಿಯೋಗ; ಶೀಘ್ರದಲ್ಲೇ ವಿದೇಶಕ್ಕೆ ತೆರಳಲಿರೋ ಸಂಸದರು| All-party delegation

shashi
Published on

ಕೇಂದ್ರ ಸರ್ಕಾರವು ಮೇ ತಿಂಗಳ ಕೊನೆಯಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸದಸ್ಯರು ಸೇರಿದಂತೆ ಪ್ರಮುಖ ಪಾಲುದಾರ ರಾಷ್ಟ್ರಗಳಿಗೆ ಏಳು ಸರ್ವಪಕ್ಷ ನಿಯೋಗಗಳನ್ನು ಕಳುಹಿಸಲಿದೆ. ಗಡಿಯಾಚೆಗಿನ ಭಯೋತ್ಪಾದನೆಯ ವಿರುದ್ಧ ಭಾರತದ ನಿರಂತರ ಹೋರಾಟವನ್ನು ಪ್ರತಿಪಾದಿಸಲು ಆಪರೇಷನ್ ಸಿಂಧೂರ್ ಮತ್ತು ಪಹಲ್ಗಾಮ್ ದಾಳಿಯ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ಇದರ ನೇತೃತ್ವವನ್ನು ಕಾಂಗ್ರೆಸ್ ಸಂಸದ ಶಶಿ ತರೂರ್​ಗೆ ನೀಡಲಾಗಿದೆ.

ನವದೆಹಲಿ: ಆಪರೇಷನ್ ಸಿಂಧೂರ್ ಮುಖಾಂತರ ಗಡಿಯಾಚೆಗಿನ ಭಯೋತ್ಪಾದನೆ ವಿರುದ್ದ ಪ್ರತೀಕಾರ ತೀರಿಸಿಕೊಂಡ ಭಾರತ, ಇದೀಗ ರಾಜತಾಂತ್ರಿಕ ಮಾರ್ಗಗಳ ಮೂಲಕ ಪಾಕಿಸ್ತಾನದ ಉಗ್ರರ ಮುಖವಾಡವನ್ನು ಬಯಲು ಮಾಡಲು ಪಣ ತೊಟ್ಟಿದೆ.

ಕೇಂದ್ರ ಸರ್ಕಾರವನ್ನು ಹೊಗಳಿದ್ದಕ್ಕಾಗಿ ಕಾಂಗ್ರೆಸ್ ಪಕ್ಷದಿಂದ ಟೀಕೆ ಎದುರಿಸುತ್ತಿರುವ ಕಾಂಗ್ರೆಸ್ ಸಂಸದ ಶಶಿ ತರೂರ್, ಇದೀಗ ಭಯೋತ್ಪಾದನೆಯ ವಿರುದ್ಧ ಶೂನ್ಯ ಸಹಿಷ್ಣುತೆಯ ಭಾರತದ “ಬಲವಾದ ಸಂದೇಶ”ವನ್ನು ಜಗತ್ತಿಗೆ ಸಾರಲು ಸರ್ವಪಕ್ಷ ನಿಯೋಗದ ನೇತೃತ್ವ ವಹಿಸಲಿದ್ದಾರೆ.

ಏಳು ಸಂಸದರು ಏಳು ನಿಯೋಗಗಳ ನೇತೃತ್ವ ವಹಿಸಲಿದ್ದಾರೆ. ಅವರಲ್ಲಿ ಕಾಂಗ್ರೆಸ್‌ನಿಂದ ಶಶಿ ತರೂರ್, ಬಿಜೆಪಿಯಿಂದ ರವಿಶಂಕರ್ ಪ್ರಸಾದ್, ಜೆಡಿಯುನಿಂದ ಸಂಜಯ್ ಕುಮಾರ್ ಝಾ, ಬಿಜೆಪಿಯಿಂದ ಬೈಜಯಂತ್ ಪಾಂಡಾ, ಡಿಎಂಕೆಯಿಂದ ಕನಿಮೋಳಿ ಕರುಣಾನಿಧಿ, ಎನ್‌ಸಿಪಿಯಿಂದ ಸುಪ್ರಿಯಾ ಸುಳೆ ಮತ್ತು ಶಿವಸೇನೆಯ ಏಕನಾಥ್ ಶಿಂಧೆ ಸೇರಿದ್ದಾರೆ.

ಶಶಿ ತರೂರ್ ಅಮೆರಿಕಕ್ಕೆ, ಬೈಜಯಂತ್ ಪಾಂಡಾ ಯುರೋಪ್‌ಗೆ, ಕನಿಮೋಳಿ ರಷ್ಯಾಕ್ಕೆ, ಶ್ರೀಕಾಂತ್ ಶಿಂಧೆ ಆಫ್ರಿಕಾಕ್ಕೆ ಮತ್ತು ರವಿಶಂಕರ್ ಪ್ರಸಾದ್ ಗಲ್ಫ್ ರಾಷ್ಟ್ರಗಳಿಗೆ ನಿಯೋಗದ ನೇತೃತ್ವ ವಹಿಸಲಿದ್ದಾರೆ.

ಸರ್ವಪಕ್ಷ ನಿಯೋಗಗಳು ಭಾರತದ ಒಗ್ಗಟ್ಟಿನ ನಿಲುವು ಮತ್ತು ಎಲ್ಲಾ ರೀತಿಯ ಭಯೋತ್ಪಾದನೆಯ ವಿರುದ್ಧ ಹೋರಾಡುವ ಅಚಲ ಬದ್ಧತೆಯನ್ನು ಪ್ರತಿಬಿಂಬಿಸಲಿವೆ. ಭಯೋತ್ಪಾದನೆಗೆ ಶೂನ್ಯ ಸಹಿಷ್ಣುತೆಯ ದೇಶದ ಸ್ಪಷ್ಟ ಸಂದೇಶವನ್ನು ಅವರು ಜಾಗತಿಕ ವೇದಿಕೆಗೆ ಕೊಂಡೊಯ್ಯಲಿದ್ದಾರೆ.

ಭೇಟಿ ವೇಳೆ ಭಾರತ-ಪಾಕಿಸ್ತಾನ ಸಂಘರ್ಷ, ಆಪರೇಷನ್ ಸಿಂಧೂರಕ್ಕೆ ಕಾರಣವಾದ ಅಂಶಗಳು, ಭಯೋತ್ಪಾದನೆಗೆ ಪಾಕಿಸ್ತಾನ ಕುಮ್ಮಕ್ಕು ನೀಡುತ್ತಿರುವ ವಿಚಾರಗಳ ಕುರಿತು ವಿದೇಶಿ ನಾಯಕರಿಗೆ ವಿವರಣೆ ನೀಡಲಿದ್ದಾರೆ. ಈ ಮೂಲಕ ಪಾಕಿಸ್ತಾನದ ಬಂಡವಾಳ ಬಯಲು ಮಾಡುವ ಪ್ರಯತ್ನ ನಡೆಸಲಿದ್ದಾರೆ.

(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net