

ಪಟ್ನಾ: ಕರೊನಾ ಸೋಂಕು ಇಳಿಕೆಯ ಹಿನ್ನೆಲೆಯಲ್ಲಿ ಬಿಹಾರದಲ್ಲಿ ಸಂಪೂರ್ಣ ಅನ್ಲಾಕ್ ಮಾಡುವ ನಿರ್ಧಾರವನ್ನು ರಾಜ್ಯ ಸರ್ಕಾರ ಕೈಗೊಂಡಿದೆ ಎಂದು ಅಲ್ಲಿನ ಸಿಎಂ ನಿತೀಶ್ ಕುಮಾರ್ ಇಂದು ಘೋಷಿಸಿದ್ದಾರೆ.
ಎಲ್ಲಾ ಅಂಗಡಿಗಳು, ಬಿಸಿನೆಸ್ಗಳು, ಶಾಪಿಂಗ್ ಮಾಲ್, ಪಾರ್ಕ್ ಮತ್ತು ಉದ್ಯಾನಗಳು, ಧಾರ್ಮಿಕ ಸ್ಥಳಗಳು ಮತ್ತು ಇತರ ಸೌಲಭ್ಯಗಳು ಸಹಜವಾಗಿ ಕಾರ್ಯ ನಿರ್ವಹಿಸಬಹುದು. ಜೊತೆಗೇ ರಾಜ್ಯಾದ್ಯಂತ ಎಲ್ಲಾ ಶಿಕ್ಷಣ ಸಂಸ್ಥೆಗಳು ಪುನರಾರಂಭಗೊಳ್ಳಬಹುದು. ವಿಶ್ವವಿದ್ಯಾಲಯಗಳು, ಕಾಲೇಜುಗಳು, 1 ರಿಂದ 12 ನೇ ತರಗತಿವರೆಗಿನ ಶಾಲಾ ಕಾಲೇಜುಗಳು, ಕೋಚಿಂಗ್ ಕೇಂದ್ರಗಳು ತೆರೆಯಲಿದ್ದು, ಯಾವುದೇ ಪರೀಕ್ಷೆ ನಡೆಸಲು ಕೂಡ ಮುಕ್ತ ಅವಕಾಶವಿದೆ ಎಂದು ಸಿಎಂ ತಿಳಿಸಿದ್ದಾರೆ.
ಆಯಾ ಜಿಲ್ಲಾಡಳಿತದ ಅನುಮತಿ ಪಡೆದು, ಕೋವಿಡ್ ಮಾರ್ಗಸೂಚಿಗಳನ್ನು ಪಾಲಿನೆಯೊಂದಿಗೆ ಯಾವುದೇ ಸಾಮಾಜಿಕ, ರಾಜಕೀಯ, ಮನೋರಂಜನಾ, ಕ್ರೀಡಾ ಅಥವಾ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಬಹುದು. ಸಿನಿಮಾ ಹಾಲ್, ಕ್ಲಬ್, ಜಿಮ್, ಸ್ವಿಮ್ಮಿಂಗ್ ಪೂಲ್ ಮತ್ತು ರೆಸ್ಟೊರೆಂಟ್ಗಳು ಶೇ. 50 ರಷ್ಟು ಸಾಮರ್ಥ್ಯದಲ್ಲಿ ತೆರೆಯಬಹುದು ಎನ್ನಲಾಗಿದೆ. (ಏಜೆನ್ಸೀಸ್)