

ಬೆಂಗಳೂರು: ರಾಜ್ಯದಲ್ಲಿ ಐದು ತಿಂಗಳ ಬಳಿಕ 9, 10ನೇ ಇಯತ್ತೆ ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳು ಸೋಮವಾರ ಪ್ರಾರಂಭವಾಗಲಿದ್ದು, ದಿನ ಬಿಟ್ಟು ದಿನ ನೇರ ತರಗತಿಗೆ ಸರ್ಕಾರ ಎಲ್ಲ ಸಿದ್ಧತೆ ಮಾಡಿಕೊಂಡಿದೆ.
ಬೆಂಗಳೂರಿನ ಎರಡು ಶಾಲೆಗಳಿಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಜತೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ವತಃ ಭೇಟಿ ನೀಡಲಿದ್ದು, ಆಯಾ ಜಿಲ್ಲೆಯ ಶಾಲೆಗಳಿಗೆ ಭೇಟಿ ನೀಡಿ ಮುಂಜಾಗ್ರತಾ ಕ್ರಮಗಳನ್ನು ಪರಿಶೀಲಿಸುವಂತೆ ಎಲ್ಲ ಸಚಿವರಿಗೆ ಸೂಚಿಸಿದ್ದಾರೆ.
ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಬೊಮ್ಮಾಯಿ, ಶಿಕ್ಷಕರನ್ನು ಪ್ರೋತ್ಸಾಹಿಸಿ, ಪಾಲಕ-ಪೋಷಕರಲ್ಲಿ ವಿಶ್ವಾಸ ಮೂಡಿಸಬೇಕು ಎಂದು ಸಚಿವ ಸಹೋದ್ಯೋಗಿಗಳಿಗೆ ಸಲಹೆ ನೀಡಿದ್ದಾರೆ.
ಮಕ್ಕಳು ಮತ್ತು ಪಾಲಕರು ಕರೊನಾ ಮಾರ್ಗಸೂಚಿಯನ್ನು ಪಾಲಿಸಬೇಕು. ಸುರಕ್ಷತಾ ಕ್ರಮಗಳನ್ನು ಅನುಸರಿಸುವ ಮೂಲಕ ಯಾವುದೇ ಆತಂಕ ಇಲ್ಲದೇ ಸರ್ಕಾರದ ಜತೆ ಸಹಕರಿಸಬೇಕು ಎಂದು ಸಿಎಂ ಬೊಮ್ಮಾಯಿ ಮನವಿ ಮಾಡಿದ್ದಾರೆ.