

ಶಿಮ್ಲಾ: ಹಿಮಾಚಲಪ್ರದೇಶದ ಲಾಹುಲ್ ಮತ್ತು ಸ್ಪಿತಿ ಜಿಲ್ಲೆಯಲ್ಲಿ ಎಲ್ಲ ಆಡಳಿತಾತ್ಮಕ ಪ್ರಮುಖ ಹುದ್ದೆಗಳಲ್ಲಿ ಮಹಿಳೆಯರೇ ಕಾರ್ಯ ನಿರ್ವಹಿಸುತ್ತಿದ್ದು, ಮಹಿಳಾ ಸಬಲೀಕರಣಕ್ಕೆ ಈ ಜಿಲ್ಲೆ ಸಾಕ್ಷಿಯಾಗಿದೆ.
ಜಿಲ್ಲೆಯ ಮೊದಲ ಮಹಿಳಾ ಜಿಲ್ಲಾಧಿಕಾರಿಯಾಗಿ 2017ರ ಬ್ಯಾಚ್ನ ಐಎಎಸ್ ಅಧಿಕಾರಿ ಕಿರಣ್ ಭದಾನಾ ಅವರನ್ನು ನೇಮಿಸಲಾಗಿದೆ. ಲಾಹುಲ್ ಮತ್ತು ಸ್ಪಿತಿ ವಿಧಾನಸಭೆ ಕ್ಷೇತ್ರವನ್ನು ಅನುರಾಧಾ ರಾಣಾ ಹಾಗೂ ಈ ವಿಧಾನಸಭಾ ಕ್ಷೇತ್ರವನ್ನು ಒಳಗೊಂಡ ಮಂಡಿ ಲೋಕಸಭೆ ಕ್ಷೇತ್ರವನ್ನು ನಟಿ ಕಂಗನಾ ರಣಾವತ್ ಪ್ರತಿನಿಧಿಸುತ್ತಿದ್ದಾರೆ.
ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಯಾಗಿ ಇಲ್ಮಾ ಅಫ್ರೋಜ್, ಸಬ್ ಡಿವಿಜಿನಲ್ ಮ್ಯಾಜಿಸ್ಟ್ರೇಟ್ ಆಗಿ ಆಕಾಂಕ್ಷಾ ಶರ್ವ, ಹೆಚ್ಚುವರಿ ಉಪ ಆಯುಕ್ತೆಯಾಗಿ ಶಿಖಾ ಸಿಮಿತಿಯಾ ಮತ್ತು ಜಿಲ್ಲಾ ಪರಿಷತ್ ಮುಖ್ಯಸ್ಥೆ ಆಗಿ ವೀಣಾದೇವಿ ಕಾರ್ಯನಿರ್ವಹಿಸುತ್ತಿದ್ದಾರೆ.
ಜಿಲ್ಲೆಯಲ್ಲಿ ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಲಾಗುವುದು, ಆಡಳಿತಾತ್ಮಕ ಪ್ರಮುಖ ಹುದ್ದೆಗಳಿಗೆ ಮಹಿಳೆಯರನ್ನು ನೇಮಿಸುವುದಾಗಿ ಇತ್ತೀಚೆಗೆ ಹಿಮಾಚಲ ಪ್ರದೇಶದ ಸಿಎಂ ತಿಳಿಸಿದ್ದು, ಅದರಂತೆ ಭರವಸೆ ಈಡೇರಿಸಿದ್ದಾರೆ ಎಂದು ಲಾಹೂಲ್ ಮತ್ತು ಸ್ಪಿತಿ ಜಿಲ್ಲೆಯ ಶಾಸಕಿ ಅನುರಾಧಾ ರಾಣಾ ತಿಳಿಸಿದ್ದಾರೆ. ಲಾಹೂಲ್ ಮತ್ತು ಸ್ಪಿತಿ ಜಿಲ್ಲೆ 13,814 ಚದರ ಕಿ.ಮೀ. ವ್ಯಾಪ್ತಿಯಲ್ಲಿ ಹರಡಿಕೊಂಡಿದೆ. ಈ ಜಿಲ್ಲೆಯಲ್ಲಿ ಕೇವಲ 40 ಸಾವಿರ ಜನರು ವಾಸಿಸುತ್ತಿದ್ದು, 25,967 ಮತದಾರರು ಇದ್ದಾರೆ. ಈ ಜಿಲ್ಲೆ ಪ್ರಾಕೃತಿಕ ಸೌಂದರ್ಯಕ್ಕೆ ಹೆಸರಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ.