

ಬೆಂಗಳೂರು : ಎರಡು ಆರೋಪ ಮುಂದಿಟ್ಟುಕೊಂಡು ವಿಚ್ಛೇದನ ಕೋರಿದ ಸಂದರ್ಭದಲ್ಲಿ ಒಂದು ಆರೋಪ ಸಾಬೀತಾಗಿ ಮತ್ತೊಂದು ದೃಢಪಡದಿದ್ದರೂ ವಿಚ್ಛೇದನ ಮಂಜೂರು ಮಾಡಲು ಕಾನೂನಿನ ತೊಡಕು ಇರುವುದಿಲ್ಲ ಎಂದು ಹೈಕೋರ್ಟ್ ಹೇಳಿದೆ.
ಅಲ್ಲದೆ, ದಂಪತಿಯ ವಿವಾಹ ರದ್ದುಪಡಿಸಿ ವಿಚ್ಛೇದನ ನೀಡಿದೆ. ಪತಿ ತನ್ನ ಚಾರಿತ್ರ್ಯ ಶಂಕಿಸಿ ಮಾನಸಿಕ ಕ್ರೌರ್ಯ ಎಸಗಿದ್ದಾರೆ ಮತ್ತು ತನ್ನನ್ನು ಪರಿತ್ಯಜಿಸಿದ್ದಾರೆ. ಹಾಗಾಗಿ ವಿವಾಹವನ್ನು ಅನೂರ್ಜಿತಗೊಳಿಸಿ ವಿಚ್ಛೇದನ ಮಂಜೂರು ಮಾಡುವಂತೆ ಕೋರಿ ತುಮಕೂರಿನ ನವ್ಯಾ ಎಂಬಾಕೆ ಸಲ್ಲಿಸಿರುವ ಮೇಲ್ಮನವಿಯನ್ನು ಪುರಸ್ಕರಿಸಿದ ನ್ಯಾಯಮೂರ್ತಿ ಅನು ಶಿವರಾಮನ್ ನೇತೃತ್ವದ ವಿಭಾಗೀಯ ಪೀಠ ಈ ತೀರ್ಪು ನೀಡಿದೆ.
ಪ್ರಕರಣದಲ್ಲಿ ಪತಿಯ ಮಾನಸಿಕ ಕ್ರೌರ್ಯ ಮತ್ತು ಪರಿತ್ಯಾಗದ ಕಾರಣವನ್ನು ಪರಿಗಣಿಸಿ ವಿಚ್ಛೇದನ ನೀಡಲು ಪತ್ನಿ ಕೋರಿದ್ದಾರೆ. ದಾಖಲೆಗಳನ್ನು ಪರಿಶೀಲಿಸಿದಾಗ ಪತ್ನಿ ತನ್ನ ಸಹೋದ್ಯೋಗಿಯೊಬ್ಬನ ಜತೆ ಸಂಬಂಧ ಹೊಂದಿದ್ದರು. ಆತನನ್ನು ಮದುವೆಯಾಗಲೆಂದೇ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ ಎಂದು ಪತಿ ಧ್ರುವ ಆಧಾರರಹಿತ ಆರೋಪ ಮಾಡಿರುವುದು ಸಾಬೀತಾಗಿದೆ. ಇದು ಪತ್ನಿಯ ಚಾರಿತ್ರ್ಯವನ್ನು ಹಾಳು ಮಾಡುವುದು ಬಿಟ್ಟು ಮತ್ತೇನು ಅಲ್ಲ ಮತ್ತು ಪತ್ನಿ ಮೇಲೆ ಎಸಗಿದ ಮಾನಸಿಕ ಕ್ರೌರ್ಯ ಎಂದು ಪೀಠ ಅಭಿಪ್ರಾಯಪಟ್ಟಿದೆ.
ಅಲ್ಲದೆ, ಪತಿಯ ನಡವಳಿಕೆಯಿಂದ ಪತ್ನಿ ಪ್ರತ್ಯೇಕವಾಗಿ ಜೀವನ ನಡೆಸುವುದು ಉತ್ತಮ. ಪತಿ ತನ್ನ ವೈವಾಹಿಕ ಸಂಬಂಧದ ಕುರಿತಾಗಿ ಇಂಗಿತ ವ್ಯಕ್ತಪಡಿಸಿದರೆ, ಪತ್ನಿ ಮಾತ್ರ ಪತಿಯೊಂದಿಗೆ ಜೀವಿಸಲು ಅಸಾಧ್ಯ ಎಂದಿದ್ದಾರೆ. ಇದರಿಂದ ಪರಿತ್ಯಾಗದ ಸಾಬೀತಿಗೆ ಸಮರ್ಪಕ ಕಾರಣ ಇಲ್ಲ. ಪ್ರಕರಣದಲ್ಲಿ ಕ್ರೌರ್ಯ ಆರೋಪ ಸಾಬೀತಾದರೂ ಪರಿತ್ಯಾಗ ಆರೋಪ ದೃಢಪಟ್ಟಿಲ್ಲ.
ಹೀಗಿದ್ದರೂ ವಿಚ್ಛೇದನ ಮಂಜೂರಾತಿಗೆ ಮಾಡಲಾದ ಎರಡು ಆರೋಪಗಳು ಸಹ ಸಾಬೀತಾಗಬೇಕು ಎಂದು ಕಾನೂನು ಕಡ್ಡಾಯಗೊಳಿಸುವುದಿಲ್ಲ. ಒಂದು ಆರೋಪ (ಕಾರಣ) ಸಾಬೀತಾದರೂ, ವಿಚ್ಛೇದನ ಮಂಜೂರಾತಿಗೆ ಅದು ಸಾಕಾಗುತ್ತದೆ ಎಂದು ಅಭಿಪ್ರಾಯಪಟ್ಟ ಹೈಕೋರ್ಟ್, ಪ್ರಕರಣದ ಅರ್ಜಿದಾರರ ವಿವಾಹ ಅನೂರ್ಜಿತೊಗಳಿಸಿ ವಿಚ್ಛೇದನ ನೀಡಿದೆ.
ಪತ್ನಿ ಜತೆ ನೆಲೆಸಲು ನಾ ಸಿದ್ಧ
ಹೈಕೋರ್ಟ್‌ನಲ್ಲಿ ಪತ್ನಿಯ ಎಲ್ಲ ಆರೋಪಗಳನ್ನು ಧ್ರುವ ಅಲ್ಲಗಳೆದು, ಪತ್ನಿಯ ನಡತೆಯನ್ನು ಶಂಕಿಸಿಯೇ ಇಲ್ಲ. ಮದುವೆಯಾದ ನಂತರ ನವ್ಯ ಇಂಜಿನಿಯರಿಂಗ್ ಪದವಿ ಪೂರೈಸಿದ ನಂತರ ಆಕೆಯಲ್ಲಿ ಅಹಂಕಾರ ಮೂಡಿತು. ತನ್ನ ಪಾಲಕರ ಮನೆಯಲ್ಲಿಯೇ ಇರುವಂತೆ ಪತ್ನಿ ನನಗೆ ತೀವ್ರ ಒತ್ತಡ ಹೇರುತ್ತಿದ್ದರು. ನನ್ನ ಪಾಲಕರು ಮತ್ತು ಸಹೋದರಿಯನ್ನು ನೋಡಿಕೊಳ್ಳಬೇಕಾದ ಕಾರಣ ಪತ್ನಿಯ ಒತ್ತಡಕ್ಕೆ ಮಣಿಯಲಿಲ್ಲ. ಈ ಕಾರಣದಿಂದ ನನ್ನ ಮನೆಯಲ್ಲಿಯೇ ಪತ್ನಿಯೊಂದಿಗೆ ನೆಲೆಸಲು ಸಿದ್ಧನಿದ್ದೇನೆ ಎಂದು ಧ್ರುವ ವಾದಿಸಿದ್ದರು.