ಮಹಾ ತಂಟೆಗೆ ಆಕ್ರೋಶ: ಬೀದರ್, ಭಾಲ್ಕಿಯೂ ತನಗೆ ಸೇರಬೇಕೆಂದು ನಿರ್ಣಯ; ರಾಜ್ಯದ ತಿರುಗೇಟು

Front Box
Published on

ಬೆಂಗಳೂರು: ಗಡಿ ವಿವಾದವನ್ನು ಕೆದಕುತ್ತ ರಾಜಕೀಯ ಕಾರಣಕ್ಕಾಗಿ ಬಳಸಿಕೊಳ್ಳುವ ಮಹಾರಾಷ್ಟ್ರ ಜನಪ್ರತಿನಿಧಿಗಳು ವಿಧಾನಮಂಡಲವನ್ನು ಇದಕ್ಕೆ ವೇದಿಕೆಯಾಗಿಸಿ ಕೊಂಡಿದ್ದು, ಬೆಳಗಾವಿ, ಬೀದರ್, ವಿಜಯಪುರ ಜಿಲ್ಲೆಗಳ ಹಲವು ಪ್ರದೇಶಗಳು ಮಹಾರಾಷ್ಟ್ರಕ್ಕೆ ಸೇರಬೇಕೆಂದು ನಿರ್ಣಯ ಮಂಡಿಸಲಾಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಷಾ ನೇತೃತ್ವದಲ್ಲಿ ನಡೆದ ಉಭಯ ರಾಜ್ಯ ಮುಖ್ಯಮಂತ್ರಿಗಳ ಸಭೆಯ ತೀರ್ಮಾನ ಉಲ್ಲಂಘಿಸಿ ಈ ನಿರ್ಣಯ ಕೈಗೊಂಡಿರುವುದಕ್ಕೆ ರಾಜ್ಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಮಹಾರಾಷ್ಟ್ರ ಸರ್ಕಾರ 2004ರಲ್ಲಿ ಸುಪ್ರೀಂಕೋರ್ಟ್ ಮುಂದೆ ರಿಟ್ ಅರ್ಜಿ ಹಾಕಿದೆ. ಇನ್ನೂ ಅದು ವಿಚಾರಣೆಗೆ ಅಂಗೀಕಾರವೇ ಆಗಿಲ್ಲ. ಆದರೂ ಮಹಾರಾಷ್ಟ್ರ ಪದೇಪದೆ ರಾಜಕೀಯ ಕಾರಣಕ್ಕಾಗಿ ವಿವಾದವನ್ನು ಕೆದಕುತ್ತಿದೆ. ಮಹಾರಾಷ್ಟ್ರ ಸರ್ಕಾರ ಗಡಿ ವಿವಾದವನ್ನು ಕೆದಕುತ್ತ ಶಾಂತಿಭಂಗ ಉಂಟು ಮಾಡಿರುವುದರಿಂದ ಕೇಂದ್ರ ಗೃಹ ಸಚಿವ ಅಮಿತ್ ಷಾ ಡಿ.14 ರಂದು ಎರಡೂ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆದಿದ್ದರು. ಶಾಂತಿಭಂಗ ಆಗಬಾರದು, ಎರಡೂ ರಾಜ್ಯಗಳು ನ್ಯಾಯಾಲಯದ ನಿರ್ಧಾರಕ್ಕೆ ಬದ್ಧವಾಗಿರಬೇಕೆಂದು ಸೂಚನೆ ನೀಡಿದ್ದರು. ಈ ಸಭೆಯ ನಿರ್ಧಾರವನ್ನು ಮಹಾರಾಷ್ಟ್ರ ಉಲ್ಲಂಘಿಸಿ ನಿರ್ಣಯ ಮಾಡಿರುವುದನ್ನು ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಖಂಡಿಸಿವೆ. ಜತೆಗೆ, ರಾಜ್ಯ ಮುಂದೇನು ಮಾಡಬೇಕೆಂದು ಸಲಹೆಯನ್ನೂ ನೀಡಿವೆ.

ಮಹಾಜನ್ ವರದಿ ಅಂತಿಮ: 1967 ರಿಂದಲೂ ರಾಜ್ಯದ ವಿಧಾನಮಂಡಲದಲ್ಲಿ ಅನೇಕ ಬಾರಿ ಮಹಾಜನ್ ವರದಿಯೇ ಅಂತಿಮವೆಂಬ ನಿರ್ಣಯ ಅಂಗೀಕರಿಸಲಾಗಿದೆ. ಆದರೆ, ಮಹಾರಾಷ್ಟ್ರ ಬೆಳಗಾವಿಗೆ ಪಟ್ಟು ಹಿಡಿದಿದೆ. ಗಡಿ ವಿವಾದ ಕೇವಲ ಕರ್ನಾಟಕ ಮತ್ತು ಮಹಾರಾಷ್ಟ್ರಕ್ಕೆ ಸಂಬಂಧಿಸಿಲ್ಲ. ಕೇರಳವೂ ಸೇರುತ್ತದೆ.

ಮಹಾಜನ್ ವರದಿ ಹೇಳುವುದೇನು?

  • ಕರ್ನಾಟಕದ 264 ಹಳ್ಳಿ ಹಾಗೂ ಪಟ್ಟಣ ಮಹಾರಾಷ್ಟ್ರಕ್ಕೆ ಸೇರಬೇಕು
  • ಖಾನಾಪುರ, ನಿಪ್ಪಾಣಿ, ನಂದಘಡ ಮಹಾರಾಷ್ಟ್ರದ ಪಾಲಾಗಬೇಕು
  • ಮಹಾರಾಷ್ಟ್ರದ 247 ಹಳ್ಳಿ ಹಾಗೂ ಪಟ್ಟಣ ಕರ್ನಾಟಕಕ್ಕೆ ಸೇರಬೇಕು
  • ಮಹಾರಾಷ್ಟ್ರದ ಜತ್, ದಕ್ಷಿಣ ಸೊಲ್ಹಾಪುರ, ಅಕ್ಕಲಕೋಟೆ, ಕೇರಳದ ಕಾಸರಗೋಡು ಕರ್ನಾಟಕಕ್ಕೆ ಬರಬೇಕು

ಮಹಾರಾಷ್ಟ್ರ ಸರ್ಕಾರ ವಿಧಾನಸಭೆಯಲ್ಲಿ ಕರ್ನಾಟಕದ ವಿರುದ್ಧ ನಿರ್ಣಯ ಅಂಗೀಕರಿಸಿ ಯಾವ ಸಂದೇಶ ನೀಡುತ್ತಿದೆ? ಅಮಿತ್ ಷಾ ಮಾತು ಕಸಕ್ಕೆ ಸಮಾನ ಎಂದೇ? ಸಿಎಂ ಬಸವರಾಜ ಬೊಮ್ಮಾಯಿ ಕೈಲಾಗದವರು ಎಂದು ತೋರಿಸುವುದಕ್ಕಾ? ಷಾ ಮಾತಿಗೆ ಕಿಮ್ಮತ್ತು ಹೋದ ಮೇಲೂ ಪ್ರಧಾನಿ ಮೋದಿ ಗಡಿ ಸಂಗತಿಯ ಬಗ್ಗೆ ಮಾತಾಡುತ್ತಿಲ್ಲವೇಕೆ? | ಕರ್ನಾಟಕ ಕಾಂಗ್ರೆಸ್ ಮಹಾರಾಷ್ಟ್ರ ಅನಗತ್ಯವಾಗಿ ವಿವಾದ ಕೆದಕುವುದನ್ನು ಮೊದಲು ಕೈಬಿಡಬೇಕು. ಎರಡೂ ರಾಜ್ಯದ ಜನ ಪ್ರೀತಿ ವಿಶ್ವಾಸದಿಂದ ಇದ್ದಾರೆ. ಕೇಂದ್ರ ಸರ್ಕಾರ ಸಹ ಸ್ಪಷ್ಟ ಸೂಚನೆ ನೀಡಬೇಕು. | ಬಂಡೆಪ್ಪ ಕಾಶೆಂಪೂರ್ ಜೆಡಿಎಸ್ ಉಪ ನಾಯಕ ರಾಜ್ಯ ಸರ್ಕಾರ ಮಹಾರಾಷ್ಟ್ರದ ಉದ್ಧಟತನದ ಬಗ್ಗೆ ಅಮಿತ್ ಷಾ ಗಮನಕ್ಕೆ ತರಬೇಕು. ಕೋರ್ಟ್ ನಲ್ಲಿ ನ್ಯಾಯಾಂಗ ನಿಂದನೆ ಕೇಸ್ ದಾಖಲಿಸಬೇಕು. | ಅಶೋಕ್ ಚಂದರಗಿ ಕನ್ನಡಪರ ಹೋರಾಟಗಾರ, ಬೆಳಗಾವಿ ಯಾವುದೇ ರೀತಿಯ ನಿರ್ಣಯ ಮಾಡುವ ಅಧಿಕಾರ ಮಹಾರಾಷ್ಟ್ರಕ್ಕೆ ಇಲ್ಲ. ಮಹಾಜನ್ ವರದಿ ಅಂತಿಮ. ನೆರೆ ರಾಜ್ಯಗಳು ಪರಸ್ಪರ ಪ್ರೀತಿಯಿಂದ ವಿಶ್ವಾಸದಿಂದ ಇರಬೇಕಾಗುತ್ತದೆ. | ಆರ್.ವಿ. ದೇಶಪಾಂಡೆ ಕಾಂಗ್ರೆಸ್ ಶಾಸಕ

865 ಹಳ್ಳಿ-ಪಟ್ಟಣದ ಮೇಲೆ ಮಹಾಕಣ್ಣು: ಮಹಾರಾಷ್ಟ್ರವು ರಾಜ್ಯದ 5 ಜಿಲ್ಲೆಗಳ 865 ಹಳ್ಳಿ ಹಾಗೂ ಪಟ್ಟಣಗಳ ಮೇಲೆ ಕಣ್ಣಿಟ್ಟಿದೆ. 1956 ರಲ್ಲಿ ಫಜಲ್ ಆಯೋಗದ ಮುಂದೆ ಬೆಳಗಾವಿ, ಉತ್ತರಕನ್ನಡ, ಕಲಬುರಗಿ, ಬೀದರ್, ಯಾದಗಿರಿ ಜಿಲ್ಲೆಗಳಿಗೆ ಸೇರಿದ 865 ಹಳ್ಳಿ ಹಾಗೂ ಪಟ್ಟಣ ಗಳನ್ನು ಕೇಳಿ ಅರ್ಜಿ ಹಾಕಿಕೊಂಡಿತ್ತು. ಆದರೆ, ಆ ಆಯೋಗದ ವರದಿ ಜಾರಿಗೆ ಬರಲಿಲ್ಲ. ಒಂದಿಂಚೂ ಜಾಗ ಬಿಡುವ ಪ್ರಶ್ನೆಯೇ ಇಲ್ಲ: ಮಹಾರಾಷ್ಟ್ರ ಸರ್ಕಾರ ಏನೇ ನಿರ್ಣಯ ಮಾಡಿದ್ದರೂ ರಾಜ್ಯದ ಒಂದಿಂಚೂ ಜಾಗ ಬಿಡುವ ಪ್ರಶ್ನೆಯೇ ಇಲ್ಲವೆಂದು ಮೂರು ಪಕ್ಷದ ಮುಖಂಡರು ಸ್ಪಷ್ಟಪಡಿಸಿರುವುದು ವಿಶೇಷ. ಮಹಾಜನ್ ವರದಿಯೇ ಅಂತಿಮವಾಗಿರುವುದರಿಂದ ಈ ರೀತಿಯ ನಿರ್ಣಯ ಕೈಗೊಳ್ಳಲು ಮಹಾರಾಷ್ಟ್ರಕ್ಕೆ ನೈತಿಕ ಹಕ್ಕಿಲ್ಲವೆಂದು ಹೇಳಿದ್ದಾರೆ.

ಬೆಳಗಾವಿ ರಾಜ್ಯದ್ದು

  • ಬೆಳಗಾವಿಗಾಗಿಯೇ ಮಹಾರಾಷ್ಟ್ರ ಪಟ್ಟು ಹಿಡಿದಿದೆ. ಆದರೆ, ಬೆಳಗಾವಿ ಕರ್ನಾಟಕಕ್ಕೆ ಸೇರಿದ್ದು ಎಂಬುದು ಸ್ಪಷ್ಟ.
  • 1956ರಲ್ಲಿ ರಾಜ್ಯಗಳ ಪುನಾರಚನೆ ಆಯೋಗ ಬೆಳಗಾವಿಯನ್ನು ಕರ್ನಾಟಕಕ್ಕೆ ಸೇರಿಸಿದೆ.
  • 1966ರಲ್ಲಿ ರಚನೆಯಾಗಿ 1967ರಲ್ಲಿ ವರದಿ ನೀಡಿದ ಮಹಾಜನ್ ಆಯೋಗ ಸಹ ಬೆಳಗಾವಿ ಕರ್ನಾಟಕಕ್ಕೆ ಸೇರಿದ್ದು ಎಂದು ಹೇಳಿದೆ. ಬೆಳಗಾವಿ ಡಿಸಿ ಕಚೇರಿಯಲ್ಲಿ ದಾಖಲೆಗಳೆಲ್ಲ ಕನ್ನಡದಲ್ಲಿಯೇ ಇವೆ ಎಂಬುದು ದಾಖಲಾಗಿದೆ.
  • ಸಂಸತ್ತಿನಲ್ಲಿ ಬೆಳಗಾವಿಗೆ ಸಂಬಂಧಿಸಿದ ನಿಲುವಳಿ ಬಂದಾಗ ಮಹಾರಾಷ್ಟ್ರ ಪರ ಆಗಿಲ್ಲ.
  • 1920ರಲ್ಲಿ ಮುಂಬೈನಲ್ಲಿ ನಡೆದ ಕಾಂಗ್ರೆಸ್ ಮಹಾಧಿವೇಶನದಲ್ಲಿಯೂ ಕೇಳ್ಕರ್ ಸೇರಿದಂತೆ ಯಾರೊಬ್ಬರೂ ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಬೇಕೆಂದು ಬೇಡಿಕೆ ಮಂಡಿಸಿಲ್ಲ.
  • 13 ಆಯೋಗಗಳು ರಚನೆಯಾಗಿದ್ದು ಅದರಲ್ಲಿ 12 ವರದಿಗಳು ಬೆಳಗಾವಿ ಕರ್ನಾಟಕದ್ದು ಎಂದಿವೆ.

ರಾಜ್ಯ ಮಾಡಬೇಕಿರುವುದೇನು?

  • ಸುಪ್ರೀಂಕೋರ್ಟ್​ನಲ್ಲಿ ಮಹಾರಾಷ್ಟ್ರ ವಿರುದ್ಧ ನ್ಯಾಯಾಂಗ ನಿಂದನೆ ಮೊಕದ್ದಮೆ ದಾಖಲು ಮಾಡಬೇಕು.
  • ಗೃಹ ಸಚಿವ ಅಮಿತ್ ಷಾ ಸಭೆಯ ನಿರ್ಣಯ ಉಲ್ಲಂಘನೆ ಮಾಡಿರುವುದರಿಂದ ಕೂಡಲೇ ಅವರ ಗಮನಕ್ಕೆ ತಂದು ಮಹಾರಾಷ್ಟ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಬೇಕು.
  • ಹೊರನಾಡ ಮರಾಠಿಗರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ನೀಡುವ ಮಾದರಿಯಲ್ಲಿ ರಾಜ್ಯದಲ್ಲಿಯೂ ಹೊರನಾಡ ಕನ್ನಡಿಗರಿಗೆ ಮೀಸಲಾತಿ ನೀಡಬೇಕು.
  • ಮಹಾರಾಷ್ಟ್ರ ಸರ್ಕಾರ ಹೊರನಾಡಿನ ಮರಾಠಿ ಸಂಘ ಸಂಸ್ಥೆಗಳಿಗೆ ಅನುದಾನ ನೀಡುವ ಮಾದರಿ ರಾಜ್ಯದಲ್ಲಿಯೂ ಜಾರಿಗೆ ತರಬೇಕು

ನಾಗಪುರ ಅಧಿವೇಶನದಲ್ಲಿ ವಿವಾದಾತ್ಮಕ ನಿರ್ಣಯ

ನವದೆಹಲಿ: ಮಹಾರಾಷ್ಟ್ರದ ಶಿವಸೇನೆ-ಬಿಜೆಪಿ ಮೈತ್ರಿ ಸರ್ಕಾರ ಗಡಿ ಪ್ರದೇಶದ 865 ಗ್ರಾಮಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಲು ಕಾನೂನು ಹೋರಾಟ ನಡೆಸುವ ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಿದೆ. ಮುಖ್ಯಮಂತ್ರಿ ಏಕನಾಥ ಶಿಂಧೆ ಎರಡೂ ಸದನಗಳಲ್ಲಿ ನಿರ್ಣಯ ಮಂಡಿಸಿ, ಈ 865 ಗ್ರಾಮಗಳಲ್ಲಿ ಮರಾಠಿ ಭಾಷಿಕರು ಹೆಚ್ಚಿದ್ದಾರೆ. ಕರ್ನಾಟಕವೂ ಈ ವಿಷಯದ ಬಗ್ಗೆ ನಿರ್ಣಯ ಅಂಗೀಕರಿಸಿದ್ದು, ಉದ್ದೇಶಪೂರ್ವಕ ವಾಗಿ ಗಡಿ ಕದನಕ್ಕೆ ಉತ್ತೇಜನ ನೀಡಿದೆ. 865 ಹಳ್ಳಿಗಳಲ್ಲಿರುವ ಮರಾಠಿ ಮಾತನಾಡುವ ಜನರೊಂದಿಗೆ ಮಹಾರಾಷ್ಟ್ರ ಸರ್ಕಾರ ದೃಢವಾಗಿ ನಿಂತಿದೆ. ಈ ಹಳ್ಳಿಗಳ ಇಂಚಿಂಚು ಭೂಮಿಯನ್ನೂ ರಾಜ್ಯಕ್ಕೆ ಸೇರಿಸಿಕೊಳ್ಳಲು ನಮ್ಮ ಸರ್ಕಾರ ಸುಪ್ರೀಂ ಕೋರ್ಟ್​ನಲ್ಲಿ ಕಾನೂನುಬದ್ಧ ಹೋರಾಟ ನಡೆಸಲಿದೆ ಎಂದರು. ಬೆಳಗಾವಿ, ಕಾರವಾರ, ಬೀದರ್, ನಿಪ್ಪಾಣಿ, ಭಾಲ್ಕಿ ಸೇರಿದಂತೆ 865 ಗ್ರಾಮಗಳು ಮಹಾರಾಷ್ಟ್ರದ ಭಾಗವಾಗಲಿವೆ ಎಂದು ನಿರ್ಣಯದಲ್ಲಿ ಪ್ರತಿಪಾದಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net