ಮೇಲ್ಮನೆಯಲ್ಲಿ ಗುಂಡಿನ ಸದ್ದು, ಪರಸ್ಪರ ಗುದ್ದು!

Council
ಸಾಂದರ್ಭಿಕ ಚಿತ್ರ
Published on

ಬೆಂಗಳೂರು: ಗುಂಡಿನ ಮತ್ತು, ಗಮ್ಮತ್ತಿನ ಹಾಸ್ಯಪೂರ್ಣ ಚರ್ಚೆಯ ನಡುವೆ ಆಡಳಿತ- ಪ್ರತಿಪಕ್ಷಗಳು ಪರಸ್ಪರ ಮಾತಿನ ಗುದ್ದು. ಗುಂಡು ವಿರೋಧಿಸಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಯಶೋಧರಮ್ಮ ದಾಸಪ್ಪ ನೆನಪಿಗೆ ವಿಧಾನ ಪರಿಷತ್ ಬುಧವಾರ ಸಾಕ್ಷಿಯಾಯಿತು.

ಬಜೆಟ್ ಮೇಲೆ ಚರ್ಚೆ ಆರಂಭಿಸಿದ ಎಚ್.ವಿಶ್ವನಾಥ್ ಯಾವುದರ ಮೇಲೆಲ್ಲ ಜಿಎಸ್‌ಟಿಯಿದೆ ಎಂದು ವಿವರಿಸುವಾಗ ನಿಮಗೆ ಪ್ರಿಯವಾದ ಗುಂಡು ದುಬಾರಿಯಾಗಿದ್ದನ್ನು ಬಿಟ್ಟಿರಲ್ಲ ಎಂದು ಪ್ರತಿಪಕ್ಷ ಬಿಜೆಪಿ ಸದಸ್ಯರು ಲಘುಹಾಸ್ಯದ ದಾಟಿಯಲ್ಲಿ ಮಾತು ಅತ್ತ ಹೊರಳಿಸಿದರು.

ಸಮ್ಮಿಶ್ರ ಸರ್ಕಾರ ಪತನದ ವೇಳೆ ಎಂಎಲ್ಸಿ ವೈ.ಎನ್.ನಾರಾಯಣಸ್ವಾಮಿ ಮನೆಯಲ್ಲಿ ಕುಳಿತು ಗುಂಡು ಹೊಡೀತಿದ್ದೆವು ಎಂದು ಎಚ್.ವಿಶ್ವನಾಥ್ ನಸುನಗುತ್ತಾ ಹೇಳಿದರು.

ಗುಂಡು ಹಾಗೆಂದರೇನು ? ಎಂದು ಸಭಾಪತಿ ಪೀಠದಲ್ಲಿದ್ದ ಎಂ.ಕೆ.ಪ್ರಾಣೇಶ್ ಕೇಳಿದರೆ, ಮಧ್ಯೆ ಮಾತು ತೂರಿಸಿದ ಎನ್.ರವಿಕುಮಾರ್, ಗುಂಡಿನ ಏರಿಸಿದ್ದರ ಮೇಲೆ ಬೆಳಕು ಚೆಲ್ಲಬೇಕು, ಗುಂಡು ಹಾಕುವವರ ರಕ್ಷಣೆಗೆ ಧಾವಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ನಯವಾಗಿ ಚುಚ್ಚಿದರು.

ಗುಂಡು ಹಾಗೆಲ್ಲ ಚೆಲ್ಲಬಾರದು ಎಂದು ಎಚ್.ವಿಶ್ವನಾಥ್ ಚಟಾಕಿಗೆ ಸದನದಲ್ಲಿ ನಗೆಯ ಅಲೆ ಎದ್ದಿತು.

ಬಿಜೆಪಿಯ ಮತ್ತೊಬ್ಬ ಸದಸ್ಯೆ ತೇಜಸ್ವಿನಿ ಗೌಡ, ಗುಂಡಿನ ವಿಷಯ ಬೆಳಕಿನಲ್ಲಿ ಚರ್ಚೆಯಾಗಬಾರದು. ನಶೆಯದ್ದು, ನಿಶೆಯಲ್ಲೇ ಚರ್ಚೆ ಸೂಕ್ತ. ಗುಂಡು ಮಿತಿಯೊಳಗಿದ್ದರೆ ಮತ್ತು, ಅಳತೆ ಮೀರಿದರೆ ಆಪತ್ತು ಎಂದರು.

ಜೆಡಿಎಸ್‌ನ ಎಸ್.ಎಲ್.ಭೋಜೇಗೌಡ ಮಲೆನಾಡಿನಲ್ಲಿ ಹಾಗೇನಿಲ್ಲ ಬಿಡಿ ಎಂದರು. ಬಿಜೆಪಿಯ ಭಾರತಿ ಶೆಟ್ಟಿ, ಗುಂಡು ಹೊಡೆಯುವವರನ್ನು ನೋಡಿದ್ದೇವೆ, ಅವರೊಂದಿಗೆ ಬದುಕಿದ್ದೇವೆ ಎಂದಾಗ ಸದನದ ನಗೆಗಡಲಲ್ಲಿ ಮುಳುಗೆದ್ದಿತು.

ಸದನದಲ್ಲಿ ಇಬ್ಬರು ನಾರಾಯಣಸ್ವಾಮಿಗಳಿದ್ದೇವೆ. ನನಗೆ ಗುಂಡಿನ ಸಹವಾಸವಿಲ್ಲವೆಂದು ಛಲವಾದಿ ನಾರಾಯಣಸ್ವಾಮಿ ಹೇಳಿದರೆ, ಅದು ನಿಮಗಲ್ಲ ಬಿಡಿ ಎಂದು ಎಂ.ಕೆ.ಪ್ರಾಣೇಶ್ ಸಮಾಧಾನಪಡಿಸಿದರು.

ಕಾಂಗ್ರೆಸ್‌ನ ನಾಗರಾಜ್ ಯಾದವ್ ಗುಂಡಿನ ಬಗ್ಗೆ ಬಿಜೆಪಿಯವರಿಗೆ ಏಕಿಷ್ಟು ಆಸಕ್ತಿ ? ಎಂದು ಕೆಣಕಿದರು. ಗ್ಯಾರಂಟಿಗಳೆಲ್ಲ ನಮ್ಮ ಹಣದಿಂದಲೇ ನಡೆಯುತ್ತಿವೆ ಎಂದು ಗುಂಡು ಹಾಕುವವರು ಹೇಳುತ್ತಿದ್ದಾರೆ ಎಂದು ಭಾರತಿಶೆಟ್ಟಿ ಚುಚ್ಚಿದರು.

ಮಧ್ಯೆಪ್ರವೇಶಿಸಿದ ಸಭಾನಾಯಕ ಮದ್ಯಸೇವನೆ ಹಾನಿಕರ. ಬೆಲೆ ಹೆಚ್ಚಾದರೆ ಕುಡಿಯುವವರು ಕಡಿಮೆಯಾಗುತ್ತಾರೆ ಎಂಬ ಕಾರಣಕ್ಕೆ ತೆರಿಗೆ ಹೆಚ್ಚಿಸಲಾಗಿದೆ ಎಂದು ಸರ್ಕಾರದ ಕ್ರಮ ಸಮರ್ಥಿಸಿಕೊಂಡರು.

ಮದ್ಯಪಾನ ನಿಷೇಧಿಸಲು ಸರ್ಕಾರಕ್ಕೆ ಒತ್ತಾಯಿಸಿ ಎಂದು ಎಚ್.ವಿಶ್ವನಾಥ್‌ಗೆ ಹೇಳಿದ ವೈ.ಎ.ನಾರಾಯಣಸ್ವಾಮಿ ಅವರನ್ನು ಮಾತಿಗೆ ಎಳೆದರು.

ಎಚ್.ವಿಶ್ವನಾಥ್ ಮಾತು ಮುಂದುವರಿಸಿ ಗುಂಡು ಹಾಕದವರಿಗೆ ಗುಂಡಿಗೆ ಇರಬೇಕಾದರೆ, ಗುಂಡು ಹಾಕದವರಿಗೆ ಅದೆಂತಹ ಗುಂಡಿಗೆಯಿದೆ ಎಂದು ಮತ್ತೆ ಹಾಸ್ಯ ಚಟಾಕಿ ಹಾರಿಸಿದರು.

ಗುಂಡಿಗೆಯೆಂದರೆ ಯಶೋದರಮ್ಮ ದಾಸಪ್ಪನವರದು. ಎಸ್.ನಿಜಲಿಂಗಪ್ಪ ಮಂತ್ರಿ ಮಂಡಲದಲ್ಲಿ ಸಮಾಜ ಕಲ್ಯಾಣ ಸಚಿವೆಯಾಗಿದ್ದರು. ಕುಡುಕರ ಹಣದಲ್ಲಿ ಬೊಕ್ಕಸ ತುಂಬಿಕೊಳ್ಳುವ ದರ್ದೇನಿದೆ ಎಂದು ಪ್ರಶ್ನಿಸಿ, ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದವರು ಎಂದು ನೆನಪಿಸಿದರು.

ಸಾರಾಯಿ ಸರ್ವರೋಗಿಗಳಿಗೆ ಮದ್ದು ಎಂದು ವಿಶ್ವನಾಥ್ ಹೇಳಿದಾಗ ಎಚ್.ಡಿ.ಕುಮಾರಸ್ವಾಮಿ ಲಾಟರಿ ಜತೆಗೆ ಸಾರಾಯಿ ಮಾರಾಟ ನಿಷೇಧಿಸಿದರು ಎಂಬುದನ್ನು ಜೆಡಿಎಸ್‌ನ ಟಿ.ಎ.ಶರವಣ ನೆನಪಿಸಿದರು.

ಅದೇ ತಾಪತ್ರಯ ತಂದಿತು ನೋಡಿ ಎಂದು ವಿಶ್ವನಾಥ್ ಹೇಳುತ್ತಿದ್ದಂತೆ ಸದನದಲ್ಲಿ ಮತ್ತೆ ನಗು ಉಕ್ಕಿಹರಿಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net