

ತುಮಕೂರು: ಎಷ್ಟೊತ್ತಿಗೆ ಬೆಳಗಾಗುತ್ತದೆಯೋ ಎಂದು ರಾತ್ರಿಯಿಡೀ ಸರಿಯಾಗಿ ನಿದ್ರೆ ಮಾಡದೆ ಬೆಳಗಿನ ಜಾವದಿಂದಲೇ ಮದ್ಯದಂಗಡಿ ಬಳಿ ಜಮಾಯಿಸಿದ್ದ ಜಿಲ್ಲೆಯ ಬಹುತೇಕ ಮದ್ಯಪಾನಿಗಳು ನಿರಾಸೆಗೊಂಡರು. ಕೆಲವರು ಮದ್ಯದಂಗಡಿ ಬಾಗಿಲಿಗೆ ತೋರಣ ಕಟ್ಟಿ ಮದ್ಯಾರಾಧನೆಗಾಗಿ ಕಾದರೂ ಬೆಳಗ್ಗೆ 9ಕ್ಕೆ ತೆರೆಯಬೇಕಾದ ಅಂಗಡಿ ಮಧ್ಯಾಹ್ನವಾದರೂ ಬಾಗಿಲು ತೆರೆದಿರಲಿಲ್ಲ. ಆದರೂ ಪಟ್ಟುಬಿಡದ 'ಎಣ್ಣೆ'ಪ್ರಿಯರು ಬಿಸಿಲನ್ನೂ ಲೆಕ್ಕಿಸದೆ ಚಾತಕಪಕ್ಷಿಯಂತೆ ಕಾದು ಮದ್ಯ ಖರೀದಿಸುವಲ್ಲಿ ಮಗ್ನರಾಗಿದ್ದಾರೆ.
ಬೆಳಗ್ಗೆ 9ಕ್ಕೆ ತೆರೆಯಬೇಕಿದ್ದ ಎಂಎಸ್ಐಎಲ್ ಮತ್ತು ವೈನ್ಶಾಪ್ಗಳು ಜಿಲ್ಲೆಯ ಹಲವೆಡೆ ಮಧ್ಯಾಹ್ನ 1 ರ ವೇಳೆಗೆ ತೆರೆದರೆ, ಕೆಲವೆಡೆ ಓಪನ್ ಆಗಿಲ್ಲ. ಇದಕ್ಕೆ ಕಾರಣ ಅಬಕಾರಿ, ಕಂದಾಯ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಒಟ್ಟಿಗೆ ಸ್ಟಾಕ್ ಪರಿಶೀಲನೆ ನಡೆಸುತ್ತಿದ್ದಾರೆ. ಹಾಗಾಗಿ ಜಿಲ್ಲೆಯಲ್ಲಿ ಕೆಲವೆಡೆ ಮದ್ಯ ಮಾರಾಟ ಇನ್ನೂ ಆರಂಭವಾಗಿಲ್ಲ. ಮಧ್ಯಾಹ್ನದ ಬಳಿಕ ಬಹುತೇಕ ಮದ್ಯಪ್ರಿಯರ ಆಸೆ ತಣಿಯಲಿದೆ.
ಇದನ್ನೂ ಓದಿ ಮಂಡ್ಯದಲ್ಲಿ ಮದ್ಯಕ್ಕಾಗಿ ಓಡಿ ಬಂದ “ಎಣ್ಣೆ”ಪ್ರಿಯರು
ತೋರಣ ಕಟ್ಟಿ ಕಾದರು: ಕುಣಿಗಲ್ ತಾಲೂಕಿನ ಕೆಂಪನಹಳ್ಳಿ ಗ್ರಾಪಂ ವ್ಯಾಪ್ತಿಯ ಸಿದ್ದೆಮಣ್ಣಿಪಾಳ್ಯ ಗ್ರಾಮದಲ್ಲಿ ಎಂಎಸ್ಐಎಲ್ ಮಳಿಗೆಯ ಬಾಗಿಲು ಮತ್ತು ಕಂಬಕ್ಕೆ ಭಾನುವಾರ ತಡರಾತ್ರಿಯೇ ಮದ್ಯಪ್ರಿಯರು ಮಾವಿನ ತೋರಣ, ಬಾಳೆಕಂಬ ಕಟ್ಟಿ ಸಿಂಗರಿಸಿದ್ದರು. ಅಂಗಡಿ ಬಳಿಯೇ ಠಿಕಾಣಿ ಹೂಡಿದ್ದ ಅವರು 'ಎಣ್ಣೆ ಬೇಕು ಅಣ್ಣಾ..' ಎನ್ನುತ್ತಲೇ ಇದ್ದರು. ಮಧ್ಯಾಹ್ನ 1ರ ಬಳಿಕ ಅಂಗಡಿ ತೆರೆಯುತ್ತಿದ್ದಂತೆ ಮುಗಿಬಿದ್ದು ಮದ್ಯ ಖರೀದಿಸಿದರು.
ತುರುವೇಕೆರೆ ತಾಲೂಕಿನ ಮಾಯಸಂದ್ರ ಶ್ರೀ ರಂಗನಾಥ ವೈನ್ ಸೆಂಟರ್ ಬಳಿ ಬೆಳಗ್ಗೆಯಿಂದಲೇ ಮದ್ಯದ ಕಿಕ್ ಏರಿಸಿಕೊಳ್ಳುವ ಭರದಲ್ಲಿ ನೂರಾರು ಗ್ರಾಹಕರು ಜಮಾಯಿಸಿದ್ದರು. ಇಲ್ಲೂ ನಿಗದಿತ ಸಮಯ ಮೀರಿದರೂ ಅಂಗಡಿ ಬಾಗಿಲು ತೆರೆದಿರಲಿಲ್ಲ. ಅಂಗಡಿ ಯಾವಾಗ ತೆರೆಯಲಿದೆಯೋ ಎಂದು ಗ್ರಾಹಕರು ಗೊಣಗುತ್ತಿದ್ದ ದೃಷ್ಯ ಸಾಮಾನ್ಯವಾಗಿತ್ತು.
ಇದನ್ನೂ ಓದಿ ಮದ್ಯಕ್ಕಾಗಿ ಚಪ್ಪಲಿ ಇಟ್ಟು ಕಾದರು
ನಗರದಲ್ಲಿ ಅಂಗಡಿ ಓಪನ್ ಆಗಲ್ಲ: ತುಮಕೂರು ನಗರದಲ್ಲಿ 60ಕ್ಕೂ ಹೆಚ್ಚು ಎಂಎಸ್ಐಎಲ್ ಮತ್ತು ವೈನ್ಶಾಪ್ಗಳಿದ್ದು, ಈ ಭಾಗದ ಅಂಗಡಿಗಳನ್ನು ತೆರೆಯಲು ಅವಕಾಶ ನೀಡಿಲ್ಲ. ಹಾಗಾಗಿ ಇಲ್ಲಿನ ಮದ್ಯಪ್ರಿಯರು ಗುಂಡಿನ ಗಮ್ಮತ್ತು ಅನುಭವಿಸಲು ಆಗುತ್ತಿಲ್ಲವಲ್ಲ ಎಂದು ನಿರಾಶೆಗೊಂಡಿದ್ದಾರೆ.
1 ಕಿ.ಮೀ. ದೂರ ಕ್ಯೂ: ಕೊರಟಗೆರೆ ತಾಲೂಕಿನ ಅಂಗಡಿಗಳಲ್ಲಿ ಅಧಿಕಾರಿಗಳಿಂದ ದಾಸ್ತಾನು ಪರಿಶೀಲನೆಯಾಗಿದ್ದು, ಮಧ್ಯಾಹ್ನದ 3ರ ನಂತರ ಬಾಗಿಲು ತೆರೆಯುತ್ತಿದ್ದು. ಬೆಳಗ್ಗೆಯಿಂದಲೇ ಈ ಭಾಗದಲ್ಲಿ ಮದ್ಯ ಗ್ರಾಹಕರು 1 ಕಿ.ಮೀ. ದೂರ ಸಾಲುಗಟ್ಟಿ ನಿಂತಿದ್ದಾರೆ.
ಇನ್ನು ಪಾವಗಡದ ಮದ್ಯದಂಗಡಿಗಳಲ್ಲಿ ಅಬಕಾರಿ ಅಧಿಕಾರಿಗಳು ಸ್ಟಾಕ್ ಪರಿಶೀಲನೆ ಮಾಡಿದ್ದರಾದರೂ ಮತ್ತೊಮ್ಮೆ ತಹಸೀಲ್ದಾರ್ ಪರಿಶೀಲಿಸಬೇಕಿದೆ. ಹಾಗಾಗಿ ಇಂದು ಬಹುತೇಕ ಮದ್ಯದಂಗಡಿಗಳು ಓಪನ್ ಆಗುವುದು ಅನುಮಾನ. ತಾಲೂಕಿನ ಆಂಧ್ರ ಗಡಿಗ್ರಾಮಗಳ ಜನರು ಮದ್ಯಕ್ಕಾಗಿ ವೆಂಕಟಾಪುರ, ಗುಮ್ಮಗಟ್ಟ, ವೆಂಕಟಮ್ಮನಹಳ್ಳಿ, ಹುಸೇನ್ ಪುರ ಗ್ರಾಮಗಳಿಗೆ ಧಾವಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.