

ರಾಮನಗರ: ಜಿಲ್ಲೆಯಲ್ಲಿ ಸೋಮವಾರ ಮುಂಜಾನೆಯಿಂದಲೇ ಎಲ್ಲ ಎಂಎಸ್ಐಎಲ್ ಮತ್ತು ವೈನ್ಶಾಪ್ ಮಳಿಗೆಗಳ ಮುಂದೆ ಮದ್ಯಕ್ಕಾಗಿ ಗ್ರಾಹಕರು ಕ್ಯೂ ನಿಂತಿದ್ದರು. ಚನ್ನಪಟ್ಟಣ ತಾಲೂಕಿನ ತಿಟ್ಟಮಾರನಹಳ್ಳಿಯ ನೇತ್ರ ವೈನ್ಸ್ ಸ್ಟೋರ್ ಬಳಿ ಸಾಮಾಜಿಕ ಅಂತರಕ್ಕೆಂದು ಹಾಕಿರುವ ವೃತ್ತಗಳಲ್ಲಿ ಗ್ರಾಹಕರು ತಮ್ಮ ಚಪ್ಪಲಿಗಳನ್ನು ಇಟ್ಟು ಜಾಗ ಕಾಯ್ದಿರಿಸಿಕೊಂಡಿದ್ದರು. ಅಂಗಡಿ ಬಾಗಿಲು ತೆರೆಯುತ್ತಿದ್ದಂತೆ ಅವರವರ ಚಪ್ಪಲಿ ಬಳಿ ಸಾಲಾಗಿ ನಿಂತು "ಎಣ್ಣೆ' ಖರೀದಿಸಿದರು.
ಇನ್ನು ಚನ್ನಪಟ್ಟಣದ ಬಿವಿ ಹಳ್ಳಿಯ ಎಂಎಸ್ಐಎಲ್ ಮಳಿಗೆಗೆ ಬಹುತೇಕ ಎಲ್ಲ ಗ್ರಾಹಕರೂ ಬ್ಯಾಗ್ ಹಿಡಿದುಕೊಂಡೇ ಬಂದಿದ್ದರು. ತರಕಾರಿಯನ್ನು ಬ್ಯಾಗ್ನಲ್ಲಿ ತುಂಬಿಕೊಂಡು ಹೋಗುವಂತೆ ಮದ್ಯ ಖರೀದಿ ಮಾಡಿ ಕೊಂಡೊಯ್ಯುತ್ತಿದ್ದ ದೃಷ್ಯ ಸಾಮಾನ್ಯವಾಗಿತ್ತು. ಹಲವೆಡೆ ಮದ್ಯಪಾನಪ್ರಿಯರು ಸಾಮಾಜಿಕ ಅಂತರ ಮರೆತು ಮದ್ಯ ಖರೀದಿಸುವಲ್ಲಿ ಮಗ್ನರಾಗಿದ್ದರು.
ಇದನ್ನೂ ಓದಿ ಮಂಡ್ಯದಲ್ಲಿ ಮದ್ಯಕ್ಕಾಗಿ ಓಡಿ ಬಂದ “ಎಣ್ಣೆ”ಪ್ರಿಯರು
ಜಿಲ್ಲೆಯಲ್ಲಿರುವ ಒಟ್ಟು 88 ವೈನ್ಶಾಪ್ಗಳು ಮತ್ತು ಎಂಎಸ್ಐಎಲ್ ಔಟ್ ಲೆಟ್ಗಳ ಮೂಲಕ ಮದ್ಯ ಮಾರಾಟಕ್ಕೆ ಇಂದಿನಿಂದ ಅವಕಾಶ ನೀಡಲಾಗಿದೆ. ವೈನ್ಶಾಪ್ಗಳ ಬಳಿ ಅಂತರ ಕಾಪಾಡಲು ಸಾರ್ವೆ ಮರಗಳ ಮೂಲಕ ಬ್ಯಾರಿಕೇಡ್ ಹಾಕಲಾಗಿದೆಯಾದರೂ ಒಬ್ಬರಿಗೆ ಮತ್ತೊಬ್ಬರು ಅಂಟಿಕೊಂಡೇ ನಿಂತು ಮದ್ಯ ಖರೀದಿಗೆ ಮುಗಿಬಿದ್ದದ್ದು ಮಾತ್ರ ಆತಂಕಕಾರಿ.