

ಉಡುಪಿ: ಎಲ್ಲ ಕಡೆ ಕರೊನಾ ಲಾಕ್ಡೌನ್ ಇದೆ. ಕರೊನಾ ತೀವ್ರವಾಗಿ ಬಾಧಿಸುತ್ತಿರುವ ಪ್ರದೇಶಗಳಲ್ಲಿ ಸೆಕ್ಷನ್ 144 ಜಾರಿ ಮಾಡಲಾಗಿದೆ. ಸಾರ್ವಜನಿಕರು ಬೆಳಗ್ಗೆ 7ಗಂಟೆಯಿಂದ ಸಂಜೆ 7ಗಂಟೆವರೆಗೆ ಮಾತ್ರ ಓಡಾಡಲು ಅವಕಾಶ ಕಲ್ಪಿಸಲಾಗಿದೆ.
ಇಷ್ಟೆಲ್ಲ ಕಾನೂನು, ಕಟ್ಟಳೆ ಇದ್ದರೂ ಕೆಲವರು ಮಾತ್ರ ಅದೆಲ್ಲ ನಮಗೆ ಸಂಬಂಧವೇ ಇಲ್ಲ ಎಂಬಂತೆ ವರ್ತಿಸುತ್ತಿದ್ದಾರೆ. ಇದೇ ಉಡಾಫೆಯಲ್ಲಿ ಮಲ್ಪೆಯ ಸೇಂಟ್ ಮೇರೀಸ್ ದ್ವೀಪದಲ್ಲಿ ಭರ್ಜರಿ ಎಣ್ಣೆ ಪಾರ್ಟಿ ನಡೆಸಿದ ಏಳು ಮಂದಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಅದರಲ್ಲೂ ಅವರೆಲ್ಲ ಸ್ಥಳೀಯ ಅಧಿಕಾರಿಗಳೇ..!
ಇದನ್ನೂ ಓದಿ: ನಟಭಯಂಕರ ಇನ್ನೂ ಜೀವಂತ!
ಮಲ್ಪೆ ಬೀಚ್ ಅಭಿವೃದ್ಧಿ ಸದಸ್ಯರೊಬ್ಬರು ನಿರ್ಮಿತಿ ಕೇಂದ್ರದ ಅಧಿಕಾರಿಗಳೊಂದಿಗೆ ಸೇರಿ ಈ ಕೆಲಸ ಮಾಡಿದವರು. ಮಲ್ಪೆ ಬೀಚ್ನಿಂದ 8 ಕಿ.ಮೀ.ದೂರದಲ್ಲಿ ಸಮುದ್ರ ಮಧ್ಯೆ ಇರುವ ಸೇಂಟ್ ಮೇರಿಸ್ ದ್ವೀಪದಲ್ಲಿ ಇವರು ರಾತ್ರಿಯೆಲ್ಲ ಮದ್ಯದ ಪಾರ್ಟಿಯಲ್ಲಿ ಬಿಜಿಯಾಗಿದ್ದರು.
ರಾತ್ರಿ 9.30ರಿಂದ 11ಗಂಟೆಯವರೆಗೂ ದ್ವೀಪದ ಬಳಿ ಬೆಳಕು ಉರಿಯುತ್ತಿರುವುದನ್ನು ನೋಡಿದ ಸ್ಥಳೀಯರು ಮಲ್ಪೆ ಪೊಲೀಸರು ಮತ್ತು ಕರಾವಳಿ ಕಾವಲು ಪಡೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ರಾತ್ರಿ ಒಂದು ಗಂಟೆವರೆಗೆ ಕಾದರೂ ದ್ವೀಪದಲ್ಲಿ ಇದ್ದವರು ಹೊರ ಬಾರದ ಕಾರಣ ಕರಾವಳಿ ಕಾವಲು ಪೊಲೀಸರು ಗಸ್ತು ಬೋಟ್ನಲ್ಲಿ ತೆರಳಿ ಆ ಏಳೂ ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ಅಷ್ಟೇ ಅಲ್ಲ, ಪ್ರವಾಸಿ ಬೋಟುಗಳ ಜೆಟ್ಟಿಯ ಸಮೀಪ ಉಡುಪಿ, ಮಂಗಳೂರು ನೋಂದಣಿಯ ಎರಡು ಕಾರುಗಳನ್ನೂ ವಶಕ್ಕೆ ಪಡೆದುಕೊಂಡಿದ್ದರು.
ಈ ಏಳೂ ಮಂದಿಯ ಹೇಳಿಕೆ ಪಡೆದ ಪೊಲೀಸರು ಅವರನ್ನೀಗ ಬಿಟ್ಟುಕಳಿಸಿದ್ದಾರೆ. ದ್ವೀಪದಲ್ಲಿದ್ದ ಕೆಲವು ಪರಿಕರಗಳನ್ನು ತೆಗೆದುಕೊಂಡು ಬರಲು ಹೋಗಿದ್ದೆವು. ಅಲೆಯ ಪ್ರಮಾಣ ಜಾಸ್ತಿ ಇದ್ದುದರಿಂದ ವಾಪಸ್ ಬರಲು ಸಾಧ್ಯವಾಗಿಲ್ಲ ಎಂದು ಮಲ್ಪೆ ಬೀಚ್ ಅಭಿವೃದ್ಧಿ ಸದಸ್ಯ ಸುದೇಶ್ ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾರೆ.
ಸಾರ್ವಜನಿಕರಿಗೆ ರಾತ್ರಿ 7ರಿಂದ ಬೆಳಗ್ಗೆ 7 ಗಂಟೆಯವರೆಗೆ ಸೈಂಟ್ ಮೇರೀಸ್ ದ್ವೀಪಕ್ಕೆ ಹೋಗುವುದು ಮತ್ತು ರಾತ್ರಿ ಅಲ್ಲಿ ವಾಸ್ತವ್ಯ ಮಾಡುವುದನ್ನು ಜಿಲ್ಲಾಡಳಿತ ನಿಷೇಧಿಸಿದೆ.
ಮಲ್ಪೆ ಅಭಿವೃದ್ಧಿ ಸಮಿತಿ ಅಧ್ಯಕ್ಷರಾಗಿರುವ ಜಿಲ್ಲಾಧಿಕಾರಿ ಜಿ. ಜಗದೀಶ್ ವಿಜಯವಾಣಿಯೊಂದಿಗೆ ಮಾತನಾಡಿ, ಕರಾವಳಿ ಕಾವಲು ಪೊಲೀಸ್ ವರಿಷ್ಠಾಧಿಕಾರಿಯವರಲ್ಲಿ ಘಟನೆ ವಿವರ ಪಡೆದು ಮುಂದಿನ ಕ್ರಮಕೈಗೊಳ್ಳಲಾಗುವುದು. ಸೆಕ್ಷನ್ ಉಲ್ಲಂಘನೆ ಕಂಡುಬಂದರೆ ಎಲ್ಲರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ತಿಳಿಸಿದ್ದಾರೆ.