

ಬೆಂಗಳೂರು: ಮಾರ್ಚ್ ಮೊದಲ ವಾರದಲ್ಲಿ ರಾಜ್ಯ ಬಜೆಟ್ ಮಂಡನೆಯಾಗಲಿದ್ದು, ಕರೊನಾದಿಂದ ಕಂಗೆಟ್ಟಿರುವ ಜನತೆ ಹಲವು ಯೋಜನೆಗಳ ನಿರೀಕ್ಷೆಯಲ್ಲಿದ್ದಾರೆ. ಹೆಚ್ಚುತ್ತಿರುವ ಬೆಲೆ ಏರಿಕೆ, ಕುಸಿಯುತ್ತಿರುವ ಸಂಪಾದನೆ ಮಟ್ಟ ಈ ಎರಡನ್ನೂ ಬ್ಯಾಲೆನ್ಸ್ ಮಾಡಿಕೊಂಡು ಬದುಕಿನ ಬಂಡಿ ಸಾಗಿಸುವುದೇ ಜನಸಾಮಾನ್ಯರಿಗೆ ದುಸ್ತರ ಎನಿಸಿದೆ. ಇದೇ ಪರಿಸ್ಥಿತಿ ರಾಜ್ಯ ಸರ್ಕಾರದ್ದೂ ಕೂಡ.
ಕರೊನಾ ಪರಿಣಾಮ ರಾಜ್ಯದ ಆಥಿರ್ಕತೆ ಉತ್ತಮವಾಗಿಲ್ಲ. ಹಣಕಾಸಿನ ಕೊರತೆ ತೀವ್ರವಾಗಿ ಕಾಡುತ್ತಿದೆ. ಆರ್ಥಿಕತೆಯನ್ನ ಪುನಶ್ಚೇತನಗೊಳಿಸಲು ಸಜ್ಜಾಗಿರುವ ರಾಜ್ಯ ಸರ್ಕಾರ, ಮುಂಬರುವ ಬಜೆಟ್ನಲ್ಲಿ ಕುಡುಕರಿಗೆ ಬೆಲೆ ಏರಿಕೆಯ ಕಿಕ್ ಕೊಡಲಿದೆ! ಇದನ್ನೂ ಓದಿರಿ ಮನೆಯಲ್ಲೇ ನಕಲಿ ಡಿಡಿ ತಯಾರು! ದಂಪತಿ ಸೇರಿ ನಾಲ್ವರ ಬಂಧನ: 7.18 ಕೋಟಿ ಡಿಡಿಗಳು ಜಪ್ತಿ
ಇಂಡಿಯನ್ ಮೇಡ್ ಲಿಕ್ಕರ್ (ಐಎಂಎಲ್) ಹಾಗೂ ಬಿಯರ್ ಮೇಲೆ ಶೇ.5ರಿಂದ ಶೇ.10ರವರೆಗೆ ಅಬಕಾರಿ ಸುಂಕ ವಿಧಿಸಲು ಚಿಂತಿಸಿರುವ ಸರ್ಕಾರ, ಶೀಘ್ರದಲ್ಲೇ ಆರ್ಥಿಕ ಇಲಾಖೆ ಅಧಿಕಾರಿಗಳ ಜತೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ.
ಮುಂಬರುವ ಬಜೆಟ್ನಲ್ಲಿ ಸರ್ಕಾರ, ಮದ್ಯದ ಮೇಲೆ ಅಬಕಾರಿ ಸುಂಕ ಹೆಚ್ಚಿಸಿದರೆ ಐಎಂಎಲ್ ಲಿಕ್ಕರ್ ಹಾಗೂ ಬಿಯರ್ ಬಾಟಲಿ ಬೆಲೆ 5ರಿಂದ 10 ರೂ. ಏರಿಕೆ ಆಗಲಿದೆ.
ಮದ್ಯದ ಮೇಲೆ ಅಬಕಾರಿ ಸುಂಕ ಹೆಚ್ಚಿಸಬಹುದು ಅಥವಾ ಇಲ್ಲದಿರಬಹುದು. ಈ ಬಗ್ಗೆ ನಿಖರ ಮಾಹಿತಿ ಇಲ್ಲ. ಆದರೆ, ಆರ್ಥಿಕ ಇಲಾಖೆಯ ಉನ್ನತ ಅಧಿಕಾರಿಗಳ ಜತೆ ಚರ್ಚಿಸಿ ಸರ್ಕಾರ ಸುಂಕ ಹೆಚ್ಚಿಸುವ ಸಾಧ್ಯತೆ ಹೆಚ್ಚಿದೆ ಎಂದು ಹೆಸರು ಹೇಳಲಿಚ್ಚಿಸದ ಅಧಿಕಾರಿ 'ವಿಜಯವಾಣಿ'ಗೆ ತಿಳಿಸಿದ್ದಾರೆ.