

ಬೆಂಗಳೂರು: ಫುಡ್ ಡೆಲಿವರಿ ಸೋಗಿನಲ್ಲಿ ಮದ್ಯ ಸರಬರಾಜು ಮಾಡುತ್ತಿದ್ದ ಇಬ್ಬರನ್ನು ಬಂಡೇಪಾಳ್ಯ ಪೊಲೀಸರು ಬಂಧಿಸಿದ್ದಾರೆ.
ಎಲೆಕ್ಟ್ರಾನಿಕ್ಸ್ ಸಿಟಿ ನಿವಾಸಿ ಜೈಪಾಲ್ (29) ಮತ್ತು ಹರಳೂರು ನಿವಾಸಿ ರಾಜು (26) ಬಂಧಿತರು. ಆರೋಪಿಗಳಿಂದ ಮದ್ಯದ 15 ಟೆಟ್ರಾ ಪ್ಯಾಕ್ ಮದ್ಯ ಹಾಗೂ ಬೈಕ್ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಕ್ರಮ ಮದ್ಯ ಸಂಗ್ರಹ!: ಆರೋಪಿಗಳಿಬ್ಬರು ಪಾರ್ಸೆಲ್ ಊಟ ಸರಬರಾಜು ಮಾಡುವ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದರು. ಲಾಕ್ಡೌನ್ ಹಿನ್ನೆಲೆಯಲ್ಲಿ ಮದ್ಯ ಮಾರಾಟ ಸ್ಥಗಿತವಾಗಿದೆ. ಇದನ್ನು ತಿಳಿದುಕೊಂಡಿದ್ದು, ದುಪ್ಪಟ್ಟು ಹಣ ಗಳಿಸಬಹುದು ಎಂಬ ಉದ್ದೇಶದಿಂದ ಅಕ್ರಮವಾಗಿ ಮದ್ಯ ಸಂಗ್ರಹಿಸಿದ್ದರು. ಊಟಕ್ಕೆ ಆರ್ಡರ್ ಕೊಡುವ ಗ್ರಾಹಕರಿಗೆ ಮದ್ಯ ಸಿಗುತ್ತದೆ ಎಂದು ತಿಳಿಸಿ ಬೆಲೆ ನಿಗದಿಪಡಿಸಿಕೊಳ್ಳುತ್ತಿದ್ದರು. ಊಟದ ಜತೆಗೆ ಮದ್ಯ ಮಾರಾಟ ಮಾಡುತ್ತಿದ್ದರು.
ತಪಾಸಣೆ ವೇಳೆ ಸಿಕ್ಕಿಬಿದ್ದ: ಮಂಗಳವಾರ (ಏ.7) ರಾತ್ರಿ 7 ಗಂಟೆಯಲ್ಲಿ ಎಸ್ಐ ಭೀಮಾಶಂಕರ್ ಗುಮ್ಟೆ ಹಾಗೂ ಇತರ ಸಿಬ್ಬಂದಿ ಸೋಮಸಂದ್ರ ಸರ್ಕಲ್ ಬಳಿ ಲಾಕ್ಡೌನ್ ಬಂದೋಬಸ್ತ್ನಲ್ಲಿದ್ದಾಗ ಬೈಕ್ನಲ್ಲಿ ತೆರಳುತ್ತಿದ್ದ ಜೈಪಾಲ್ನನ್ನು ತಡೆದು ವಿಚಾರಿಸಿದ್ದಾರೆ. ಆಗ ಆತ ತಾನು ಫುಡ್ ಡೆಲಿವರಿ ಬಾಯ್ ಎಂದು ತಿಳಿಸಿದ್ದಾನೆ. ಆತನ ನಡವಳಿಕೆ ಮೇಲೆ ಅನುಮಾನ ಬಂದು ಬ್ಯಾಗ್ ಪರಿಶೀಲಿಸಿದಾಗ 90 ಎಂಎಲ್ ವಿಸ್ಕಿಯ ಟೆಟ್ರಾ ಪ್ಯಾಕ್ಗಳು ಸಿಕ್ಕಿವೆ. ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೃತ್ಯಕ್ಕೆ ಸಹಕರಿಸಿದ್ದ ತನ್ನ ಸ್ನೇಹಿತ ರಾಜು ಬಗ್ಗೆ ಬಾಯಿಬಿಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.