

ನವದೆಹಲಿ: ಹಾಲಿ ಟೀಮ್ ಇಂಡಿಯಾದಲ್ಲಿ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮ ಅವರನ್ನು ಬಿಟ್ಟರೆ ಆದರ್ಶವೆನಿಸುವ ಆಟಗಾರರು ಇಲ್ಲ. ಇವರಿಬ್ಬರನ್ನು ಬಿಟ್ಟರೆ, ಯುವ ಆಟಗಾರರಿಂದ ಹೆಚ್ಚಿನ ಗೌರವ ಪಡೆಯಬಲ್ಲಂಥ ಆಟಗಾರರೂ ತಂಡದಲ್ಲಿಲ್ಲ ಎಂದು ಮಾಜಿ ಆಲ್ರೌಂಡರ್ ಯುವರಾಜ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.
ರೋಹಿತ್ ಶರ್ಮ ಜತೆಗೆ ಇನ್ಸ್ಟಾಗ್ರಾಮ್ ಮೂಲಕ ನಡೆದ ಪ್ರಶ್ನೋತ್ತರ ಕಾರ್ಯಕ್ರಮದ ವೇಳೆ ಯುವರಾಜ್ ಸಿಂಗ್, ಹಾಲಿ ಭಾರತ ತಂಡ ಮತ್ತು ತಮ್ಮ ಕಾಲದ ತಂಡದ ನಡುವಿನ ವ್ಯತ್ಯಾಸವನ್ನು ಈ ರೀತಿಯಾಗಿ ಗುರುತಿಸಿದ್ದಾರೆ.
‘ನಾನು ಭಾರತ ತಂಡಕ್ಕೆ ಬಂದ ಸಮಯ ಅಥವಾ ನೀವು (ರೋಹಿತ್) ಭಾರತ ತಂಡಕ್ಕೆ ಬಂದ ಸಮಯ, ನಮ್ಮ ಹಿರಿಯ ಆಟಗಾರರು ಸಾಕಷ್ಟು ಶಿಸ್ತುಬದ್ಧವಾಗಿದ್ದರು. ಅವರು ಹೇಗೆ ನಡೆದುಕೊಳ್ಳುತ್ತಾರೆ, ಜನರೊಂದಿಗೆ ಹೇಗೆ ಮಾತನಾಡುತ್ತಾರೆ, ಮಾಧ್ಯಮದೊಂದಿಗೆ ಹೇಗೆ ಮಾತನಾಡುತ್ತಾರೆ ಎಂಬುದನ್ನು ಗಮನಿಸುತ್ತಿದ್ದೆವು. ಅವರು ಆಗ ದೇಶದ ಕ್ರಿಕೆಟ್ ರಾಯಭಾರಿಗಳಾಗಿದ್ದರು’ ಎಂದು ಯುವರಾಜ್ ಸಿಂಗ್ ವಿವರಿಸಿದ್ದಾರೆ.
ಪಾಂಡ್ಯ-ರಾಹುಲ್ ವಿವಾದಕ್ಕೆ ಬೇಸರ
ಕಳೆದ ವರ್ಷಾರಂಭದಲ್ಲಿ ಭಾರತ ತಂಡದ ಆಟಗಾರರಾದ ಹಾರ್ದಿಕ್ ಪಾಂಡ್ಯ ಮತ್ತು ಕೆಎಲ್ ರಾಹುಲ್ ‘ಕಾಫಿ ವಿತ್ ಕರಣ್’ ಶೋನಲ್ಲಿ ಮಹಿಳೆಯರ ಬಗ್ಗೆ ಅಸಭ್ಯ ಹೇಳಿಕೆ ನೀಡಿ ವಿವಾದಕ್ಕೆ ಗ್ರಾಸವಾಗಿದ್ದರು. ಇದಕ್ಕೆ ಬೇಸರ ವ್ಯಕ್ತಪಡಿಸಿರುವ ಯುವರಾಜ್, ನಮ್ಮ ಕಾಲದಲ್ಲಿ ಇಂಥ ಘಟನೆ ಆಗಲು ಸಾಧ್ಯವೇ ಇರುತ್ತಿರಲಿಲ್ಲ ಎಂದಿದ್ದಾರೆ. ‘ನಮ್ಮ ಸಮಯದಲ್ಲಿ ಸಾಮಾಜಿಕ ಜಾಲತಾಣ ಇರದ ಕಾರಣ ನಮಗೆ ಆಟದ ಮೇಲಿನ ಗಮನ ಭಂಗವೂ ಆಗುತ್ತಿರಲಿಲ್ಲ. ಆದರೆ ಈಗಿನ ಯುವ ಆಟಗಾರರು ಸಾಮಾಜಿಕ ಜಾಲತಾಣ, ಪಾರ್ಟಿ ಮತ್ತಿತರ ವಿಚಾರದಲ್ಲಿ ವ್ಯಸ್ತರಾಗಿರುತ್ತಾರೆ. ನಮ್ಮ ಕಾಲದಲ್ಲಿ ಇದರ ಬಗ್ಗೆ ಚಿಂತಿಸಲು ಕೂಡ ಸಾಧ್ಯವಾಗುತ್ತಿರಲಿಲ್ಲ. ಯಾಕೆಂದರೆ ನಾವೇನಾದರು ತಪ್ಪು ಮಾಡಿದರೆ ತಂಡದ ಹಿರಿಯ ಆಟಗಾರರು ಏನನ್ನುತ್ತಾರೆ ಎಂಬ ಭಯ ಕಾಡುತ್ತಿತ್ತು’ ಎಂದು ಯುವಿ ಹೇಳಿದ್ದಾರೆ.