

ಅಳವಂಡಿ: ಟಿವಿ ಹಾಗೂ ಮೊಬೈಲ್‌ನಿಂದ ಮಕ್ಕಳನ್ನು ದೂರ ಇದ್ದು, ಓದಿನ ಕಡೆಗೆ ಗಮನಹರಿಸುವಂತೆ ಪಾಲಕರು ಕಾಳಜಿವಹಿಸಬೇಕು ಎಂದು ಮುಖ್ಯಶಿಕ್ಷಕ ಪರಶುರಾಮ ಸಾಲ್ಮನಿ ತಿಳಿಸಿದರು.
ಬೆಟಗೇರಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಗುರುವಾರ ಆಯೋಜಿಸಿದ್ದ ಪಾಲಕರ ಸಭೆಯಲ್ಲಿ ಮಾತನಾಡಿದರು. ಮನೆಯಲ್ಲಿ ಮಕ್ಕಳಿಗೆ ಕಲಿಕೆಯ ವಾತಾವರಣ ಕಲ್ಪಿಸಬೇಕು. ಟಿವಿ, ಮೊಬೈಲ್‌ಗಳ ಜತೆ ಕಾಲಹರಣ ಮಾಡುವ ಬದಲು ಮನೆಪಾಠ ಮಾಡುವುದನ್ನು ಪಾಲಕರು ರೂಢಿಸಿಕೊಳ್ಳಬೇಕು ಎಂದರು.
ಶಿಕ್ಷಕ ಗಿರಿಯಪ್ಪ ಹಾರನಳ್ಳಿ ಮಾತನಾಡಿ, ಮಕ್ಕಳ ಶೈಕ್ಷಣಿಕ ಪ್ರಗತಿಗೆ ಶಿಕ್ಷಕರು ಮತ್ತು ಪಾಲಕರ ಪರಿಶ್ರಮ ಅಗತ್ಯ. ಇವರಿಬ್ಬರು ಪ್ರಯತ್ನಿಸಿದರೆ ಮಕ್ಕಳಿಂದ ಉತ್ತಮ ಫಲಿತಾಂಶ ನಿರೀಕ್ಷಿಸಬಹುದು. ಈ ನಿಟ್ಟಿನಲ್ಲಿ ಎಲ್ಲರೂ ಜವಾಬ್ದಾರಿಯನ್ನು ಸಮರ್ಪಕವಾಗಿ ನಿಭಾಯಿಸೋಣ ಎಂದು ಹೇಳಿದರು.
ಪಾಲಕರ ಪ್ರತಿನಿಧಿಯಾಗಿ ಶಂಕ್ರಪ್ಪ ಬಡಿಗೇರ ಮಾತನಾಡಿ, ಫಲಿತಾಂಶ ಸುಧಾರಣೆಗಾಗಿ ಶಿಕ್ಷಕರು ಕೈಗೊಂಡ ಕಾರ್ಯಗಳು ಶ್ಲಾಘನೀಯ. ಇದೇ ರೀತಿ ನಿಮ್ಮ ಪ್ರಯತ್ನ ಹಾಗೂ ನಮ್ಮ ಸಹಕಾರದಿಂದ ಮಕ್ಕಳ ಏಳಿಗೆಗೆ ಶ್ರಮಿಸೋಣ ಎಂದರು.
ಎಸ್ಡಿಎಂಸಿ ಅಧ್ಯಕ್ಷ ಬಸವರಾಜ ಚಿಲವಾಡಗಿ, ಶಿಕ್ಷಕರಾದ ಮರ್ದಾನಲಿ ಗಡಾದ, ಗಿರಿಯಪ್ಪ ಹಾರನಹಳ್ಳಿ, ರಾಜಸಾಹೇಬ್ ಬಳಗೇರ, ರವಿಕಿರಣ ಟಿಕಾರೆ, ಪ್ರಕಾಶರೆಡ್ಡಿ ಗೋವಿಂದ ರೆಡ್ಡಿ, ಪ್ರಮುಖ ಶಂಕ್ರಪ್ಪ ಬಡಿಗೇರ ಇತರರಿದ್ದರು.