ಸಂಪಾದಕೀಯ | ಎಚ್ಚರಿಕೆಯ ಗಂಟೆ

ವಿಜಯವಾಣಿ
Published on

ಆರ್ಥಿಕ ಸ್ಥಿತಿಗತಿಯನ್ನು ಪರಾಮಶಿಸದೆಯೇ ರಾಜಕೀಯ ಪಕ್ಷಗಳು ಜನರ ಮತಗಳನ್ನು ಸೆಳೆಯಲು ಬೇಕಾಬಿಟ್ಟಿ ಉಚಿತ ಗ್ಯಾರಂಟಿಗಳನ್ನು ಘೋಷಿಸುವುದರಿಂದ ಹಲವು ರಾಜ್ಯಗಳಿಗೆ ಸಾಲದ ಹೊರೆ ಕುತ್ತಿಗೆಯವರೆಗೂ ಬಂದು ತಲುಪಿದೆ. ಇದಕ್ಕೆ ಜ್ವಲಂತ ನಿದರ್ಶನ ಹಿಮಾಚಲ ಪ್ರದೇಶ. ಈ ರಾಜ್ಯದಲ್ಲಿ ಆರ್ಥಿಕ ಸಂಕಷ್ಟ ಯಾವ ಮಟ್ಟಕ್ಕೆ ತಲುಪಿದೆಯೆಂದರೆ, ಮುಖ್ಯಮಂತ್ರಿ ಸುಖವಿಂದರ್ ಸುಖು ನೇತೃತ್ವದ ಕಾಂಗ್ರೆಸ್ ಸರ್ಕಾರವು ‘ಮುಖ್ಯಮಂತ್ರಿ ಸುಖ ಆಶ್ರಯ’ ಮತ್ತು ‘ಮುಖ್ಯಮಂತ್ರಿ ಸುಖ್ ಶಿಕ್ಷಾ ಯೋಜನೆ’ಗೆ ಹಣ ನೀಡುವಂತೆ ಪ್ರಮುಖ ದೇವಸ್ಥಾನಗಳಿಗೆ ಪತ್ರ ಬರೆದಿದೆ!

ರಾಜ್ಯದಲ್ಲಿ 35ಕ್ಕೂ ಹೆಚ್ಚು ದೊಡ್ಡ ದೇವಸ್ಥಾನಗಳು ಸರ್ಕಾರದ ಅಧೀನದಲ್ಲಿದ್ದು, ಇವುಗಳಿಗೆ ಕೋಟ್ಯಂತರ ರೂಪಾಯಿ ಆದಾಯವಿದೆ. ಆದರೆ, ಸರ್ಕಾರಿ ಯೋಜನೆಗಳಿಗೆ ಅದರಲ್ಲೂ ಉಚಿತ ಗ್ಯಾರಂಟಿಗಳಿಗೆ ದೇವಸ್ಥಾನದ ಹಣ ಕೇಳಿರುವುದು ರಾಜಕೀಯ ವಲಯದಲ್ಲಿ ಬಿರುಗಾಳಿಯನ್ನು ಎಬ್ಬಿಸಿದ್ದು, ಸರ್ಕಾರದ ಈ ನಡೆಯನ್ನು ರಸ್ತೆಯಿಂದ ಸದನದವರೆಗೂ ವಿರೋಧಿಸುವುದಾಗಿ ಪ್ರತಿಪಕ್ಷ ಬಿಜೆಪಿ ಹೇಳಿದೆ. ಹಿಮಾಚಲದಲ್ಲಿ ಆರ್ಥಿಕ ಸ್ಥಿತಿ ಪಾತಾಳಕ್ಕೆ ತಲುಪಿದ ಸ್ಪಷ್ಟ ಸೂಚನೆ 2024ರ ಆಗಸ್ಟ್​ನಲ್ಲಿಯೇ ದೊರಕಿತ್ತು. ತಾನು ಮತ್ತು ತಮ್ಮ ಸರ್ಕಾರದ ಸಚಿವರು, ಸಂಸದೀಯ ಕಾರ್ಯದರ್ಶಿಗಳು ಮತ್ತು ನಿಗಮ ಮಂಡಳಿಗಳ ಅಧ್ಯಕ್ಷರು ಎರಡು ತಿಂಗಳು ಸಂಬಳ ಹಾಗೂ ಭತ್ಯೆಗಳನ್ನು ಪಡೆಯುವುದಿಲ್ಲ ಎಂದು ಮುಖ್ಯಮಂತ್ರಿ ಸುಖವಿಂದರ್ ಸುಖು ಹೇಳಿದ್ದು, ಪರಿಸ್ಥಿತಿಯ ಗಂಭೀರತೆಗೆ ಸಾಕ್ಷಿಯಾಗಿತ್ತು. ಮಾತ್ರವಲ್ಲ, ಹಿಮಾಚಲದ ಸರ್ಕಾರಿ ನೌಕರರಿಗೆ ಸಮಯಕ್ಕೆ ಸರಿಯಾಗಿ ಸಂಬಳ ಹಾಗೂ ಪಿಂಚಣಿ ನೀಡಲು ಕೂಡ ಸಾಧ್ಯವಾಗದಂಥ ಸ್ಥಿತಿ ಇದೆ.

2022ರ ಮುಂಚೆ ಸ್ಥಿತಿ ಹೀಗಿರಲಿಲ್ಲ. ಭಾರತೀಯ ರಿಸರ್ವ್ ಬ್ಯಾಂಕ್ ವರದಿಯ ಪ್ರಕಾರ ಕಳೆದ ಐದು ವರ್ಷಗಳಲ್ಲೇ ಹಿಮಾಚಲದ ಸಾಲ 30 ಸಾವಿರ ಕೋಟಿ ರೂ.ಗಳಷ್ಟು ಹೆಚ್ಚಿದೆ. 2021ರ ಮಾರ್ಚ್​ನಲ್ಲಿ 62,218 ಕೋಟಿ ರೂ.ಗಳಿದ್ದ ಸಾಲ 2025ರ ಮಾರ್ಚ್ ಹೊತ್ತಿಗೆ 94,992 ಕೋಟಿ ರೂ.ಗೆ ತಲುಪಲಿದೆ. ಸಾಲ ಹೆಚ್ಚಲು ಮುಖ್ಯ ಕಾರಣ ‘ಉಚಿತ ಗ್ಯಾರಂಟಿಗಳು’. 2022ರ ವಿಧಾನಸಭೆ ಚುನಾವಣೆಯ ಮುನ್ನ ಹಲವು ಉಚಿತ ಕೊಡುಗೆಗಳನ್ನು ಘೋಷಿಸಿದ ಸರ್ಕಾರ ಇವುಗಳ ಜಾರಿಗೆ ಭಾರಿ ಮೊತ್ತವನ್ನು ವ್ಯಯಿಸಿ, ಖಜಾನೆಯನ್ನು ಬರಿದು ಮಾಡಿದೆ. ಮಹಿಳೆಯರಿಗೆ ಪ್ರತಿ ತಿಂಗಳು 1500 ರೂ. ನೀಡಲಾಗುತ್ತಿದ್ದು, ಇದಕ್ಕೆ 800 ಕೋಟಿ ರೂ. ವೆಚ್ಚವಾಗುತ್ತಿದೆ. ಹಳೆಯ ಪಿಂಚಣಿ ಯೋಜನೆ ಜಾರಿ ಮಾಡಿದ್ದರಿಂದ ಬೊಕ್ಕಸದ ಮೇಲೆ 1 ಸಾವಿರ ಕೋಟಿ ರೂ.ಗಳ ಹೊರೆ ಹೆಚ್ಚಿದೆ.

ಉಚಿತ ವಿದ್ಯುತ್ ಯೋಜನೆಗಾಗಿ 18 ಸಾವಿರ ಕೋಟಿ ರೂ. ವೆಚ್ಚವಾಗುತ್ತಿದೆ. ಒಟ್ಟಾರೆ 20 ಸಾವಿರ ಕೋಟಿ ರೂ.ಗೂ ಅಧಿಕ ಹಣ ಈ ‘ಗ್ಯಾರಂಟಿ’ಗಳಿಗೆ ಖರ್ಚಾಗುತ್ತಿದೆ. ಇದು ಹಿಮಾಚಲದ ಸ್ಥಿತಿ ಮಾತ್ರವಲ್ಲ. ತಮಿಳುನಾಡು ಮತ್ತು ಪಂಜಾಬ್ ರಾಜ್ಯಗಳ ಸಾಲವೂ ಗಾಬರಿ ಹುಟ್ಟಿಸುವ ಪ್ರಮಾಣದಲ್ಲಿ ಹೆಚ್ಚುತ್ತಿದೆ. ಆರ್ಥಿಕ ಶಿಸ್ತನ್ನು ಉಲ್ಲಂಘಿಸಿ ನೀಡಲಾಗುವ ಉಚಿತ ಗ್ಯಾರಂಟಿಗಳು ಯಾವೆಲ್ಲ ಅಪಸವ್ಯ ಸೃಷ್ಟಿಸುತ್ತವೆ ಎಂಬುದಕ್ಕೆ ಇವು ತಾಜಾ ನಿದರ್ಶನಗಳಾಗಿವೆ. ಇದು ಇತರ ರಾಜ್ಯಗಳು ಮತ್ತು ರಾಜಕೀಯ ಪಕ್ಷಗಳಿಗೂ ಪಾಠವಾಗಬೇಕು. ಯೋಜನೆಯ ಘೋಷಣೆಯ ಮೊದಲು ಆರ್ಥಿಕತೆಯ ಸ್ಥಿತಿಗತಿಯನ್ನು ಅವಲೋಕಿಸಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net