

ಮುಂಬೈ: ಬಾಲಿವುಡ್ ನಟ ಅಕ್ಷಯ್ ಕುಮಾರ್ ಗೆ ಸೋಮವಾರ(ಸೆ.9)ಹುಟ್ಟುಹಬ್ಬದ ಸಂಭ್ರಮ. ಇದೇ ಹಿನ್ನೆಲೆಯಲ್ಲಿ ಅಕ್ಷಯ್ ಮುಂದಿನ ಹರಾರ್, ಕಾಮಿಡಿಯ 'ಭೂತ್ಬಂಗ್ಲಾ'ಚಿತ್ರದ ಘೋಷಣೆಯಾಗಿದೆ. 14 ವರ್ಷಗಳ ನಂತರ ನಿರ್ಮಾಪಕ ಪ್ರಿಯದರ್ಶನ್ ಚಿತ್ರದಲ್ಲಿ ಅಕ್ಷಯ್ ಕುಮಾರ್ ಮತ್ತೆ ನಟಿಸುತ್ತಿರುವುದು ವಿಶೇಷವಾಗಿದೆ.
ಅಕ್ಷಯ್ ಮತ್ತು ಪ್ರಿಯದರ್ಶನ್ ಈ ಹಿಂದೆ ಹೇರಾ ಫೇರಿ, ಭೂಲ್ ಭುಲೈಯಾ, ಭಾಗಂಭಾಗ್, ಗರಂ ಮಸಾಲಾ ಮತ್ತಿತರ ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ. ಈ ಇಬ್ಬರ ಕಾಂಬಿನೇಷನ್ ಯಶಸ್ವಿ ಚಿತ್ರಗಳನ್ನು ತೆರೆಗೆ ತರುವಲ್ಲಿಯೂ ಯಶಸ್ವಿಯಾಗಿತ್ತು. ಅದೇ ರೀತಿ ಅಕ್ಷಯ್ ತಮ್ಮ 57 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ ಪ್ರಿಯದರ್ಶನ್ ಅವರೊಂದಿಗೆ 'ಭೂತ್ಬಂಗ್ಲಾ'ವನ್ನು ಘೋಷಿಸಿದ್ದು, ಅಭಿಮಾನಿಗಳಲ್ಲಿ ನಿರೀಕ್ಷೆ ಹುಟ್ಟುಹಾಕುವಂತೆ ಮಾಡಿದೆ.
'ಭೂತ್ಬಂಗ್ಲಾ'ಹಾರರ್ ಮತ್ತು ಹಾಸ್ಯಮಯ ಚಿತ್ರವಾಗಿದ್ದು ಇದನ್ನು ಏಕ್ತಾ ಕಪೂರ್ ನಿರ್ದೇಶಿಸಲಿದ್ದಾರೆ. ಚಿತ್ರವು ಶೀಘ್ರದಲ್ಲೇ ಸೆಟ್ಟೇರುವ ನಿರೀಕ್ಷೆಯಿದೆ. 2025 ರಲ್ಲಿ ಚಿತ್ರವು ತೆರೆಗೆ ಅಪ್ಪಳಿಸಲಿದೆ ಎನ್ನಲಾಗುತ್ತಿದೆ.
ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಅನ್ನು ಅಕ್ಷಯ್ ತಮ್ಮ ಅಧಿಕೃತ ಸಾಮಾಜಿಕ ಮಾಧ್ಯಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವೀಡಿಯೊದಲ್ಲಿ, ಅಕ್ಷಯ್ ಹಾಲಿನ ಬಟ್ಟಲನ್ನು ಹಿಡಿದಿದ್ದು, ಹಾಲು ನೆಕ್ಕಲು ನಾಲಿಗೆ ಚಾಚಿರುವುದು ಕಂಡುಬರುತ್ತದೆ. ಅವರ ಭುಜದ ಮೇಲೆ ಕಪ್ಪು ಬೆಕ್ಕು ಕುಳಿತಿರುವುದು ಸಹ ನೋಡಬಹುದಾಗಿದೆ.
ಪೋಸ್ಟರ್ ಜೊತೆಗೆ, ನನ್ನ ಜನ್ಮದಿನದಂದು ಶುಭಹಾರೈಸುತ್ತಿರುವ ನಿಮ್ಮ ಪ್ರೀತಿಗೆ ಧನ್ಯವಾದಗಳು. ಈ ವರ್ಷವನ್ನು 'ಭೂತ್ ಬಂಗ್ಲಾ' ಮೊದಲ ನೋಟದೊಂದಿಗೆ ಆಚರಿಸುತ್ತಿದ್ದೇನೆ. 14 ವರ್ಷದ ನಂತರ ಮತ್ತೆ ಪ್ರಿಯದರ್ಶನ್ ಜೊತೆ ಕೆಲಸ ಮಾಡಲು ಉತ್ಸುಕನಾಗಿದ್ದೇನೆ ಎಂದು ಅಕ್ಷಯ್ ಬರೆದುಕೊಂಡಿದ್ದಾರೆ.