

ಶಿವಮೊಗ್ಗ: ಮಹರ್ಷಿ ಹಾತಿರಾಮ್ ಮೆಮೋರಿಯಲ್ ಎಜುಕೇಶನ್ ಟ್ರಸ್ಟ್‌ನ ಅಕ್ಷರ ಸಂಯುಕ್ತ ಪದವಿಪೂರ್ವ ಕಾಲೇಜು ಕಾರ್ಕಳದ ಕ್ರಿಯೇಟೀವ್ ಶಿಕ್ಷಣ ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಿಕೊಂಡಿದೆ ಎಂದು ಟ್ರಸ್ಟ್‌ನ ಕಾರ್ಯದರ್ಶಿ ಕೆ.ಬಿ.ಅಶೋಕನಾಯ್ಕ ಹೇಳಿದರು.
ಸಂಸ್ಥೆಯ ಗೌರವಾಧ್ಯಕ್ಷೆ ಕೆ.ರತ್ನಾಕುಮಾರಿ ನೇತೃತ್ವದಲ್ಲಿ ಶಿಕ್ಷಣ ಸಂಸ್ಥೆ ನಡೆಯುತ್ತಿದ್ದು, ಇದೀಗ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಯ ಪರ್ವ ಆರಂಭಗೊಂಡಿದೆ. ಹಾಗಾಗಿ ಮುಂದಿನ ಪೀಳಿಗೆಯನ್ನು ಗಮನದಲ್ಲಿಟ್ಟುಕೊಂಡು ಕ್ರಿಯೇಟೀವ್ ಸಂಸ್ಥೆ ಜತೆ ಕೈಜೋಡಿಸಲಾಗಿದೆ. ಮುಂದಿನ ಶೈಕ್ಷಣಿಕ ವರ್ಷ(ಜೂನ್)ದಿಂದಲೇ ಅಕ್ಷರ ಪಿಯು ಕಾಲೇಜನ್ನು ಕ್ರಿಯೇಟೀವ್ ಸಂಸ್ಥೆ ಮುನ್ನಡೆಸಲಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಶಿವಮೊಗ್ಗ ಸೇರಿ ಸುತ್ತಮುತ್ತಲಿನ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವುದು ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗೆ ವಿದ್ಯಾರ್ಥಿಗಳನ್ನು ತಯಾರು ಮಾಡುವ ಸದುದ್ದೇಶದಿಂದ ಈ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಈ ಹೊಸ ಅಂಗ ಸಂಸ್ಥೆಯನ್ನು ಪ್ರಬಲ ಮತ್ತು ಸ್ಪರ್ಧಾತ್ಮಕ ಕೇಂದ್ರವನ್ನಾಗಿಸಲಿದೆ. ಕ್ರಿಯೇಟೀವ್ ಸಂಸ್ಥೆಯ ಈ ಹೆಜ್ಜೆ ಶಿವಮೊಗ್ಗದ ಶೈಕ್ಷಣಿಕ ವಿಚಾರದಲ್ಲಿ ಹೊಸ ಬೆಳಕು ಮೂಡಿಸಲಿದೆ ಎಂದರು.
ಕ್ರಿಯೇಟೀವ್ ಶಿಕ್ಷಣ ಸಂಸ್ಥೆಯ ಎಸ್.ಎಲ್.ಅಶ್ವತ್ ಮಾತನಾಡಿ, ಏಳು ಸಮಾನ ಮನಸ್ಕರಿಂದ 2020ರಲ್ಲಿ ಸ್ಥಾಪಿಸಲ್ಪಟ್ಟ ಮೂಡಬಿದ್ರೆಯ ಕ್ರಿಯೇಟೀವ್ ಶಿಕ್ಷಣ ಪ್ರತಿಷ್ಠಾನವು ಇದೀಗ 5ನೇ ವರ್ಷದ ಸಂಭ್ರಮದಲ್ಲಿದೆ. ಕಾರ್ಕಳ, ಉಡುಪಿ, ಹಾಸನದಲ್ಲಿ ತನ್ನ ಶಾಖೆಗಳನ್ನು ಹೊಂದಿದ್ದು, ಮಹತ್ತರ ಕನಸುಗಳನ್ನು ಹೊತ್ತು ಪಿಯುಸಿಗೆ ಬರುವ ವಿದ್ಯಾರ್ಥಿಗಳ ಭವಿಷ್ಯ ಸ್ಪರ್ಧಾತ್ಮಕ ಪರೀಕ್ಷೆಗಳು ನಿರ್ಧಾರ ಮಾಡಲಿವೆ. ನಮ್ಮ ಸಂಸ್ಥೆಯಲ್ಲಿ ನೀಟ್, ಜೆಇಇ, ಕೆಸಿಇಟಿ, ಐಐಟಿ, ಎನ್‌ಡಿಎ ಸೇರಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನುಭವಿ ಉಪನ್ಯಾಸಕರಿಂದ ತರಬೇತಿ ಕೊಡಿಸಲಾಗುತ್ತಿದೆ ಎಂದರು.
ಅಕ್ಷರ ಕಾಲೇಜಿನ ಪ್ರಾಚಾರ್ಯ ಗಿರೀಶ್‌ಗೌಡ, ಕ್ರಿಯೆಟಿವ್ ಸಂಸ್ಥೆಯ ಕೆ.ಎಸ್.ಗಣಪತಿ ಭಟ್, ಪ್ರಾಚಾರ್ಯ ನಂದೀಶ್, ಡಾ. ಬಿ.ಗಣನಾಥ ಶೆಟ್ಟಿ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.