ಅಕ್ಸಾಯ್ ಚಿನ್ ನಕಾಶೆ ಚೀನಾ ಹೊಸ ಕ್ಯಾತೆ

ವಿಜಯವಾಣಿ (7)
Published on

ಎರಡು ಹೊಸ ಕೌಂಟಿಗಳ ಸೃಷ್ಟಿ | ಗಡಿ ಮಾತುಕತೆ ಬೆನ್ನಲ್ಲೇ ತಂಟೆ

ನವದೆಹಲಿ: ಗಡಿ ವಿಚಾರವಾಗಿ ಸದಾ ಭಾರತದ ಜೊತೆ ತಗಾದೆ ತೆಗೆಯುವ ಚೀನಾ, ಇದೀಗ ಮತ್ತೊಂದು ಕುಚೋದ್ಯ ನಡೆಸಿದೆ. ಚೀನಾವು ಎರಡು ಹೊಸ ಕೌಂಟಿಗಳನ್ನು ಸೃಷ್ಟಿಸಿದ್ದು, ಅದರಲ್ಲಿ ಒಂದು ನಕಾಶೆಯು ಅಕ್ಸಾಯ್ ಚಿನ್ ಪ್ರದೇಶದ ಬಹುಭಾಗವನ್ನು ಒಳಗೊಂಡಿದೆ. ಎರಡೂ ದೇಶಗಳ ವಿಶೇಷ ಪ್ರತಿನಿಧಿಗಳು ಗಡಿ ಮಾತುಕತೆಗಳನ್ನು ಪುನರಾರಂಭಿಸಿದ ಕೆಲವೇ ದಿನಗಳಲ್ಲಿ ಚೀನಾ ಇಂಥ ಕ್ರಮಕ್ಕೆ ಮುಂದಾಗುವ ಮೂಲಕ ಗಡಿ ವಿವಾದವನ್ನು ಮತ್ತೆ ಕೆದಕಿದೆ.

ಚೀನಾದ ಷಿನ್​ಜಿಯಾಂಗ್ ಉಯ್ಘರ್ ಸ್ವಾಯತ್ತ ಪ್ರದೇಶ ಆಡಳಿತವು ಹಿಯಾನ್ ಮತ್ತು ಹೆಕಾನ್ ಎಂಬ ಎರಡು ಹೊಸ ಕೌಂಟಿಗಳ ಸ್ಥಾಪನೆಯನ್ನು ಘೋಷಿಸಿದೆ ಎಂದು ಕಮ್ಯೂನಿಸ್ಟ್ ಪಕ್ಷದ ಮುಖವಾಣಿಯಾದ ಷಿನುವಾ ಸುದ್ದಿ ಸಂಸ್ಥೆ ತಿಳಿಸಿದೆ. ಇದರಲ್ಲಿ ಹಿಯಾನ್ ಕೌಂಟಿಯು 38 ಸಾವಿರ ಚದರ ಕಿಮೀ ವಿಸ್ತಾರದ ಅಕ್ಸಾಯ್ ಚಿನ್ ಪ್ರದೇಶದ ಬಹುಭಾಗವನ್ನು ವ್ಯಾಪಿಸಿದೆ. ಈ ಎರಡೂ ಕೌಂಟಿಗಳ ಸ್ಥಾಪನೆಗೆ ಕಮ್ಯೂನಿಸ್ಟ್ ಪಕ್ಷ ಸಮ್ಮತಿಯ ಮುದ್ರೆಯೊತ್ತಿದೆ ಎಂದೂ ವರದಿ ತಿಳಿಸಿದೆ.

ಅಕ್ಸಾಯ್ ಚಿನ್ ಪ್ರದೇಶವನ್ನು ಚೀನಾ ಅತಿಕ್ರಮಿಸಿದೆ ಎಂದು ಭಾರತ ಪ್ರತಿಪಾದಿಸುತ್ತದೆ. ಹೊಸ ನಕಾಶೆ ಬಗ್ಗೆ ಭಾರತ ಸರ್ಕಾರ ಇನ್ನೂ ಅಧಿಕೃತವಾಗಿ ಪ್ರತಿಕ್ರಿಯೆ ನೀಡಿಲ್ಲ. ಅರುಣಾಚಲ ಪ್ರದೇಶದ ವಿಚಾರದಲ್ಲಿಯೂ ಚೀನಾ ಕೆಲ ಭಾಗಗಳ ಹೆಸರು ಬದಲಾವಣೆ, ನಕಾಶೆ ಪ್ರಕಟಣೆ ಮುಂತಾದ ಕ್ರಮಕ್ಕೆ ಮುಂದಾಗಿದ್ದಿದೆ.

ಚೀನಾದಲ್ಲಿ 200 ಜೈಲುಗಳ ನಿರ್ಮಾಣ

ಬೀಜಿಂಗ್: ಅಧ್ಯಕ್ಷ ಷಿ ಜಿನ್​ಪಿಂಗ್ ಅವರ ಭ್ರಷ್ಟಾಚಾರವಿರೋಧಿ ಆಂದೋಲನದ ಅಂಗವಾಗಿ, ದೇಶದ ವಿವಿಧೆಡೆಗಳಲ್ಲಿ 200 ಕಾರಾಗೃಹಗಳನ್ನು ಹೊಸದಾಗಿ ನಿರ್ವಿುಸಲಾಗಿದೆ ಅಥವಾ ವಿಸ್ತರಿಸಲಾಗಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಈ ಜೈಲುಗಳನ್ನು ‘ಲಿಯುಜಿ’ಎಂದು ಕರೆಯಲಾಗುತ್ತಿದ್ದು, ಬಂಧಿತರಿಗೆ ಆರು ತಿಂಗಳವರೆಗೆ ಕಾನೂನು ನೆರವು ಸಿಗುವುದಿಲ್ಲ ಹಾಗೂ ಕುಟುಂಬ ಸದಸ್ಯರ ಭೇಟಿಗೂ ಅವಕಾಶ ಇರುವುದಿಲ್ಲ.

2012ರಲ್ಲಿ ಅಧಿಕಾರಕ್ಕೆ ಬಂದಂದಿನಿಂದ ಜಿನ್​ಪಿಂಗ್ ಅವರು ಭ್ರಷ್ಟಾಚಾರದ ವಿರುದ್ಧ ಸಮರ ಸಾರಿದ್ದಾರೆ ಮತ್ತು ಕಮ್ಯೂನಿಸ್ಟ್ ಪಕ್ಷದ ಮೇಲೆ ಹಿಡಿತವನ್ನು ಭದ್ರಪಡಿಸಿಕೊಳ್ಳುವ ದಿಸೆಯಲ್ಲಿ ಹೆಜ್ಜೆಗಳನ್ನಿಡುತ್ತಿದ್ದಾರೆ. ಈಗ ಮೂರನೇ ಅವಧಿಗೆ ಅಧ್ಯಕ್ಷರಾಗಿರುವ ಅವರು, ತಮ್ಮ ಇಮೇಜನ್ನು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಭ್ರಷ್ಟಾಚಾರಿಗಳಿಗೆ ಬಿಸಿಮುಟ್ಟಿಸಲು ಸಜ್ಜಾಗಿದ್ದಾರೆ. ಲಿಯುಜಿ ಎಂಬ ಪದ 2018ರಲ್ಲಿ ಬಂದಿದ್ದು, ಅದಕ್ಕು ಹಿಂದೆ ಶುವಾಂಗುಯ್ ಎಂಬ ಹೆಸರಿನ ಕಾರಾಗೃಹಗಳಿದ್ದವು. ಆದರೆ ಅವುಗಳಲ್ಲಿ ಬಂಧಿಗಳಿಗೆ ತೀವ್ರತರಹದ ಹಿಂಸೆ ನೀಡಲಾಗುತ್ತದೆ ಮತ್ತು ದೌರ್ಜನ್ಯ ನಡೆಯುತ್ತದೆ ಎಂಬ ಆರೋಪಗಳಿದ್ದವು. ಈ ಜೈಲುಗಳಲ್ಲಿ ಬಲವಾದ ಕಾವಲು ಮತ್ತು ಕಣ್ಗಾವಲು ವ್ಯವಸ್ಥೆ ಇರುತ್ತದೆ.

ಕಮ್ಯೂನಿಸ್ಟ್ ಪಕ್ಷದ ನಾಯಕರು ಮತ್ತು ಕಾರ್ಯಕರ್ತರನ್ನು ಮಾತ್ರವಲ್ಲದೆ, ಸರ್ಕಾರಿ ಅಧಿಕಾರಿಗಳು, ಸಾರ್ವಜನಿಕ ಸಂಸ್ಥೆಗಳ ಅಧಿಕಾರಿಗಳನ್ನು ಸಹ ಬಂಧನದಲ್ಲಿರಿಸಲಾಗುತ್ತದೆ. ಭಷ್ಟಾಚಾರದಲ್ಲಿ ತೊಡಗಿರುವ ಶಂಕೆಯಿರುವ ಉದ್ಯಮಿಗಳನ್ನು ಕೂಡ ಬಂಧಿಸಲಾಗುತ್ತದೆ. 2017ರಿಂದ 2024ರ ನವೆಂಬರ್ ಅವಧಿಯಲ್ಲಿ 218ಕ್ಕಿಂತ ಹೆಚ್ಚು ಯಿಲುಜಿ ಕೇಂದ್ರಗಳನ್ನು ನಿರ್ವಿುಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net