

ಪರಸ್ತ್ರೀಯರನ್ನು ನೋಡುವ ಸಂದರ್ಭ ಬಂದರೆ ಆಗ ನಾನು ಕುರುಡನಾಗಬೇಕು. ನಿನ್ನನ್ನು ನಿಂದೆ ಮಾಡುವ ಕಥೆಗಳಿದ್ದರೆ, ಮಾತುಗಳಿದ್ದರೆ ನಾನು ಕಿವುಡನಾಗಬೇಕು. ಕೆಟ್ಟ ಕೆಲಸಕ್ಕೆ, ದುರುದ್ದೇಶಗಳಿಗೆ ನನ್ನ ಕಾಲುಗಳು ಏಳುತ್ತವೆ ಎಂದರೆ ಅಂತಹ ಪ್ರಸಂಗದಲ್ಲಿ ನನ್ನ ಕಾಲುಗಳು ಕುಂಟಾಗಲಿ. ಅದೇ ರೀತಿ ದುಷ್ಟಕಾರ್ಯಗಳನ್ನು ಮಾಡುವುದಕ್ಕೆ ಕೈಗಳು ಇಲ್ಲದೇ ಇದ್ದ ಹಾಗೆ ಆಗಿ ನಾನು ಅಂಗವಿಕಲನಾಗಿ ಒದ್ದಾಡುವಂತೆ ಆಗಲಿ. ಗ್ರಾಮ್ಯಸುಖವನ್ನು ಅನುಭವಿಸುವ ವಿಷಯದೊಳಗೆ ನಪುಂಸಕನನ್ನಾಗಿ ಮಾಡು ಎಂದು ಅಕ್ರೂರ ಪ್ರಾರ್ಥನೆ ಮಾಡುತ್ತಾನೆ.
ಶ್ರೀಕೃಷ್ಣನಲ್ಲಿ ಭಕ್ತಿ ಹುಟ್ಟಬೇಕು ಎಂದರೆ ನಾನು ಮಾಡುವ ತಪ್ಪುಗಳಿಗೆ ಶಿಕ್ಷೆ ಆಗಬೇಕು. ಅದಕ್ಕಾಗಿ ಇಂತಹ ತಪ್ಪುಗಳಿಗೆ ಶಿಕ್ಷೆಯನ್ನು ಕೊಡು. ಕಾಮ ಕ್ರೋಧ ಲೋಭ ಮೋಹ ಮದ ಮಾತ್ಸರ್ಯಗಳನ್ನು ಕೊಡು ಎಂದು ಬೇಡುತ್ತಾನೆ. ಅಖಂಡವಾಗಿ ನಿನ್ನ ಪಾದಕಮಲಗಳನ್ನು ಅರ್ಚನೆ ಮಾಡುವ ಕಾಮ ಕೊಡು.
ಕೆಟ್ಟದ್ದನ್ನು ಇಚ್ಛೆ ಮಾಡಿದರೆ ಆದು ಮಾತ್ರ ತಪ್ಪು. ಒಳ್ಳೆಯದನ್ನು ಇಚೆ್ಛ ಮಾಡಿದರೆ ಅಂತಹ ಕಾಮವೂ ಒಳ್ಳೆಯದೇ. ಕಾಮ ಇಲ್ಲ ಎಂದಾದರೆ ನಾವು ಮುಂದೆ ಬರುವುದು ಹೇಗೆ? ಒಳ್ಳೆಯದನ್ನು ಮಾಡಬೇಕು ಎನ್ನುವ ಅಪೇಕ್ಷೆ ಆಸೆ ಇಚ್ಛೆ ನಮಗೆ ಇದ್ದರೇನೇ ನಾವು ಮುಂದೆ ಹೆಜ್ಜೆ ಇಡುತ್ತೇವೆ. ನಿನ್ನ ಪಾದಗಳನ್ನು ಭಜನೆ ಮಾಡುವ ಕಾಮ ನಮಗೆ ಇರಲಿ. ಹೀಗೆಯೇ ಪುಣ್ಯಸಂಪಾದನೆ ಮಾಡುವ ವಿಷಯದಲ್ಲಿ ಲೋಭ ಇತ್ಯಾದಿಗಳು ಇರಲಿ ಎಂದು ಶ್ರೀಕೃಷ್ಣನಲ್ಲಿ ಭಕ್ತಿಯಿಂದ ಬೇಡುತ್ತಿದ್ದಾನೆ.