ಅಕ್ಕಿಆಲೂರ ಕೋ- ಆಪರೇಟಿವ್ ಬ್ಯಾಂಕ್ ಶತಮಾನೋತ್ಸವ ಇಂದಿನಿಂದ

akkialuru
Published on


ಅಕ್ಕಿಆಲೂರ: ಪಟ್ಟಣದ ದಿ. ಅಕ್ಕಿಆಲೂರ ಅರ್ಬನ ಕೋ- ಆಪರೇಟಿವ್ ಬ್ಯಾಂಕಿನ ಶತಮಾನೋತ್ಸವ ಸಂಭ್ರಮ ಸಮಾರಂಭ ಸೆ. 9 ಮತ್ತು 10ರಂದು ಇಲ್ಲಿನ ಶ್ರೀ ಕುಮಾರೇಶ್ವರ ಕಲ್ಯಾಣ ಮಂಟಪದಲ್ಲಿ ಏರ್ಪಾಟಾಗಿದೆ.

9ರಂದು ಬೆಳಗ್ಗೆ 10ಕ್ಕೆ ಬ್ಯಾಂಕಿನ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ಸಂಸ್ಥಾಪಕ ಅಧ್ಯಕ್ಷ ಲಿಂಗಪ್ಪ ಬಸಪ್ಪ ಕೂಬಿಹಾಳ ಅವರ ಕಂಚಿನ ಪುತ್ಥಳಿ ಅನಾವರಣ ನೆರವೇರಲಿದೆ. ಬೆಳಗ್ಗೆ 11ಕ್ಕೆ ಕುಮಾರೇಶ್ವರ ಕಲ್ಯಾಣ ಮಂಟಪದಲ್ಲಿ ಜರುಗುವ ಉದ್ಘಾಟನೆ ಸಮಾರಂಭದಲ್ಲಿ ಹುಬ್ಬಳ್ಳಿ ಮೂರುಸಾವಿರಮಠದ ಜಗದ್ಗುರು ಡಾ. ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ವಿರಕ್ತಮಠದ ಶಿವಬಸವ ಸ್ವಾಮೀಜಿ ಸಮ್ಮುಖ ವಹಿಸುವರು. ಕಾನೂನು ಸಚಿವ ಎಚ್.ಕೆ. ಪಾಟೀಲ ಸಮಾರಂಭ ಉದ್ಘಾಟಿಸುವರು. ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ ಸ್ಮರಣ ಸಂಚಿಕೆ ಬಿಡುಗಡೆಗೊಳಿಸುವರು. ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಬ್ಯಾಂಕ್ ಅಧ್ಯಕ್ಷ ಷಣ್ಮುಖಪ್ಪ ಮುಚ್ಚಂಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ವಿಶ್ವನಾಥ ಹಿರೇಮಠ, ರಿಸರ್ವ್ ಬ್ಯಾಂಕ್ ಜನರಲ್ ಮ್ಯಾನೇಜರ್ ಮೀನಾಕ್ಷಿ ಗಡ, ಸ್ಮರಣ ಸಂಚಿಕೆ ಪ್ರಧಾನ ಸಂಪಾದಕ ಸತೀಶ ಕುಲಕರ್ಣಿ ಪಾಲ್ಗೊಳ್ಳಲಿದ್ದಾರೆ.

ಮಧ್ಯಾಹ್ನ 3ಕ್ಕೆ ಕೃಷಿ ಸಂಸ್ಕೃತಿ ಮತ್ತು ಆರ್ಥಿಕತೆ ಗೋಷ್ಠಿ ನಡೆಯಲಿದೆ. ಸಂಜೆ 6ರಿಂದ ಸಾಂಸ್ಕೃತಿಕ ಸಮಾರಂಭ ಜರುಗಲಿದ್ದು, ಕೂಡಲದ ಗುರುನಂಜೇಶ್ವರ ಮಠದ ಗುರುಮಹೇಶ್ವರ ಶಿವಾಚಾರ್ಯರು ಸಾನ್ನಿಧ್ಯ ವಹಿಸುವರು. ಮಾಜಿ ಸಚಿವ ಮನೋಹರ ತಹಶೀಲ್ದಾರ ಉದ್ಘಾಟಿಸುವರು. ಡಾ. ಹನುಮಂತ ಮಳಲಿ, ಪುಷ್ಪಾ ಕಡಿವಾಳ, ಜಿ. ಚಂದ್ರಶೇಖರಯ್ಯ, ವಿನಾಯಕ ದೈವಜ್ಞ, ಮಹೇಶ ಹೆಬ್ಬಳ್ಳಿ ಪಾಲ್ಗೊಳ್ಳುವರು. ಬಿಗ್‌ಬಾಸ್ ಖ್ಯಾತಿಯ ಸುಮಾ ರಾಜಕುಮಾರ, ಮೈಲಾರಿ ಬಾರ್ಕಿ, ಚೈತ್ರಾ ಬಾರಕೇರ, ನಿಧಿ ಅಡಿಗ ಅವರಿಂದ ಕಲಾಪ್ರದರ್ಶನ ಇದೆ ಎಂದು ಬ್ಯಾಂಕಿನ ವ್ಯವಸ್ಥಾಪಕ ಎಸ್.ಎಸ್. ಬಮ್ಮಿಗಟ್ಟಿ ತಿಳಿಸಿದ್ದಾರೆ.

ಸೆ. 10ರಂದು ಬೆಳಗ್ಗೆ 11ಕ್ಕೆ ನಡೆಯಲಿರುವ ಬ್ಯಾಂಕಿನ ವಾರ್ಷಿಕ ಮಹಾಸಭೆಯಲ್ಲಿ ಮುತ್ತಿನಕಂತಿಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಶಿವಬಸವ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಬ್ಯಾಂಕ್ ಅಧ್ಯಕ್ಷ ಷಣ್ಮುಖಪ್ಪ ಮುಚ್ಚಂಡಿ ಅಧ್ಯಕ್ಷತೆ ವಹಿಸುವರು. ಸಿದ್ರಾಮಪ್ಪ ವಿರುಪಣ್ಣನವರ, ಆರ್ಥಿಕ ತಜ್ಞ ಕಾರ್ತಿಕ ಶೆಟ್ಟಿ, ವಿ.ಎಸ್. ದಾಡ್ಮಿ ಪಾಲ್ಗೊಳ್ಳುವರು. ವಿದ್ಯಾರ್ಥಿಗಳು ಮತ್ತು ಉತ್ತಮ ಗ್ರಾಹಕರಿಗೆ ಸನ್ಮಾನ ನಡೆಯಲಿದೆ. ಮಧ್ಯಾಹ್ನ 3ಕ್ಕೆ ನಮ್ಮ ಊರು, ನಮ್ಮ ಬ್ಯಾಂಕ್ ವಿಚಾರಗೋಷ್ಠಿಯಲ್ಲಿ ಪತ್ರಕರ್ತ ಕಿರಣ ಹೂಗಾರ ಉಪನ್ಯಾಸ ನೀಡುವರು. ಬ್ಯಾಂಕ್ ಮಾಜಿ ಅಧ್ಯಕ್ಷ ನಾಗರಾಜ ಪಾವಲಿ, ನಾಗರಾಜ ಅಡಿಗ, ಲತಾ ದೇಶಮುಖ ಅವರಿಗೆ ಸನ್ಮಾನ ಜರುಗಲಿದೆ. ಸಂಜೆ 6ಕ್ಕೆ ಸಮಾರೋಪ ಸಮಾರಂಭದಲ್ಲಿ ಹಾವೇರಿ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ, ಪಂಚಾಕ್ಷರಿ ಎಚ್.ಬಿ. ಪಾಲ್ಗೊಳ್ಳುವರು. ಗೀತಾ ಬೆಲ್ಲದ ಅವರನ್ನು ಸನ್ಮಾನಿಸಲಾಗುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net