ರಾಷ್ಟ್ರವಾದದ ಪ್ರಖರ ದನಿ: ಇಂದು-ನಾಳೆ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಅಧಿವೇಶನ

ABSP
Published on

ಸಾಹಿತ್ಯಕ್ಷೇತ್ರದಲ್ಲಿ ಭಾರತೀಯ ದೃಷ್ಟಿಯನ್ನು ಪುನಃಸ್ಥಾಪಿಸುವ, ದೇಶದ ಬೌದ್ಧಿಕ ವಾತಾವರಣವನ್ನು ಸ್ವಸ್ಥಗೊಳಿಸುವ ಮತ್ತು ಸಮಸ್ತ ಭಾರತೀಯ ಭಾಷೆಗಳ ನಡುವೆ ಸಾಹೋದರ್ಯಭಾವವನ್ನು ಜಾಗೃತಗೊಳಿಸುವ ಕಾರ್ಯೋದ್ದೇಶದಿಂದ ಅಖಿಲ ಭಾರತೀಯ ಸಾಹಿತ್ಯ ಪರಿಷದ್ 1966ರ ಅಕ್ಟೋಬರ್ 27ರಂದು ಅಸ್ತಿತ್ವಕ್ಕೆ ಬಂತು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹ ಮಾಧವ ಮುಳೇ ಅವರ ಪ್ರೇರಣೆಯಿಂದ, ಸಾಹಿತಿ ರತ್ನಸಿಂಹ ಶಾಂಡಿಲ್ಯ ನೇತೃತ್ವದಲ್ಲಿ ಭಾರತೀಯತೆಯನ್ನು ಉಸಿರಾಡುವ ಕೆಲವು ಸಾಹಿತಿಗಳು ಸೇರಿ ಅಂದು ದೆಹಲಿಯಲ್ಲಿ ಈ ಸಂಘಟನೆಯನ್ನು ಹುಟ್ಟುಹಾಕಿದರು.

1975ರಲ್ಲಿ ದೇಶದ ಮೇಲೆ ತುರ್ತಸ್ಥಿತಿ ಹೇರಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಮೊಟಕುಗೊಳಿಸಿದಾಗ ‘ಅಭಾಸಾಪ’ದ ಕಾರ್ಯಕರ್ತರೂ ತತ್ಸಂಬಂಧೀ ಸಾಹಿತಿಗಳೂ ಒಟ್ಟಾಗಿ ಅದರ ವಿರುದ್ಧ ಸತ್ಯಾಗ್ರಹದಲ್ಲಿ ಪಾಲ್ಗೊಂಡರು. ಜೈಲುವಾಸವನ್ನೂ ಅನುಭವಿಸಿದರು. ನಿಷೇಧದಿಂದಾಗಿ ಆಗ ಸ್ಥಗಿತಗೊಂಡಿದ್ದ ಅಭಾಸಾಪದ ಕಾರ್ಯ ಮುಂದಿನ ದಿನಗಳಲ್ಲಿ ದೇಶದಾದ್ಯಂತ ವಿಸ್ತರಿಸುತ್ತ ಹೋಯಿತು. ದೇಶದಲ್ಲಿ ‘ಸಾಹಿತ್ಯಕ ಸ್ವರಾಜ್ಯ’ವನ್ನು ಗಳಿಸುವ ಉದ್ದೇಶದ ಅದರ ಕಾರ್ಯ 2015ರಿಂದೀಚೆಗೆ ಕರ್ನಾಟಕದಲ್ಲಿಯೂ ವೇಗಪಡೆಯುತ್ತಿದೆ.

ಕರ್ನಾಟಕದಲ್ಲಿ ಮೊದಲ ರಾಜ್ಯಮಟ್ಟದ ಸಮ್ಮೇಳನ 2016ರಲ್ಲಿ ಉತ್ತರ ಕನ್ನಡದಲ್ಲಿ ನಡೆಯಿತು. ಭಾರತೀಯ ಸಂಸ್ಕೃತಿಯ ಮೂಲಸ್ತಂಭವಾದ ಕುಟುಂಬ ಇಂದು ತೀವ್ರ ಒತ್ತಡಕ್ಕೆ ಒಳಗಾಗಿದೆ. ಇದರ ಆಯಾಮಗಳನ್ನು ಅರಿಯಲು ‘ಸಾಹಿತ್ಯದಲ್ಲಿ ಕೌಟುಂಬಿಕ ಮೌಲ್ಯಗಳು’ ಎಂಬ ಸಾಮಯಿಕ ವಿಚಾರ ಸಮ್ಮೇಳನದ ವಿಷಯವಾಗಿತ್ತು. ಹಳ್ಳಿಗಳು ಸರಳ-ಸುಂದರ ಭಾರತೀಯ ಬದುಕಿನ ಮುಖ್ಯ ನೆಲೆಯಾಗಿರುವುದರಿಂದ ಶಿರಸಿ ಸಮೀಪದ ಯಡಳ್ಳಿಯಲ್ಲಿ ಸಮ್ಮೇಳನ ಆಯೋಜಿಸಲಾಗಿತ್ತು. ಸಾವಿರಕ್ಕೂ ಹೆಚ್ಚಿನ ಪ್ರತಿನಿಧಿಗಳು ಸಮ್ಮೇಳನದ ಅರ್ಥವಂತಿಕೆ ಹೆಚ್ಚಿಸಿದರು.

ಬಹುಭಾಷೆಗಳ ತವರಾದ ಭಾರತದಲ್ಲಿ ಕವಿಗೋಷ್ಠಿ ಎಂದರೆ ಅನೇಕ ಕವಿಗಳು- ಬೇರೆ ಬೇರೆ ನಾಡುನುಡಿಗಳಿಂದ ಬಂದವರೊಡನೆ ಸಂವಾದ, ಸಂಭಾಷಣೆ, ವಿಚಾರ ವಿನಿಮಯ, ಕಾವ್ಯಶ್ರವಣ ಆಗಬೇಕು. ಶಿವಮೊಗ್ಗದ ತೀರ್ಥಹಳ್ಳಿ ಬಳಿಯ ಹಾದಿಗಲ್ಲು ಇಂಥದೊಂದು ಬಹುಭಾಷಾ ಕವಿಗೋಷ್ಠಿಗೆ ಅಧಿಷ್ಠಾನವಾಯಿತು, ದಕ್ಷಿಣ ಭಾರತ ವ್ಯಾಪ್ತಿಯ ಈ ಗೋಷ್ಠಿಯಲ್ಲಿ ದಕ್ಷಿಣದ ಎಲ್ಲ ಭಾಷಾಕವಿಗಳೂ ಭಾಗವಹಿಸಿದ್ದರು.

ಕರ್ನಾಟಕ ಕಂಡ ಅಪರೂಪದ ವಿದ್ವಾಂಸರುಗಳಲ್ಲಿ ರಂಗನಾಥ ಶರ್ಮರು ಒಬ್ಬರು. ಆದಿಕಾವ್ಯವಾದ ಶ್ರೀಮದ್ರಾಮಾಯಣವನ್ನು 20ನೇ ಶತಮಾನದ ಮಧ್ಯಭಾಗದಲ್ಲಿ ಸಂಪೂರ್ಣವಾಗಿ ಕನ್ನಡಕ್ಕೆ ತಂದು ವಾಲ್ಮೀಕಿ ಮಹರ್ಷಿಯನ್ನು ಕನ್ನಡಿಗರ ಮನಮಂದಿರಗಳಲ್ಲಿ ಪ್ರತಿಷ್ಠಾಪಿಸಿದವರು ಅವರು. ಸಂಸ್ಕೃತ, ಕನ್ನಡ ಭಾಷೆಗಳು, ವ್ಯಾಕರಣ, ವೇದಾಂತಶಾಸ್ತ್ರಗಳು, ಕಾವ್ಯ, ನಾಟಕಕ್ಷೇತ್ರಗಳಿಗೆ ಉತ್ಕೃಷ್ಟವಾದ ಕೊಡುಗೆಗಳನ್ನಿತ್ತ ದಿವಂಗತ ರಂಗನಾಥ ಶರ್ಮರ ಜನ್ಮಶತಮಾನೋತ್ಸವವನ್ನು 2017ರಲ್ಲಿ ಅ.ಭಾ.ಸಾ.ಪ. ಕರ್ನಾಟಕ ಆಚರಿಸಿತು. 2018ರಲ್ಲಿ ‘ಸಾಹಿತ್ಯದಲ್ಲಿ ಭಾರತೀಯತೆ’ ವಿಷಯ ಕುರಿತು 2ನೇ ರಾಜ್ಯ ಸಮ್ಮೇಳನ ಮೈಸೂರಿನಲ್ಲಿ ನಡೆಯಿತು. ಎರಡೂವರೆ ಸಾವಿರಕ್ಕೂ ಹೆಚ್ಚಿನ ಜನರು ಭಾಗವಹಿಸಿದರು.

ಭಾರತೀಯತೆಯನ್ನು ಎಲ್ಲೆಡೆ ಪಸರಿಸಲು ಸಂಘಟನೆಯ ಜಾಲ ಹಬ್ಬುತ್ತಿದೆ. ಸದ್ಯ, 24 ಜಿಲ್ಲೆಗಳಲ್ಲಿ 60ಕ್ಕೂ ಹೆಚ್ಚು ತಾಲೂಕು ಹಾಗೂ ಹೋಬಳಿಗಳಲ್ಲಿ ಚಟುವಟಿಕೆ ನಡೆಯುತ್ತಿದೆ. ಸಮರ್ಥವಾದ ಬೌದ್ಧಿಕ ತಂಡವನ್ನೂ ಕಟ್ಟುವುದು ಅಭಾಸಾಪ ಯೋಜನೆಯಾಗಿದೆ. ಹಾಗೆಯೇ ಸಾಮರ್ಥ್ಯ ಇರುವವರನ್ನು ಗುರುತಿಸಿ ಪುರಸ್ಕರಿಸುವ ಪರಿಪಾಠವನ್ನೂ ಆರಂಭಿಸಲಾಗಿದೆ.

ರಾಜ್ಯ ಅಭಾಸಾಪ ಕಾರ್ಯ ಚಟುವಟಿಕೆ

  • ಮೂರು ವರ್ಷಗಳಿಗೊಮ್ಮೆ ರಾಜ್ಯ ಅಧಿವೇಶನ.
  • ಯುವ ಸಾಹಿತಿಗಳ ಚಿಂತನಗೋಷ್ಠಿ.
  • ಕಥೆ, ಕವನ, ನಾಟಕ ಇತ್ಯಾದಿ ಸಾಹಿತ್ಯ ಪ್ರಕಾರಗಳಲ್ಲಿ ಕಮ್ಮಟ ಆಯೋಜನೆ.
  • ವ್ಯಾಸಜಯಂತಿ, ವಾಲ್ಮೀಕಿಜಯಂತಿ ಮತ್ತು ಯುಗಾದಿ ಹೀಗೆ ವರ್ಷದಲ್ಲಿ ಮೂರು ಬಾರಿ ಜಿಲ್ಲಾ ಹಾಗೂ ತಾಲೂಕು ಸಮಿತಿಗಳು ನಡೆಸುವ ವಿವಿಧ ಸಾಹಿತ್ಯಕ ಕಾರ್ಯಕ್ರಮಗಳು.
  • ವಾಲ್ಮೀಕಿ ಜಯಂತಿ ಸಂದರ್ಭದಲ್ಲಿ ಸಾಧಕಸಾಹಿತಿ ಮತ್ತು ಭರವಸೆಯ ಯುವಸಾಹಿತಿಗಳಿಗೆ ಆದಿಕವಿ ಪುರಸ್ಕಾರ ಮತ್ತು ವಾಗ್ದೇವಿ ಪ್ರಶಸ್ತಿ ಪ್ರದಾನ.
  • ಆಯ್ದ ಸಾಹಿತ್ಯಕೃತಿಗಳ ಪ್ರಕಾಶನ.

ಉಜಿರೆಯಲ್ಲಿ ಸಮ್ಮೇಳನ: ಅಖಿಲ ಭಾರತೀಯ ಸಾಹಿತ್ಯ ಪರಿಷದ್​ನ ರಾಜ್ಯಮಟ್ಟದ 3ನೇ ಅಧಿವೇಶನವು ‘ನುಡಿ ಸಾಮ್ರಾಜ್ಯದಲ್ಲಿ ಸ್ವರಾಜ್ಯ’ ಪರಿಕಲ್ಪನೆಯಡಿ ಮಾರ್ಚ್ 19 ಮತ್ತು 20 ರಂದು ಉಜಿರೆಯ ಕೃಷ್ಣಾನುಗ್ರಹ ಸಭಾ ಭವನದಲ್ಲಿ ನಡೆಯಲಿದೆ. ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಸಮ್ಮೇಳನ ವನ್ನು ಉದ್ಘಾಟಿಸಲಿದ್ದು, ಸಾಹಿತಿ ನಾ.ಮೊಗಸಾಲೆ ಅಧ್ಯಕ್ಷತೆ ವಹಿಸಲಿದ್ದಾರೆ. ಭಾನುವಾರ ಮಧ್ಯಾಹ್ನ ಸಮಾರೋಪ ಸಮಾರಂಭ ನಡೆಯಲಿದ್ದು, ಸಾಹಿತಿಗಳಾದ ದಿವಾಕರ ಹೆಗಡೆ, ಪ್ರೇಮಶೇಖರ ಪಾಲ್ಗೊಳ್ಳಲಿದ್ದಾರೆ. ಎರಡು ದಿನಗಳ ಕಾಲ ವಿವಿಧ ಗೋಷ್ಠಿಗಳು, ಕವಿ ಸಮ್ಮೇಳನ, ಪುಸ್ತಕ ಪ್ರದರ್ಶನ, ಮಾರಾಟ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net