'ನಮ್ಮ ಕಾಲೇಜ್​ ಕೆಡವಿದ್ರೆ ಕುತುಬ್ ಮಿನಾರ್​ಗಿಂತ ಎತ್ತರದ ಕಟ್ಟಡ ನಿರ್ಮಿಸುತ್ತೇವೆ': ಓವೈಸಿ ಕಾಮೆಂಟ್​ ವೈರಲ್​!

owaisi
Published on

ಹೈದರಾಬಾದ್: ಟಾಲಿವುಡ್​ ಹಿರಿಯ ನಟ ನಾಗಾರ್ಜುನ ಅವರಿಗೆ ಸೇರಿದ ಕನ್ವೆನ್ಷನ್​ ಹಾಲ್​ ನೆಲಸಮ ಮಾಡಿದ ನಂತರ ಹೈದರಾಬಾದ್​ನಲ್ಲಿ ಮತ್ತೆ ಇನ್ಯಾವ ಕಟ್ಟಡ ಧರೆಗೆ ಉರುಳುತ್ತದೆಯೋ ಎಂಬ ಆತಂಕ ಹಲವರಲ್ಲಿದೆ. ಇದೆ ನಡುವೆ ಬಂಡ್ಲಗುಡದಲ್ಲಿನ ಫಾತಿಮಾ ಓವೈಸಿ ಕಾಲೇಜನ್ನು ಹೈಡ್ರಾ ಕೆಡವಲಿದೆ ಎಂಬ ಸುದ್ದಿಗೆ ಮಜ್ಲಿಸ್ ಶಾಸಕ ಅಕ್ಬರುದ್ದೀನ್ ಓವೈಸಿ ಪ್ರತಿಕ್ರಿಯಿಸಿದ್ದು, ಅದನ್ನು ಮಾತ್ರ ಕೆಡವಬೇಡಿ ಎಂದು ತೆಲಂಗಾಣ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ:

ಕೆರೆ ಒತ್ತುವರಿ ಮಾಡಿ ಓವೈಸಿ ಬ್ರದರ್ಸ್ ಕಾಲೇಜನ್ನು ನಿರ್ಮಿಸಿದ್ದಾರೆ ಎಂದು ಹೈಡ್ರಾಗೆ ಹಲವು ದೂರುಗಳು ಬಂದಿವೆ. ಹೀಗಾಗಿ ಅಕ್ಬರುದ್ದೀನ್ ಹೇಳಿಕೆ ನೀಡಿದ್ದು, ಬೇಕಿದ್ದರೆ ನನ್ನ ಮೇಲೆ ಗುಂಡಿನ ಮಳೆಗರೆಯಿರಿ. ಬಡವರಿಗೆ ಉಚಿತ ಶಿಕ್ಷಣ ನೀಡಲು ಆ ಕಾಲೇಜನ್ನು ಕಟ್ಟಿಸಿದ್ದೇನೆ. ಕೆಲವರು ಉದ್ದೇಶಪೂರ್ವಕವಾಗಿ ದೂರುಗಳನ್ನು ನೀಡಿದ್ದಾರೆ. ಹಾಗಾಗಿ ಅದನ್ನು ನೆಲಸಮ ಮಾಡಬೇಡಿ ಎಂದು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

ಹೈಡ್ರಾ ಕಾರ್ಯಾಚರಣೆ ಬಳಿಕ ಹೈದರಾಬಾದ್ ನಲ್ಲಿ ನಡೆದಿರುವ ಒತ್ತುವರಿ ಬಗ್ಗೆ ವ್ಯಾಪಕ ದೂರುಗಳು ಬರುತ್ತಿವೆ. ವಿರೋಧ ಪಕ್ಷದ ನಾಯಕರೂ ಇದೇ ವಿಷಯವನ್ನು ಪ್ರಸ್ತಾಪಿಸುತ್ತಿದ್ದಾರೆ. ಧೈರ್ಯವಿದ್ದರೆ ಆ ಕಟ್ಟಡಗಳನ್ನು ನೆಲಸಮ ಮಾಡಿ ಎಂದು ಸಿಎಂ ರೇವಂತ್‌ ಅವರಿಗೆ ಬಹಿರಂಗ ಸವಾಲು ಹಾಕುತ್ತಿದ್ದಾರೆ. ಬಿಜೆಎಲ್‌ಪಿ ಮುಖಂಡ ಮಹೇಶ್ವರ ರೆಡ್ಡಿ ಹಳೆಪೇಟೆಯಲ್ಲಿ ಕೆರೆ ಒತ್ತುವರಿ ಮಾಡಲಾಗಿದೆ. ಆ ಒತ್ತುವರಿ ತೆರವು ಮಾಡುವ ತಾಕತ್ತು ಸಿಎಂ ರೇವಂತ್ ರೆಡ್ಡಿಗೆ ಇದೆಯೇ ಎಂದು ಪ್ರಶ್ನಿಸಿದ್ದಾರೆ. ಕೆರೆಯ ಒತ್ತುವರಿ ಮಾಡಿ ಓವೈಸಿ ಕಾಲೇಜು ನಿರ್ಮಿಸಿದ್ದಾರೆ ಅದನ್ನು ಕೆಡವುತ್ತೀರಾ ಎಂದು ಪ್ರಶ್ನಿಸಿದ್ದಾರೆ.

ಕಾಂಗ್ರೆಸ್ ಪಕ್ಷವು ಮಜ್ಲಿಸ್ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿದೆ. ಹಾಗಾಗಿ ಓವೈಸಿ ಕಾಲೇಜು ನೆಲಸಮ ಮಾಡುವುದಿಲ್ಲ ಎಂದು ಮಹೇಶ್ವರ ರೆಡ್ಡಿ ಸವಾಲು ಹಾಕಿದ್ದಾರೆ.

ಹೀಗಾಗಿಯೇ ಅಕ್ಬರುದ್ದೀನ್ ಓವೈಸಿ ಕೂಡಲೇ ಪ್ರತಿಕ್ರಿಯಿಸಿ ಆ ಕಾಲೇಜು ಕೆಡವಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಅಷ್ಟೇ ಅಲ್ಲ, ನಮ್ಮ ಶಿಕ್ಷಣ ಸಂಸ್ಥೆಗಳನ್ನು ನಾಶ ಮಾಡಲು ಯತ್ನಿಸಿದರೆ ಕುತುಬ್ ಮಿನಾರ್ ಗಿಂತಲೂ ಎತ್ತರದ ಕಟ್ಟಡಗಳನ್ನು ನಿರ್ಮಿಸುತ್ತೇವೆ. 40 ಸಾವಿರ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುತ್ತಿದ್ದೇವೆ. ನೀವು ನನ್ನ ವಿರುದ್ಧ ಇದ್ದರೆ ನನ್ನನ್ನು ಶೂಟ್ ಮಾಡಿ, ನನ್ನ ಮೇಲೆ ದಾಳಿ ಮಾಡಿ. ನಾನು ಮಾಡುತ್ತಿರುವ ಒಳ್ಳೆಯ ಕಾರ್ಯಕ್ರಮಗಳನ್ನು ನಿಲ್ಲಿಸಬೇಡಿ ಎಂದು ಓವೈಸಿ ಎಚ್ಚರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net