ಕರೊನಾ ಸೋಂಕು ತೊಲಗಿಸಲು 'ಅಜ್ಜಿ ಹಬ್ಬ'

ajji habbaa
Published on

ದೊಡ್ಡಬಳ್ಳಾಪುರ: ಇಡೀ ಜಗತ್ತಿಗೆ ಕಂಟಕವಾಗಿ ಪರಿಣಮಿಸಿರುವ ಮಹಾಮಾರಿ ಕೋವಿಡ್​ ಸೋಂಕಿನ ನಿರ್ನಾಮಕ್ಕಾಗಿ ಹಲವರು ದೇವರ ಮೊರೆ ಹೋಗಿದ್ದಾರೆ. ಎಲ್ಲೆಡೆ ಹೋಮ-ಹವನ, ವ್ರತ- ಪೂಜೆಯೂ ನೆರವೇರಿದೆ. ಇದೀಗ ಆ ಸಾಲಿಗೆ 'ಅಜ್ಜಿ ಹಬ್ಬ'ವೂ ಸೇರಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ತಾಲೂಕಿನ ಸಾಸಲು ಹೋಬಳಿಯ ಮಲ್ಲಸಂದ್ರ ಗ್ರಾಮಸ್ಥರು ಕರೊನಾ ನಿವಾರಣೆಗಾಗಿ ಶುಕ್ರವಾರ 'ಅಜ್ಜಿ ಹಬ್ಬ' ಆಚರಿಸಿದರು.

ಮಲ್ಲಸಂದ್ರ ಗ್ರಾಮದಲ್ಲಿ ವಾರದ ಮೊದಲೇ ತಮಟೆ ಸಾರುವ ಮೂಲಕ ಹಬ್ಬದ ದಿನ ತಿಳಿಸಿ ವಿಶೇಷ ತಯಾರಿ ಮಾಡಿಕೊಳ್ಳಲಾಗಿತ್ತು. ಹಬ್ಬದ ದಿನವಾದ ಶುಕ್ರವಾರ ಗ್ರಾಮದ ಪೂರ್ವ ದಿಕ್ಕಿನಲ್ಲಿರುವ ಬೇವಿನ ಮರದಡಿ ಪ್ರತಿ ಮನೆಯಿಂದ ಅಡಕೆ ಎಲೆಯಲ್ಲಿ ದೀಪ, ಬಳೆ, ಬಂಗಾರ, ಅರಿಶಿಣ, ಕುಂಕುಮ ಇಟ್ಟು, ಹೋಳಿಗೆ, ಮೊಸರನ್ನ ಎಡೆ ಹಾಕಿ ಮರಕ್ಕೆ ಪೂಜೆ ಸಲ್ಲಿಸಿ, ಅದನ್ನು ಅಲ್ಲೇ ಬಿಟ್ಟು ಬರುವ ವಿಶೇಷ ಸಂಪ್ರದಾಯದ ಮೂಲಕ ಅಜ್ಜಿ ಹಬ್ಬ ಆಚರಣೆ ಮಾಡಲಾಯಿತು. ಊರೊಳಗೆ ಕರೊನಾ ಕಾಣಿಸಿಕೊಳ್ಳಬಾರದು, ದೇಶವು ಸೋಂಕಿನಿಂದ ಮುಕ್ತವಾಗಬೇಕು ಎಂದು ಗ್ರಾಮಸ್ಥರು ದೇವರಲ್ಲಿ ಬೇಡಿಕೊಂಡರು.

ನಮ್ಮ ಪೂರ್ವಜರ ಕಾಲದಿಂದ ಗ್ರಾಮದಲ್ಲಿ ರೋಗಗಳು ಬಾರದಂತೆ ಅಜ್ಜಿಹಬ್ಬ ಆಚರಣೆ ಮಾಡಲಾಗುತ್ತಿದೆ. ಇದರಿಂದ ಗ್ರಾಮದ ಜನರಿಗೆ ಒಳ್ಳೆಯದಾಗಿದೆ ಎಂದು ಮಲಸಂದ್ರ ನಿವಾಸಿ ಎಂ.ಜಿ ಕೃಷ್ಣಪ್ಪ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net