ಅಜಿತ್ ಕುಮಾರ್ ರೈಗೆ ಷರತ್ತು ಬದ್ಧ ಜಾಮೀನು ಮಂಜೂರು

Published on


ಬೆಂಗಳೂರು: ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ ಪ್ರಕರಣದ ಆರೋಪಿಯಾಗಿ ನ್ಯಾಯಾಂಗ ಬಂಧನಕ್ಕೊಳಗಾಗಿದ್ದ ಕೆ.ಆರ್.ಪುರ ತಾಲ್ಲೂಕಿನ ತಹಶೀಲ್ದಾರ್ ಆಗಿದ್ದ ಅಜಿತ್ ಕುಮಾರ್ ರೈ ಅವರಿಗೆ ಲೋಕಾಯುಕ್ತ ವಿಶೇಷ ನ್ಯಾಯಾಲಯ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ.

ಈ ಸಂಬಂಧ ಜಾಮೀನು ಕೋರಿ ಅಜಿತ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಧೀಶ ಕೆ.ಎಂ. ರಾಧಾಕೃಷ್ಣ ಸೋಮವಾರ ವಿಚಾರಣೆ ನಡೆಸಿದರು.

ಹಿರಿಯ ವಕೀಲ ಎಂ.ಎಸ್. ಶ್ಯಾಮಸುಂದರ್ ಅಜಿತ್ ರೈ ಪರ ವಾದ ಮಂಡಿಸಿ, ಅರ್ಜಿದಾರರ ಪತ್ನಿ ತೀವ್ರ ಅನಾರೋಗ್ಯಕ್ಕೆ ತುತ್ತಾಗಿರುವ ಕಾರಣ ಅವರ ಚಿಕಿತ್ಸೆಯ ದೃಷ್ಟಿಯಿಂದ ಜಾಮೀನು ಮಂಜೂರು ಮಾಡಬೇಕು ಎಂದು ಕೋರಿದರು.

ಕೆಲ ಕಾಲ ವಾದ ಆಲಿಸಿದ ನ್ಯಾಯಾಧೀಶರು ಮನವಿ ಪುರಸ್ಕರಿಸಿ, ಆರೋಪಿಯು ೫ ಲಕ್ಷ ರೂ.ಮೊತ್ತದ ಬಾಂಡ್ ಹಾಗೂ ಅಷ್ಟೇ ಮೊತ್ತಕ್ಕೆ ಇಬ್ಬರ ಭದ್ರತೆ ನೀಡಬೇಕು. ತನಿಖಾಧಿಕಾರಿಗೆ ಸಹಕರಿಸಬೇಕು ಎಂಬ ಷರತ್ತುಗಳೊಂದಿಗೆ ಜಾಮೀನು ಮಂಜೂರು ಮಾಡಿ ಆದೇಶಿಸಿದರು.

ಲೋಕಾಯುಕ್ತ ಪೊಲೀಸರು ಜೂ. ೨೮ರಂದು ಅಜಿತ್ ರೈ ಮನೆ ಮೇಲೆ ದಾಳಿ ಮಾಡಿ ಶೋಧ ಕಾರ್ಯ ನಡೆಸಿದ್ದರು. ವಿಚಾರಣೆಗೆ ಸಹಕರಿಸದ ಆರೋಪದ ಅಡಿಯಲ್ಲಿ ಜೂ.೨೯ರಂದು ಅವರನ್ನು ಬಂಧಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net