ಅಜಿತ್ ಪವಾರ್ ಬಣಕ್ಕೆ ಮೇಲುಗೈ; ಶರದ್ ಪವಾರ್ ಕೈ ತಪ್ಪಿದ ಎನ್​ಸಿಪಿ

Sharad Ajit
Published on

ಮುಂಬೈ: ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್​ಸಿಪಿ) ಅಜಿತ್ ಪವಾರ್ ಬಣವೇ ನೈಜ ಎನ್​ಸಿಪಿ ಎಂದು ಮಹಾರಾಷ್ಟ್ರ ವಿಧಾನಸಭೆ ಸ್ಪೀಕರ್ ರಾಹುಲ್ ನಾರ್ವೆಕರ್ ಗುರುವಾರ ತೀರ್ಪು ನೀಡಿದ್ದಾರೆ.

ಲೋಕಸಭೆ ಚುನಾವಣೆಗೆ ಇನ್ನು ಕೆಲವೇ ವಾರ ಬಾಕಿಯಿರುವ ಸಂದರ್ಭದಲ್ಲಿ, ಪಕ್ಷದ ಹೆಸರು ಮತ್ತು ಗಡಿಯಾರ ಚಿಹ್ನೆಯನ್ನು ಅಜಿತ್ ಬಣಕ್ಕೆ ನೀಡಿರುವುದು ತಮ್ಮದೇ ನಿಜವಾದ ಪಕ್ಷ ಎಂದು ವಾದಿಸಿದ್ದ ಮಾಜಿ ಮುಖ್ಯಮಂತ್ರಿ ಶರದ್ ಪವಾರ್​ರಿಗೆ ಭಾರಿ ಹಿನ್ನಡೆಯಾಗಿದೆ. ರಾಜ್ಯಸಭೆ ಚುನಾವಣೆಗೆ ಕೂಡ ಕೆಲವು ದಿನ ಮಾತ್ರ ಬಾಕಿಯಿದೆ. ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರೇ ‘ನೈಜ ಎನ್​ಸಿಪಿ’ಯ ನಾಯಕ ಎಂದು ಚುನಾವಣಾ ಆಯೋಗ ಕಳೆದ ವಾರ ನೀಡಿದ್ದ ತೀರ್ಪನ್ನು ನಾರ್ವೆಕರ್ ಉಲ್ಲೇಖಿಸಿದ್ದಾರೆ. ಕಳೆದ ವರ್ಷ ಜೂನ್​ನಲ್ಲಿ ಶರದ್ ಪವಾರ್ ವಿರುದ್ಧ ಬಂಡಾಯವೆದ್ದಿದ್ದ 41 ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿ ಸಲ್ಲಿಸ ಲಾಗಿದ್ದ ಅರ್ಜಿಗಳನ್ನು ಸ್ಪೀಕರ್ ತಿರಸ್ಕರಿಸಿದ್ದಾರೆ. 2023ರ ಬಂಡಾಯದಿಂದಾಗಿ ಪಕ್ಷ ವಿಭಜನೆಗೊಂಡು ನಿಯಂತ್ರಣಕ್ಕಾಗಿ ಉಭಯ ಬಣಗಳ ನಡುವೆ ಜಟಾಪಟಿ ಆರಂಭವಾಗಿತ್ತು.

ಹೊಸ ಹೆಸರು: ಕಳೆದ ವಾರ ಅಜಿತ್ ಪವಾರ್ ಪರವಾಗಿ ತೀರ್ಪು ನೀಡಿದ್ದ ಚುನಾವಣಾ ಆಯೋಗ, ಹೊಸ ಹೆಸರನ್ನು ಸೂಚಿಸುವಂತೆ ಶರದ್ ಪವಾರ್​ಗೆ ಕೆಲವೇ ಗಂಟೆಯ ಕಾಲಾವಕಾಶ ಒದಗಿಸಿತ್ತು. ಶರದ್ ಬಣಕ್ಕೆ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ ಶರದ್​ಚಂದ್ರ ಪವಾರ್ ಎಂದು ಹೊಸ ನಾಮಕರಣ ಮಾಡಲಾಗಿದೆ. ಉಭಯ ಬಣಗಳ ಸಂಖ್ಯಾಬಲದ ಮೇಲೆ ಆಯೋಗ ನಿರ್ಧರ ಕೈಗೊಂಡಿತ್ತು. ಸ್ಪೀಕರ್ ನಾರ್ವೆಕರ್ ಕೂಡ ಈ ಪ್ರಕರಣದಲ್ಲಿ ಅದನ್ನೇ ಅವಲಂಬಿಸಿ ತೀರ್ಪಿದ್ದಾರೆ.

ಶರದ್ ಪ್ರಯತ್ನ: ಬಂಡಾಯ, ವಿಭಜನೆ, ಪಕ್ಷಾಂತರ ಮುಂತಾದ ಗೊಂದಲಗಳು ಮುಗಿದ ಮೇಲೆ 41 ಶಾಸಕರು ಅಜಿತ್ ಜೊತೆ ಹೋಗಿದ್ದು 12 ಮಂದಿ ಮಾತ್ರವೇ ಶರದ್ ಜೊತೆ ಉಳಿದುಕೊಂಡರು. ಅದಾದ ಮೇಲೆ, 1999ರಲ್ಲಿ ತಾವೇ ಸ್ಥಾಪಿಸಿದ್ದ ಪಕ್ಷದ ಮೇಲೆ ನಿಯಂತ್ರಣ ಸಾಧಿಸಿ ಪುನಶ್ಚೇತನ ಗೊಳಿಸಲು ಶರದ್ ಪ್ರಯತ್ನವನ್ನು ನಡೆಸುತ್ತಲೇ ಇದ್ದರು.

ಸೋದರ ಮಾವನಿಗೆ ತಿರುಮಂತ್ರ: ಸೋದರ ಮಾವ ಶರದ್ ವಿರುದ್ಧ ಬಂಡಾಯವೆದ್ದಿದ್ದ ಅಜಿತ್ ಹೊಸ ಸರ್ಕಾರ ರಚಿಸಲಿಕ್ಕಾಗಿ ಅದೇ ರೀತಿ ಬಂಡಾಯದ ಬಾವುಟ ಹಾರಿಸಿದ್ದ ಶಿವಸೇನೆಯ ಬಣದೊಂದಿಗೆ ಕೈ ಜೋಡಿಸಿದ್ದರು. ‘ಪಕ್ಷದ ಇಚ್ಛೆಯನ್ನು’ ಪ್ರತಿನಿಧಿಸುವುದರಿಂದ ಅಜಿತ್ ಬಣ ಸೇರಿದ್ದ ಶಾಸಕರನ್ನು ಅನರ್ಹಗೊಳಿಸಲು ಸಾಧ್ಯವಿಲ್ಲ ಎಂದು ನಾರ್ವೆಕರ್ ತಮ್ಮ ತೀರ್ಪಿನಲ್ಲಿ ಹೇಳಿದ್ದಾರೆ. ವಿಭಜನೆಗೂ ಮುನ್ನ ಎನ್​ಸಿಪಿ 53 ಶಾಸಕರನ್ನು ಹೊಂದಿತ್ತು.

ಯಾವುದೇ ಶಾಸಕರ ಅನರ್ಹತೆ ಇಲ್ಲ: ‘ಅಜಿತ್ ಪವಾರ್ ನೇತೃತ್ವದ ಎನ್​ಸಿಪಿ ನಿಜವಾದ ರಾಜಕೀಯ ಪಕ್ಷವಾಗಿದೆ. ಅಜಿತ್ ಪವಾರ್ 41 ಶಾಸಕರೊಂದಿಗೆ ಶಾಸಕಾಂಗ ಬಹುಮತ ಹೊಂದಿದ್ದಾರೆ. ಇದು ವಿವಾದಾತೀತವಾಗಿದೆ’ ಎಂದಿರುವ ಸ್ಪೀಕರ್, ಅನರ್ಹತೆ ಕೋರಿರುವ ಎಲ್ಲ ಅರ್ಜಿಗಳನ್ನು ತಿರಸ್ಕರಿಸಿರುವುದಾಗಿ ತಿಳಿಸಿದ್ದಾರೆ.

ಪ್ರಜಾಪ್ರಭುತ್ವದ ಕೊಲೆ: ಆಯೋಗದ ತೀರ್ಪಿಗೆ ಆಕ್ರೋಶ ವ್ಯಕ್ತಪಡಿಸಿದ್ದ ಎನ್​ಸಿಪಿ, ಅದರ ಕ್ರಮಗಳು ‘ಪ್ರಜಾ ಪ್ರಭುತ್ವದ ಕೊಲೆ’ ಎಂದು ವರ್ಣಿಸಿತ್ತು. ‘ಎನ್​ಸಿಪಿ ಸ್ಥಾಪಿಸಿದ್ದು ಯಾರೆಂಬುದು ಇಡೀ ಜಗತ್ತಿಗೆ ಗೊತ್ತು. ಹಾಗಿದ್ದೂ ಚುನಾವಣಾ ಆಯೋಗ ಮಾಡಿದ್ದು ಪ್ರಜಾಪ್ರಭುತ್ವದ ಕೊಲೆ’ ಎಂದು ಮಾಜಿ ಸಚಿವ ಅನಿಲ್ ದೇಶಮುಖ್ ಪ್ರತಿಕ್ರಿಯಿಸಿದ್ದರು. ಆಯೋಗದ ಆದೇಶ ಪ್ರಶ್ನಿಸಿ ಶರದ್ ಬಣ ಸುಪ್ರೀಂ ಕೋರ್ಟ್ ಮೊರೆ ಹೋಗಿದೆ.

ಶಿವಸೇನೆ ಜಟಾಪಟಿ: ಎನ್​ಸಿಪಿ ಬಣ ಜಗಳವು ಶಿವಸೇನೆ ಬಣಗಳ ಕಾಳಗವನ್ನೇ ಹೋಲುತ್ತದೆ. ಶಿವಸೇನೆ ಯಲ್ಲಿ ಬಂಡಾಯವೆದ್ದು ಬಿಜೆಪಿ ಬೆಂಬಲದಿಂದ ಮುಖ್ಯಮಂತ್ರಿ ಯಾದ ಏಕನಾಥ ಶಿಂಧೆ ಬಣವನ್ನು ‘ನಿಜವಾದ ಶಿವಸೇನೆ’ ಎಂದು ತೀರ್ಪು ನೀಡಲಾಗಿತ್ತು.

ಸೇನೆ-ಬಿಜೆಪಿ ಸರ್ಕಾರಕ್ಕೆ ಬಲ: 2023ರ ಜೂನ್​ನಲ್ಲಿ ಎನ್​ಸಿಪಿಯಲ್ಲಿನ ಬಂಡಾಯ ದಿಂದಾಗಿ ಶಿವಸೇನೆ, ಎನ್​ಸಿಪಿ ಮತ್ತು ಕಾಂಗ್ರೆಸ್ ಒಳಗೊಂಡ ಮಹಾರಾಷ್ಟ್ರ ವಿಕಾಸ್ ಆಘಾಡಿ (ಎಂವಿಎ) ಮೈತ್ರಿಕೂಟಕ್ಕೆ ಆಘಾತವಾಗಿ 2022ರಲ್ಲಿ ರಚನೆಯಾಗಿದ್ದ ಶಿವಸೇನೆ-ಬಿಜೆಪಿ ಸರ್ಕಾರಕ್ಕೆ ಬಲ ಬಂದಿತ್ತು. ಅಜಿತ್​ಅವರನ್ನು ಎರಡನೇ ಡಿಸಿಎಂ ಆಗಿ ನೇಮಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net