

ಕೋಟಾ(ರಾಜಸ್ಥಾನ): ಮಕ್ಕಳ ಕೈಯಲ್ಲಿ ಮೊಬೈಲ್ ಕೊಡಬೇಡಿ, ಅನಿವಾರ್ಯವಾಗಿ ಕೊಡುವ ಸಂದರ್ಭ ಬಮದರೆ, ಅವರು ಅದರಲ್ಲಿ ಏನು ಮಾಡುತ್ತಾರೆ ಎಂಬ ಬಗ್ಗೆ ಒಂದು ಕಣ್ಣಿಡಿ ಎಂದು ಹಲವಾರು ಬಾರಿ ಪೊಲೀಸ್ ಇಲಾಖೆ ಮಾಧ್ಯಮಗಳು ಎಚ್ಚರಿಕೆ ಕೊಡುತ್ತಲೇ ಇವೆ. ಆದರೂ ಎಷ್ಟೋ ಪಾಲಕರು ತಮ್ಮ ಮಕ್ಕಳ ಕೈಯಲ್ಲಿ ಸ್ಮಾರ್ಟ್ಫೋನ್ ಕೊಟ್ಟು ಅವರತ್ತ ಗಮನ ಹರಿಸುವುದೇ ಇಲ್ಲ.
ಇಂಥ ಒಂದು ಎಡವಟ್ಟಿನಿಂದಾಗಿ 10ನೇ ಕ್ಲಾಸ್ ಬಾಲಕನೊಬ್ಬ ಮೊಬೈಲ್ ಆಟವಾಡುವ ಮೂಲಕ ತನ್ನ ಪ್ರಾಣ ಕಳೆದುಕೊಂಡಿದ್ದಾನೆ!
ಹೌದು. ಇದು ನಡೆದಿರುವುದು ರಾಜಸ್ಥಾನದ ಕೋಟಾದಲ್ಲಿ. ರಾತ್ರಿಯಿಡೀ ಮೊಬೈಲ್ನಲ್ಲಿ ಗೇಮ್ ಆಡುತ್ತಿದ್ದ ಬಾಲಕ ನಸುಕಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಅಷ್ಟಕ್ಕೂ ಈತ ಆಡುತ್ತಿದ್ದುದು ಡೆಡ್ಲಿ ಗೇಮ್ಸ್ ಎಂದೇ ಕುಖ್ಯಾತಿ ಹೊಂದಿರುವ ಪಬ್ಜಿ. ಇದಾಗಲೇ ಈ ಆಟವನ್ನು ಆಡಿ ವಿಶ್ವಾದ್ಯಂತ ಅದೆಷ್ಟೋ ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಗಳು ನಡೆದಿವೆ. ಇದೀಗ ಇದಕ್ಕೆ ಇನ್ನೊಬ್ಬ ಬಾಲಕ ಬಲಿಯಾಗಿದ್ದಾನೆ.
ಈತ ಮೂರು ದಿನಗಳ ಹಿಂದೆ ತನ್ನ ತಾಯಿಯ ಮೊಬೈಲ್ ಫೋನ್ನಲ್ಲಿ ಪಬ್ಜಿ ಗೇಮಿಂಗ್ ಅಪ್ಲಿಕೇಷನ್ ಡೌನ್ಲೋಡ್ ಮಾಡಿಕೊಂಡಿದ್ದಾನೆ ಮತ್ತು ಅಂದಿನಿಂದಲೂ ನಿರಂತರವಾಗಿ ಆಟವಾಡುತ್ತಿದ್ದ ಎಂದು ಈಗ ಪಾಲಕರು ಹೇಳಿದ್ದಾರೆ. ಈ ಆಟದಲ್ಲಿ ಮಕ್ಕಳಿಗೆ ಚಿತ್ರ ವಿಚಿತ್ರ ಎನ್ನುವ ಟಾರ್ಗೆಟ್ಗಳನ್ನು ಕೊಡಲಾಗುತ್ತದೆ. ಅದು ಮಕ್ಕಳಿಗೆ ಇಷ್ಟವಾಗುತ್ತಾ ಹೋಗುತ್ತದೆ. ಹೀಗೆ ನಿಧಾನವಾಗಿ ಚಿಕ್ಕಪುಟ್ಟ ಟಾರ್ಗೆಟ್ನಿಂದ ಶುರುವಾದ ಆಟ, ನಂತರ ದೊಡ್ಡ ಹಂತಕ್ಕೆ ಹೋಗಿ, ಸಾವಿನ ದಾರಿಯನ್ನು ತೋರಿಸುತ್ತದೆ. ಕೈ ಕೊಯ್ದುಕೊಳ್ಳುವಂತೆಯೋ, ಅತ್ಯಂತ ಎತ್ತರದ ಕಟ್ಟಡದಿಂದ ಕೆಳಕ್ಕೆ ಬೀಳುವಂತೆಯೋ, ಕುತ್ತಿಗೆಗೆ ನೇಣು ಬಿಗಿದುಕೊಳ್ಳುವಂತೆಯೋ... ಹೀಗೆ ಏನೇನೋ ಟಾರ್ಗೆಟ್ ನೀಡಲಾಗುತ್ತದೆ.
ತಾವೇನು ಮಾಡುತ್ತಿದ್ದೇವೆ ಎಂಬ ಅರಿವೇ ಇಲ್ಲದ ಮಕ್ಕಳು, ಆಟದ ಮೋಡಿಯೊಳಕ್ಕೆ ಸಿಲುಕಿ ಅದರಂತೆಯೇ ನಡೆದುಕೊಂಡು ಸಾಯುತ್ತಿದ್ದಾರೆ. ಇದೇ ರೀತಿ ಇದೀಗ ಕಿಟಕಿಯ ಗ್ರಿಲ್ನಿಂದ ನೇಣು ಬಿಗಿದುಕೊಂಡು ಬಾಲಕ ಸತ್ತಿದ್ದಾನೆ. ತಕ್ಷಣ ಆಸ್ಪತ್ರೆಗೆ ದಾಖಲಿಸಲಾದರೂ, ಅದಾಗಲೇ ಅವನ ಪ್ರಾಣ ಹೋಗಿತ್ತು ಎಂದಿದ್ದಾರೆ ವೈದ್ಯರು. ಬಾಲಕ ತನ್ನ ತಾಯಿ ಮತ್ತು ಸಹೋದರನೊಂದಿಗೆ ಕೋಟಾದ ಗಾಂಧಿ ಕಾಲೋನಿಯಲ್ಲಿ ವಾಸಿಸುತ್ತಿದ್ದರೆ, ಅವನ ತಂದೆ ಪ್ರಸ್ತುತ ಅರುಣಾಚಲ ಪ್ರದೇಶದಲ್ಲಿ ಸೇನಾಪಡೆಯ ಸದಸ್ಯರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. (ಏಜೆನ್ಸೀಸ್)