ಸಮಾಜಸೇವೆಯಿಂದ ಅಜರಾಮರ

teguru jadgish
ತೇಗೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕನ್ನಡಪರ ಹೋರಾಟಗಾರ ತೇಗೂರು ಜಗದೀಶ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಕೆಂಪನಹಳ್ಳಿ ಅಶೋಕ್, ದಿನೇಶ್‌ರಾಜ್, ಮನೋಜ್ ಶೆಟ್ಟಿ, ದಶರಥರಾಜ್ ಅರಸ್, ಪಂಚಾಕ್ಷರಿ, ಕುಮಾರ್ ಶೆಟ್ಟಿ ಇತರರಿದ್ದರು.
Published on

ಚಿಕ್ಕಮಗಳೂರು: ನಾಡಿನ ಶ್ರೇಯೋಭಿವೃದ್ಧಿಗಾಗಿ ಹಾಗೂ ನೊಂದ ಕುಟುಂಬಗಳಿಗೆ ಯಾವುದೇ ಫಲಾಪೇಕ್ಷೆ ಬಯಸದೆ ಆರ್ಥಿಕ ಹಾಗೂ ಸಾಮಾಜಿಕವಾಗಿ ಆಸರೆಯಾದವರು ತೇಗೂರು ಜಗದೀಶ್ ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಕೆಂಪನಹಳ್ಳಿ ಅಶೋಕ್ ಸ್ಮರಿಸಿದರು.
ತೇಗೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕನ್ನಡಪರ ಹೋರಾಟಗಾರ ತೇಗೂರು ಜಗದೀಶ್ ಅವರ ನುಡಿನಮನ ಕಾರ್ಯಕ್ರಮದಲ್ಲಿ ಜಗದೀಶ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ಸಮಾಜದಲ್ಲಿ ನಾಡು, ನುಡಿಗೆ ಧಕ್ಕೆಯುಂಟಾದ ವೇಳೆಯಲ್ಲಿ ಹೋರಾಟದ ಮೂಲಕ ಸಮಸ್ಯೆ ಪರಿಹಾರಕ್ಕೆ ಜಗದೀಶ್ ಸದಾ ಮುಂದಿರುತ್ತಿದ್ದರು. ಸಂಕಷ್ಟದಲ್ಲಿರುವವರಿಗೆ ವೈಯಕ್ತಿಕವಾಗಿ ಸ್ಪಂದಿಸುವ ಗುಣ ಬೆಳೆಸಿಕೊಂಡಿದ್ದರು ಎಂದು ಬಣ್ಣಿಸಿದರು.
ಸಂಘಟನೆಗಳ ಹೋರಾಟದಲ್ಲಿ ವೈಯಕ್ತಿಕ ಲಾಭ ನಷ್ಟದ ಆಶಯ ಹೊಂದದೆ ಗಟ್ಟಿತನದ ಹೋರಾಟ ರೂಪಿಸಿ ನ್ಯಾಯ ಒದಗಿಸಿದ್ದರು. ಸಂಘಟನೆಯಲ್ಲಿ ಜಗದೀಶ್ ಅವರು ಬಹಳಷ್ಟು ಆಸ್ತಿ ಹೊಂದಬಹುದಿತ್ತು. ಆದರೆ ಸಮಾಜದ ಒಳಿತಾಗಿ ಜೀವನವನ್ನೇ ಮುಡಿಪಾಗಿಟ್ಟು ಕನ್ನಡಾಂಬೆಯ ಸೇವೆಯಲ್ಲಿ ತೊಡಗಿಸಿಕೊಂಡವರು ಎಂದು ತಿಳಿಸಿದರು.
ಗ್ರಾಪಂ ಮಾಜಿ ಅಧ್ಯಕ್ಷ ದಿನೇಶ್‌ರಾಜ್ ಮಾತನಾಡಿ, ಸಮಾಜಕ್ಕೆ ಏನನ್ನಾದರೂ ಕೊಡುಗೆ ನೀಡಿದರೆ ಮಾತ್ರ ಅಜರಾಮರ. ಆ ಸಾಲಿನಲ್ಲಿ ತೇಗೂರು ಜಗದೀಶ್ ಸಾಕಷ್ಟು ಜನಪರ ಹೋರಾಟಗಳಲ್ಲಿ ತೊಡಗಿಸಿಕೊಂಡು ಮಾದರಿಯಾಗಿದ್ದಾರೆ ಎಂದರು.
ಜಗದೀಶ್ ಜಿಲ್ಲೆಯಲ್ಲಿ ಕರವೇ ಪ್ರಾರಂಭಗೊಂಡ ಬಳಿಕ ಹಲವಾರು ಹುದ್ದೆಗಳನ್ನು ಅಲಂಕರಿಸಿ ಮೂರನೇ ಬಾರಿಗೆ ಜಿಲ್ಲಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು. ಸುಮಾರು 15 ವರ್ಷಗಳ ಕಾಲ ಕರವೇ ಮೂಲಕ ಜಿಲ್ಲಾ ಹಾಗೂ ರಾಜ್ಯದುದ್ದಕ್ಕೂ ಸಂಚರಿಸಿ ಸಂಘಟನೆಯನ್ನು ಬಲಪಡಿಸಲು ಒತ್ತು ನೀಡಿದವರು ಎಂದು ಹೇಳಿದರು.
ತೇಗೂರು ಜಗದೀಶ್ ಪಾಲಕರಾದ ನಾಗರತ್ನಾ ಮತ್ತು ಚಿನ್ನರಾಜ್ ಅರಸ್ ಅವರನ್ನು ಕರವೇಯಿಂದ ಅಭಿನಂದಿಸಲಾಯಿತು. ಕರವೇ ತಾಲೂಕು ಅಧ್ಯಕ್ಷ ಮನೋಜ್ ಶೆಟ್ಟಿ, ಜಿಲ್ಲಾ ಉಪಾಧ್ಯಕ್ಷ ದಶರಥರಾಜ್ ಅರಸ್, ಕಾರ್ಯದರ್ಶಿ ಪಂಚಾಕ್ಷರಿ, ಯುವ ಘಟಕದ ಅಧ್ಯಕ್ಷ ಕುಮಾರ್ ಶೆಟ್ಟಿ, ಕಾಂಗ್ರೆಸ್ ಮುಖಂಡರಾದ ಪ್ರಕಾಶ್ ರೈ, ಪ್ರಸಾದ್ ಅಮೀನ್, ಶಾಲೆ ಮುಖ್ಯಶಿಕ್ಷಕ ದಿನೇಶ್, ಪ್ರಮುಖರಾದ ನಾಗಲತಾ, ಪೂರ್ಣಿಮಾ, ಮಂಜುಳಾಬಾಯಿ, ಅರುಣಾಕ್ಷಿ, ರುದ್ರೇಶ್, ದಿನೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net