

ಬೆಂಗಳೂರು: ಮಾಜಿ ಸಂಸದರೊಬ್ಬರ ಸಹೋದರಿಯ ಸೋಗಿನಲ್ಲಿ ಚಿನ್ನಾಭರಣ ಖರೀದಿಸಿ ಹಣ ಪಾವತಿಸದೆ ವಂಚಿಸಿದ ಪ್ರಕರಣದಲ್ಲಿ ಬಂಧಿತರಾಗಿರುವ ಐಶ್ವರ್ಯಗೌಡ ಮತ್ತು ಹರೀಶ್ ದಂಪತಿಯನ್ನು ಚಂದ್ರಾಲೇಔಟ್ ಠಾಣೆ ಪೊಲೀಸರು ಹೆಚ್ಚಿನ ವಿಚಾರಣೆಗಾಗಿ ಜ.೬ರವರೆಗೆ ಪೊಲೀಸ್ ಕಸ್ಟಡಿಗೆ ತೆಗೆದುಕೊಂಡಿದ್ದಾರೆ.
ವಾರಾಹಿ ವರ್ಲ್ಡ್ ಆ್ ಗೋಲ್ಡ್ ಅಂಗಡಿಯಲ್ಲಿ ಸುಮಾರು ೮.೪೧ ಕೋಟಿ ರೂ. ಮೌಲ್ಯದ ೧೪ ಕೆ.ಜಿ. ೬೬೦ ಗ್ರಾಂ ಚಿನ್ನಾಭರಣ ಖರೀದಿಸಿ ವಂಚಿಸಿದ ಪ್ರಕರಣದಲ್ಲಿ ಪೊಲೀಸರು ಡಿ.೨೮ ರಂದು ಐಶ್ವರ್ಯಗೌಡ ದಂಪತಿಯನ್ನು ಬಂಧಿಸಿದ್ದರು. ನಂತರ ನ್ಯಾಯಾಲಯವು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರಿಂದ ಪೊಲೀಸರು ಆ ಇಬ್ಬರನ್ನೂ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕಳುಹಿಸಿದ್ದರು. ಇದೀಗ ವಂಚನೆ ಪ್ರಕರಣ ಸಂಬಂಧ ಹೆಚ್ಚಿನ ವಿಚಾರಣೆ ನಡೆಸಬೇಕಿರುವ ಹಿನ್ನೆಲೆಯಲ್ಲಿ ಐಶ್ವರ್ಯಗೌಡ ದಂಪತಿಯನ್ನು ೧೪ ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡುವಂತೆ ತನಿಖಾಧಿಕಾರಿಗಳು ನಗರದ ೪ನೇ ಎಸಿಎಂಎಂ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯವು ಐಶ್ವರ್ಯಗೌಡ ದಂಪತಿಯನ್ನು ೮ ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ಆದೇಶಿಸಿತ್ತು. ಇದರ ಬೆನ್ನಲ್ಲೇ ಪೊಲೀಸರು ಐಶ್ವರ್ಯಗೌಡ ಮತ್ತು ಹರೀಶ್‌ನನ್ನು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಹೀಗಾಗಿ ಆರೋಪಿಗಳ ಪರ ವಕೀಲರು ನ್ಯಾಯಾಲಯಕ್ಕೆ ಜಾಮೀನು ಅರ್ಜಿ ಸಲ್ಲಿಸಿದ್ದಾರೆ.